ಅಧಿಕ ಶುಲ್ಕ ವಿಧಿಸದಂತೆ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸರ್ಕಾರ ತಾಕೀತು ಮಾಡಬೇಕು: ಹೈಕೋರ್ಟ್
ಬೆಂಗಳೂರು, ನ.15: ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸುವ ಆಸಕ್ತಿ ಇದ್ದರೆ ಹೆಚ್ಚುವರಿ ಶುಲ್ಕ ಸಂಗ್ರಹಿಸದಂತೆ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.
ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರನ್ನು ಒಳಗೊಂಡ ವಿಭಾಗೀಯಪೀಠ, ನಗರ ಮೂಲದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ಹರೀಶ್ ಜಿ ಹಾಗೂ ಇತರ 28 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿ ಈ ನಿರ್ದೇಶನ ನೀಡಿದರು.
ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ನಿಜವಾಗಿಯೂ ಆಸಕ್ತಿ ಹೊಂದಿದ್ದರೆ, ಶಾಸನಬದ್ಧ ಅಧಿಕಾರಿಗಳು ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಸಂಗ್ರಹಿಸದಂತೆ ಎಲ್ಲಾ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

2017-18ರಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಸೇರಿದ್ದ ಅರ್ಜಿದಾರ ವಿದ್ಯಾರ್ಥಿಗಳು, 2017-2021ರ ಅವಧಿಯಲ್ಲಿ ತಮ್ಮಿಂದ ಸಂಗ್ರಹಿಸಿದ ಹೆಚ್ಚುವರಿ ಶುಲ್ಕವನ್ನು ಮರುಪಾವತಿಸಲು ಕಾಲೇಜಿಗೆ ನಿರ್ದೇಶನವನ್ನು ಕೋರಿ ಅರ್ಜಿ ಸಲ್ಲಿಸಿದ್ದರು.
ಅಲ್ಲದೆ ಅವರು ಸರ್ಕಾರವೇ ನೇಮಕ ಮಾಡಿರುವ ಪ್ರವೇಶ ಮೇಲ್ವಿಚಾರಣಾ ಸಮಿತಿ (ಎಒಸಿ) ನಿಗದಿಪಡಿಸಿದ ಶುಲ್ಕಕ್ಕೆ ವಿರುದ್ಧವಾಗಿ ಅಧಿಕ ಹಣ ವಸೂಲು ಮಾಡಲಾಗುತ್ತಿದೆ ಎಂದು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.
ಶಿಕ್ಷಣ ಮಾರುಕಟ್ಟೆಯಂತಾಗಿದೆ: ಇದೇ ವೇಳೆ ನ್ಯಾಯಪೀಠ "ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದು ಮಾರುಕಟ್ಟೆಯನ್ನಾಗಿ ಮಾಡಿಕೊಳ್ಳಲಾಗಿದೆ. ಹಣ ಮಾಡುವ ಉದ್ದೇಶದಿಂದ ಸಂಸ್ಥೆಯನ್ನು ನಡೆಸುತ್ತಿದ್ದಾರೆ, ಅದಕ್ಕೆ ಕೋರ್ಟ್ ಅನುಮತಿಸಲಾಗುವುದಿಲ್ಲ, ಅದಕ್ಕೆ ಸರ್ಕಾರ ಕಡಿವಾಣ ಹಾಕಲೇಬೇಕಾಗುತ್ತದೆ," ಎಂದು ಹೇಳಿದೆ.

ಅಲ್ಲದೆ, ಕಾಲೇಜು ಆಡಳಿತ ಮಂಡಳಿಯ ಪರವಾಗಿ ಕೆಲವು ವಿದ್ಯಾರ್ಥಿಗಳು ಮಾಡಿದ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಪೀಠವು, ಸ್ವಯಂಪ್ರೇರಣೆಯಿಂದ ಹೆಚ್ಚುವರಿ ಶುಲ್ಕವನ್ನು ಪಾವತಿಸಲಾಗಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲವೆಂದು ಹೇಳಿದೆ.
"ಸಂಸ್ಥೆಯು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಉತ್ತಮ ಉದ್ದೇಶದಿಂದ ನಡೆಸುತ್ತಿದ್ದರೆ, ಎಲ್ಲಾ ನ್ಯಾಯಯುತವಾಗಿ, ಅವರು (ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಆಡಳಿತ) ಹೆಚ್ಚುವರಿ ಶುಲ್ಕವನ್ನು ಪಾವತಿಸದಂತೆ ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಬೇಕಿತ್ತು" ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
"ಸಂಸ್ಥೆಗಳಿಗೆ ನಿಜವಾಗಿಯೂ ಹಣಗಳಿಸುವ ಉದ್ದೇಶ ಇಲ್ಲದಿದ್ದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಿ, ಅವರು ಹೆಚ್ಚುವರಿ ಶುಲ್ಕವನ್ನು ಸ್ವೀಕರಿಸಬಾರದು ಮತ್ತು ಶಿಕ್ಷಣ ಸಂಸ್ಥೆಯಾಗಿರುವುದರಿಂದ 'ಗುರು'ಗಳಂತೆ ವರ್ತಿಸಬೇಕು" ಎಂದು ನ್ಯಾಯಪೀಠ ಕಿವಿಮಾತು ಹೇಳಿದೆ.












Click it and Unblock the Notifications