ಮಾನ್ಯತೆ ಹಿಂಪಡೆದ ಶಾಲೆಗಳಿಗೆ ಕರ್ನಾಟಕ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್
ಬೆಂಗಳೂರು, ಏ.25. ಮಾನ್ಯತೆ ಹಿಂಪಡೆದ ಶಾಲೆಗಳಿಗೆ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಅತ್ತ ಮಾನ್ಯತೆಯೂ ಕಳೆದುಕೊಂಡು ಇತ್ತ ತಮ್ಮ ಶಾಲೆಗಳ ಹೆಸರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲೂ ನಮೂದಿಸುತ್ತಿಲ್ಲವೆಂದು ನ್ಯಾಯಾಲಯದ ಮೊರೆ ಹೋಗಿದ್ದ ಖಾಸಗಿ ಶಾಲೆಗಳ ಪರ ಹೈಕೋರ್ಟ್ ನಿಂತಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೇರೊಂದು ಶಾಲೆಗಳಲ್ಲಿ ಪರೀಕ್ಷೆ ಬರೆಸಲಾಗಿದೆ. ಇದರಿಂದ, ಪರೀಕ್ಷಾ ಫಲಿತಾಂಶ ಪಟ್ಟಿ ಹಾಗೂ ಅಂಕಪಟ್ಟಿಯಲ್ಲಿ ನಮ್ಮ ಶಾಲೆಗಳ ಹೆಸರನ್ನು ಕೈಬಿಡುವ ಸಾಧ್ಯತೆ ಇದೆ. ಆದ್ದರಿಂದ, ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದ್ದವು.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಶೈಕ್ಷಣಿಕ ವರ್ಷದ ಕೊನೆಯಲ್ಲಿ ಮಾನ್ಯತೆ ಹಿಂಪಡೆಯಲಾಗಿರುವ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ವಿವೇಕನಗರದ ಶಾಂತಿ ನಿಕೇತನ ಪ್ರೌಢಶಾಲೆ ಸೇರಿ 8 ಶಾಲೆಗಳು, ಶಾಶ್ವತ ಮಾನ್ಯತೆ ಇದ್ದರೂ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಾಲೆಗಳ ಮಾನ್ಯತೆ ಹಿಂಪಡೆದಿವೆ ಎಂದು ಆಕ್ಷೇಪಿಸಿ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಎಸ್‌ಎಸ್‌ಎಲ್‌ಸಿ ಬೋರ್ಡ್‌ಗೆ ನ್ಯಾಯಾಲಯ ನಿರ್ದೇಶನ
ಅರ್ಜಿದಾರ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಂಕಪಟ್ಟಿ ಹಾಗೂ ಫಲಿತಾಂಶ ಪಟ್ಟಿಯಲ್ಲಿ ಆಯಾ ಶಾಲೆಗಳ ಹೆಸರು ನಮೂದಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ನಿರ್ದೇಶಕರು, ಎಸ್‌ಎಸ್‌ಎಲ್‌ಸಿ ಬೋರ್ಡ್‌ಗೆ ನ್ಯಾಯಾಲಯ ನಿರ್ದೇಶನ ನೀಡಿದೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿರುವ ವಿವಿಧ ಸುತ್ತೋಲೆ ಗಮನಿಸಿದರೆ, ಅರ್ಜಿದಾರ ಶಾಲೆಗಳು ಶಾಶ್ವತ ಮಾನ್ಯತೆ ಹೊಂದಿದ್ದವುಂದು ಕಂಡುಬರುತ್ತದೆ. ಅದೇ ಕಾರಣಕ್ಕೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡಿವೆ. 2021-2022ನೇ ಸಾಲಿನಲ್ಲಿ ಸಂಪೂರ್ಣ ತರಗತಿಗಳನ್ನು ನಡೆಸಲಾಗಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನೂ ತೆಗೆದುಕೊಂಡಿದ್ದಾರೆ. ಹೀಗಿರುವಾಗ ಅಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಗಳಲ್ಲಿ ಅವರ ಶಾಲೆಗಳ ಹೆಸರು ನಮೂದಿಸಲು ನಿರಾಕರಿಸುವುದು ಏಕಪಕ್ಷೀಯ ನಿರ್ಧಾರವಾಗಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರರ ವಾದವೇನು?:
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಅಡಿ ನೋಂದಾಯಿಸಿಕೊಂಡಿದ್ದು, 1ರಿಂದ 10ರವರೆಗಿನ ತರಗತಿಗಳನ್ನು ನಡೆಸುತ್ತಿದೆ. ಈ ಎಲ್ಲ ಶಾಲೆಗಳಿಗೂ 2006ರ ನ.2ರಿಂದ ಸರ್ಕಾರ ಶಾಶ್ವತ ಮಾನ್ಯತೆಯನ್ನೂ ನೀಡಿದೆ. ಅಂದಿನಿಂದ ಇಲ್ಲಿಯವರೆಗೂ ಶಿಕ್ಷಣ ಸಂಸ್ಥೆ ನಡೆಯುತ್ತಿವೆ. ಅಲ್ಲಿನ ವಿದ್ಯಾರ್ಥಿಗಳೂ ಇದುವರೆಗೂ ಯಾವುದೇ ಸಮಸ್ಯೆ ಇಲ್ಲದೆ ಪರೀಕ್ಷೆಗಳನ್ನು ಬರೆಯುತ್ತಾ ಬಂದಿದ್ದರು. ಆದರೆ, 2022ರ ಮಾ.22ರಂದು ಸರ್ಕಾರ ಏಕಾಏಕಿ ಸುತ್ತೋಲೆ ಹೊರಡಿಸಿ ಕಡ್ಡಾಯವಾಗಿ ಶಾಲೆಗಳ ಮಾನ್ಯತೆ ನವೀಕರಣ ಮಾಡಿಕೊಳ್ಳುವಂತೆ ಹೇಳಿದೆ ಎಂದರು.
ಅರ್ಜಿದಾರ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಸಲಾಗಿದೆ. ವಿದ್ಯಾರ್ಥಿಗಳ ಅಂಕಪಟ್ಟಿಗಳಲ್ಲಿ ಅವರು ವಿದ್ಯಾಭ್ಯಾಸ ಮಾಡಿದ ಶಾಲೆಗಳ ಹೆಸರು ಕೈಬಿಟ್ಟು, ಪರೀಕ್ಷೆ ಬರೆದ ಶಾಲೆಗಳ ಹೆಸರು ಹಾಕುವ ಸಾಧ್ಯತೆ ಇದೆ. ಇದರಿಂದ, ಶಾಲೆಗಳ ಘನತೆಗೆ ಕುಂದುಂಟಾಗುತ್ತದೆ. ಆದ್ದರಿಂದ, ವಿದ್ಯಾರ್ಥಿಗಳ ಅಂಕಪಟ್ಟಿಗಳಲ್ಲಿ ಶಾಲೆಗಳ ಹೆಸರು ತೋರಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಬೇಕೆಂದು ಕೋರಿದ್ದರು.












Click it and Unblock the Notifications