ನಾನು ರಾಹುಲ್ ಗಾಂಧಿ ಫ್ಯಾನ್ ಎಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ಶಿವಮೊಗ್ಗ, ಮೇ 2: ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಬಾಮೈದ ಮಧು ಬಂಗಾರಪ್ಪ ಪರ ಪ್ರಚಾರ ನಡೆಸುತ್ತಿರುವ ಸ್ಟಾಂಡರ್‌ವುಡ್ ಸ್ಟಾರ್ ಶಿವರಾಜ್ ಕುಮಾರ್ ಅವರು ನಾನು ರಾಹುಲ್ ಗಾಂಧಿ ಅಭಿಮಾನಿ ಎಂದು ಹೇಳಿದ್ದಾರೆ.
ಸೊರಬದಲ್ಲಿ ಪ್ರಚಾರಕ್ಕೆ ಬಂದಿರುವ ಅವರು ಮಾತನಾಡಿ, ನಾನು ರಾಹುಲ್ ಗಾಂಧಿಯವರ ಅಭಿಮಾನಿಯಾಗಿ ಇಲ್ಲಿಗೆ ಬಂದಿದ್ದೇನೆ. ಅವರು ಇತ್ತೀಚೆಗೆ ಭಾರತ್ ಜೋಡೋ ಯಾತ್ರೆಯನ್ನು ಮಾಡಿದರು, ಅಲ್ಲಿ ಅವರು ದೇಶಾದ್ಯಂತ ನಡೆದರು, ನಾನು ಯಾತ್ರೆಯಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ.

ಅಭಿಮಾನಿ ದೇವರುಗಳಿಗೆ ನಮಸ್ಕಾರ ಎಂದು ಮಾತು ಆರಂಭಿಸಿದ ಅವರು, ನಾನು ನಿಮ್ಮೆಲ್ಲರಂತೆ ಇಂದು ರಾಹುಲ್ ಗಾಂಧಿ ಅವರ ಅಭಿಮಾನಿ ಇಲ್ಲಿಗೆ ಬಂದಿದ್ದೇನೆ. ಅವರು ಇತ್ತೀಚೆಗೆ ಭಾರತ್ ಜೋಡೆ ಯಾತ್ರೆ ಮಾಡಿದರು. ಇದು ನನಗೆ ತುಂಬ ಸ್ಪೂರ್ತಿ ನೀಡಿತು. ನನಗೆ ಫಿಟ್‌ನೆಸ್ ಎಂದರೆ ತುಂಬಾ ಇಷ್ಟ. ಫಿಟ್‌ನೆಸ್ ಜೊತೆಯಲ್ಲಿ ಅವರು ಒಂದು ಉತ್ತಮ ಉದ್ದೇಶದೊಂದಿಗೆ ಇಡೀ ದೇಶವನ್ನು ಕಾಲ್ನಡಿಯಲ್ಲಿ ಕ್ರಮಿಸಿರುವುದು ತುಂಬಾ ಉತ್ತೇಜನ ನೀಡಿದೆ ಎಂದರು.
ಮಂಗಳವಾರ ಕಾಂಗ್ರೆಸ್ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಮೈಸೂರಿನಲ್ಲಿ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಹೆಸರಿನ ಸುಸಜ್ಜಿತ ಫಿಲ್ಮ್ ಸಿಟಿ ನಿರ್ಮಾಣ ಮಾಡುತ್ತೇವೆ. ಚಿತ್ರೋದ್ಯಮ ಸಾವಿರಾರು ಜನರಿಗೆ ಉದ್ಯೋಗ ನೀಡುವ ರಂಗ, ಹಲವು ಪ್ರತಿಭೆಗಳನ್ನು ಹುಟ್ಟುಹಾಕುವ ರಂಗ, ಕನ್ನಡ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ತಯಾರಾಗಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಪೂರಕವಾದ ವಾತಾವರಣ ಸೃಷ್ಟಿ ಮಾಡುತ್ತೇವೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು. ಬಳಿಕ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಶಿವರಾಜ್ ಕುಮಾರ್ ಅವರು ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಸೇವಾ ಮನೋಭಾವ ನನಗೆ ಇಷ್ಟ. ಅವರನ್ನು ಗೆಲ್ಲಿಸಿ, ಮಧು ಗೆದ್ದರೆ ಸೊರಬಕ್ಕೆ ಬಂದು ನಿಮ್ಮೊಂದಿಗೆ ಕುಣಿದು ಕುಪ್ಪಳಿಸುವೆ ಎಂದು ಹೇಳಿದ್ದರು.
ಸೊರಬ ಕ್ಷೇತ್ರದ ಅಭಿವೃದ್ದಿಗಾಗಿ ಮಧು ಅವರು ಸಾಕಷ್ಟು ಶ್ರಮಿಸಿದ್ದಾರೆ. ತಾಲೂಕಿನ ಜನತೆಯ ಕಷ್ಟ ಸುಖಗಳಲ್ಲಿ ಸದಾ ಇರುವುದರಿಂದ ಜನತೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ವಿಶ್ವಾಸ ಇದೆ. ಮಧು ಬಂಗಾರಪ್ಪ ಗೆಲುವು ಸಾಧಿಸಿದ ನಂತರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರೊಂದಿಗೆ ಹಾಡಿ ಕುಣಿದು ಕುಪ್ಪಳಿಸುತ್ತೇನೆ ಎಂದು ಹೇಳಿದ್ದರು.
ಇನ್ನೂ ನನ್ನ ಪತ್ನಿ ಗೀತಾ ಕಾಂಗ್ರೆಸ್ ಸೇರಿದ್ದಾರೆ. ಎಲ್ಲಾ ಪಕ್ಷಗಳಲ್ಲಿ ನನ್ನ ಸ್ನೇಹಿತರಿದ್ದಾರೆ ಮತ್ತು ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಅವರ ಪರ ಮಾತ್ರ ಪ್ರಚಾರ ಮಾಡುತ್ತಿದ್ದೇನೆ. ಶೂಟಿಂಗ್ ಶೆಡ್ಯೂಲ್‌ಗಳಲ್ಲಿ ಬ್ಯುಸಿಯಾಗಿರುವ ಕಾರಣ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಮಯ ಸಿಗುತ್ತಿಲ್ಲ ಹೀಗಾಗಿ ಪ್ರಚಾರಕ್ಕೆ ಸೀಮಿತವಾಗಿದ್ದೇನೆ ಎಂದು ರಾಜಕೀಯಕ್ಕೆ ಬರಲ್ಲ ಎಂದು ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದರು.
ಕೇವಲ ಸೊರಬ ಕ್ಷೇತ್ರದಲ್ಲಿ ಅಷ್ಟೇ ಪ್ರಚಾರ ನಡೆಸದೇ, ರಾಜ್ಯದ ಇತರೆ ಕ್ಷೇತ್ರಗಳಾದ ಸಾಗರ, ತೀರ್ಥಹಳ್ಳಿ, ಬೀದರ್, ಸಿದ್ದರಾಮಯ್ಯ, ಶಿರಸಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್, ಜಗದೀಶ್ ಶೆಟ್ಟರ್, ವಿಜಯ್ ಸಿಂಗ್, ಅಶೋಕ್ ಖೇಣಿ ಹುಬ್ಬಳ್ಳಿಯ ಶೆಟ್ಟರ್ ಪ್ರತಿನಿಧಿಸುವ ಕ್ಷೇತ್ರದಲ್ಲೂ ಪ್ರಚಾರ ನಡೆಸುತ್ತೇನೆ. ಜಗದೀಶ್ ಶೆಟ್ಟರ್ ಅವರು ಡಾ.ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಹುಬ್ಬಳ್ಳಿಯಲ್ಲಿ ಶೂಟಿಂಗ್ ಇದ್ದಾಗಲೆಲ್ಲ ಶೆಟ್ಟರ್ ಮನೆಗೆ ತಿಂಡಿ ತಿಂದು ಬರುತ್ತಿದ್ದರು. ಶೆಟ್ಟರ್ ಅವರು ನಮ್ಮ ಕುಟುಂಬಸ್ಥರು ಇದ್ದ ಹಾಗೆ. ಹಾಗಾಗಿ ಅವರ ಕ್ಷೇತ್ರದಲ್ಲೂ ಪ್ರಚಾರ ನಡೆಸುತ್ತೇನೆ. ನನಗೆ ರಾಜಕೀಯ ತಿಳಿದಿಲ್ಲ. ನಾನು ರಾಜಕೀಯಕ್ಕೆ ಸೇರುವುದು ಇಲ್ಲ. ನಾನು ಕೇವಲ ಪ್ರಚಾರವನ್ನಷ್ಟೇ ಮಾಡುತ್ತೇನೆ ಎಂದು ಹೇಳಿದ್ದರು.












Click it and Unblock the Notifications