Heavy rain: ಶುರುವಾದ ರಣ ಮಳೆ, ಹಾವೇರಿ, ಹುಬ್ಬಳ್ಳಿ-ಧಾರವಾಡದಲ್ಲಿ ಬೆಂಗಳೂರಿನಂತೆ ಪ್ರವಾಹ ಸ್ಥಿತಿ
ಹುಬ್ಬಳ್ಳಿ, ಅಕ್ಟೋಬರ್ 17: ಕರ್ನಾಟಕದ ವಿವಿಧ ಕಡೆಗಳಲ್ಲಿ ಜೋರು ಮಳೆ ಅಬ್ಬರಿಸುತ್ತಿದೆ. ನಿತ್ಯ ಕೆಲವು ಭಾರಿಯಾದರೂ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ದಾಖಲಾಗುತ್ತಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ, ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು, ನಗರಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಸ್ತೆಗಳು ಕೆರೆಯಂತಾಗಿ, ಜನ ಜೀವನ ಅಸ್ತವ್ಯಸ್ತವಾಗಿದೆ. ಜಮೀನುಗಳಿಗೆ, ರಸ್ತೆಗಳಿಗೆ ಕಾಲಿಡದಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆ ಮಳೆ ಮುಂದುವರಿಯಲಿದೆ.
ಹುಬ್ಬಳ್ಳಿಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿದ್ದ ವರುಣ, ಗುರುವಾರ ಮಧ್ಯಾಹ್ನವೇ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಬೆಳಗ್ಗೆಯಿಂದಲೇ ಆಗಾಗ ಜಿಟಿ ಜಿಟಿ ಮಳೆ ಬರುತ್ತಲೇ ಇತ್ತು. ಮಧ್ಯಾಹ್ನದ ಹೊತ್ತಿಗೆ ಮತ್ತಷ್ಟು ಚುರುಕಾದ ಮಳೆ ವ್ಯಾಪಕವಾಗಿ ಗಂಟೆ ಗಟ್ಟಲೇ ಸುರಿಯಿತು.

ಹುಬ್ಬಳ್ಳಿ ಜೊತೆ ಜೊತೆಗೆ ಹಾವೇರಿ, ಧಾರವಾಡ, ಲಕ್ಷೇಶ್ವರ, ಶಿಗ್ಲಿ, ಗದಗ ಜಿಲ್ಲೆಯ ಕೆಲವು ಭಾಗಗಳು, ಹಾನಗಲ್, ಶಿರ್ಸಿ ಹೀಗೆ ವಿವಿಧಡೆ ಜೋರು ಮಳೆ ಗುರುವಾರ ದಾಖಲಾಯಿತು. ಬೆಂಗಳೂರಿನಲ್ಲಿ ಬಿದ್ದ ಮಳೆಗೆ ಆದ ಅವಾಂತರಗಳು, ಸಮಸ್ಯೆಗಳು ಈ ಭಾಗದಲ್ಲೂ ಆಗಿವೆ. ಇಲ್ಲಿನ ಜನರು ಈ ನಿಲ್ಲುವುದು ಯಾವಾಗ ಎಂದು ಕಾಯುತ್ತಿದ್ದಾರೆ.
ಹುಬ್ಬಳ್ಳಿ, ಹಾವೇರಿ ಭಾಗದಲ್ಲಿ ಜನಜೀವನ ಅಸ್ತವ್ಯಸ್ತ
ಕೆಲವು ದಿನಗಳಿಂದ ಬಿಟ್ಟು ಬಿಡದೇ ಬರುತ್ತಿರುವ ಮಳೆಯಿಂದಾಗಿ ಹುಬ್ಬಳ್ಳಿಯಲ್ಲಿ ರಸ್ತೆಗುಂಡಿಗಳಲ್ಲಿ, ಎಲ್ಲೆಂದರಲ್ಲಿ ನೀರು ನಿಂತಿದೆ. ವಾಹನ ಸವಾರರು ಸಂಚಾರ ತೊಂದರೆ ಎದುರಿಸುತ್ತಿದ್ದಾರೆ. ಸರ್ಕಾರಿ ಯೋಜನೆಗಳ ಸ್ಥಳದಲ್ಲಿ, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಧಾರವಾಡ ವಿವಿಧೆಡೆ ಮಳೆಯಿಂದಾಗಿ ಜನರು ರೋಸಿಹೋಗಿದ್ದಾರೆ. ವ್ಯಾಪಾರ ವಹೀವಾಟಿನ ಮೇಲೆ, ಸಾರ್ವಜನಿಕರ ನಿತ್ಯದ ಕೆಲಸ ಕಾರ್ಯಗಳ ಮೇಲೆ ಹಿಂಗಾರು ಮಳೆ ಪರಿಣಾಮ ಬೀರಿದೆ.

ಇನ್ನೂ ಹಾವೇರಿ ಬಸ್ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳು ಜಲಾವೃತಗೊಂಡಿದ್ದು ಕಂಡು ಬಂತು. ಬಸ್ ನಿಲ್ದಾಣ ಬಳಿ ಹಾವೇರಿ-ಹಾನಗಲ್ ರಸ್ತೆಯಲ್ಲಿ ಮಳೆ ನೀರು ಚರಂಡಿ ನೀರಿನ ಜೊತೆ ಉಕ್ಕಿ ಹರಿದು ನಂದಿಯಂತಾಗಿತ್ತು. ಕೇವಲ ಬೆಂಗಳೂರು ಮಾತ್ರವಲ್ಲ, ಹಾವೇರಿ ಭಾಗದಲ್ಲಿ ಜೋರು ಮಳೆ ಆಗುತ್ತಿದ್ದು, ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತ ಕಡೆಯು ಸರ್ಕಾರ ಗಮನ ಹರಿಸಬೇಕಿದೆ ಎಂಬ ಮಿಮ್ಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.
ಇಂದು ಗುರುವಾರ ಶೀಗೆ ಹುಣ್ಣಿಮೆ ಇದ್ದು, ನಿರಂತರ ಧಾರಾಕಾರ ಮಳೆಯಿಂದಾಗಿ ರೈತರು ಹೊಲಗಳಿಗೆ ತೆರಳಲು ಅಡ್ಡಿ ಉಂಟಾಗಿದೆ. ಹೊಲಗಳಿಗೆ ಕಾಲಿಡದಂತೆ ಅತೀವೃಷ್ಟಿ ಆಗಿದೆ. ಮೆಕ್ಕೆ ಜೋಳ, ಹೆಸರು ಒಕ್ಕಲು ಮಾಡುವ ರೈತರಿಗೆ ಮಳೆ ಕಿರಿ ಕಿರಿ ನೀಡಿದೆ. ಜಿಲ್ಲೆಯ ಎಸ್‌ಪಿ ರಸ್ತೆ, ಕೆರಿಮತ್ತಿಹಳ್ಳಿ ಕಡೆಗೆ ವಾಹನ ಸಂಚರಿಸಲು ಆಗದಂತೆ ರಸ್ತೆಗಳ ಮೇಲೆ ನೀರು ನಿಂತದ್ದು ಕಂಡು ಬಂತು.
ಮುಂದಿನ ಕೆಲವು ಅಬ್ಬರದ ಮಳೆ ಮುಂದುವರಿಕೆ
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಹೀಗೆ ಮುಂದುವರಿಯಲಿದೆ. ಇಂದು ತಡರಾತ್ರಿವರೆಗೆ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವ್ಯಾಪಕ ಮಳೆ ಆಗಲಿದೆ. ಹೀಗಾಗಿ ಯೆಲ್ಲೋ ಅಲರ್ಟ್ ನೀಡಿರುವ ಹವಾಮಾನ ಇಲಾಖೆಯು ರಾಜ್ಯದಲ್ಲಿ ಮೂರು ದಿನ ಭಾರಿಯಿಂದ ಅತೀ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಧಾರವಾಡ: ಬೆಣ್ಣಿಹಳ್ಳ ಸೇರಿ ವಿವಿಧ ಹಳ್ಳ ಅಗಲೀಕರಣ
ಧಾರವಾಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಈ ವೇಳೆ ಉಕ್ಕಿ ಹರಿಯುವ ಅಣ್ಣಿಗೇರಿ ತಾಲೂಕಿನ ಯರನಹಳ್ಳಿ, ರಾಡಿಹಳ್ಳ ಹಾಗೂ ಬೆಣ್ಣೆಹಳ್ಳದ ನೀರು ಅಕ್ಕಪಕ್ಕದ ಗ್ರಾಮಗಳ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟು ಮಾಡುತ್ತಿದೆ. ಇದನ್ನು ತಪ್ಪಿಸಲು ಬೆಣ್ಣೆಹಳ್ಳದ ಆಗಲೀಕರಣದ ಜೊತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಎನ್. ಎಚ್. ಕೋನರಡ್ಡಿ ಹೇಳಿದರು.
ಅಣ್ಣಿಗೇರಿ ತಾಲೂಕಿನ ನಲವಡಿ, ಮಣಕವಾಡ, ಶಿಶ್ವಿನಹಳ್ಳಿ, ನಾಗರಹಳ್ಳಿ ಗ್ರಾಮಗಳಿಗೆ ಮಣಕವಾಡ-ಶಿಶ್ವಿನಹಳ್ಳಿ ನಡುವೆ ಇರುವ ಕ್ವಾಡಿಗಿ ಹಳ್ಳ, ಶಿಶ್ವಿನಹಳ್ಳಿ-ಇಂಗಳಹಳ್ಳಿ ಮಧ್ಯೆ ಇರುವ ಯರನಹಳ್ಳ ಹಾಗೂ ಬೆಣ್ಣೆ ಹಳ್ಳದಿಂದ ಆಗುವ ತೊಂದರೆ ಬಗ್ಗೆ ಗುರುವಾರ ಪರಿಶೀಲನೆ ಪರಿಶೀಲನೆ ಮಾಡಿ ಪ್ರತಿಕ್ರಿಯಿಸಿದರು.












Click it and Unblock the Notifications