PIL ಆಗಿ ಪರಿವರ್ತನೆಗೊಂಡ ಬಿಜೆಪಿ ನಾಯಕರ ದ್ವೇಷ ಭಾಷಣ ವಿರುದ್ಧದ ಅರ್ಜಿ
ಬೆಂಗಳೂರು, ಏ.19: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪದೇಪದೇ ಮುಸ್ಲಿಂ ಸಮದಾಯದ ವಿರುದ್ಧ ದ್ವೇಷಕಾರುವ ಹಾಗೂ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕರು ಮತ್ತು ಸಂಸದರ ವಿರುದ್ಧ ಹೂಡಲಾಗಿರುವ ಅರ್ಜಿಯನ್ನು ಪಿಐಎಲ್ ಆಗಿ ಪರಿವರ್ತಿಸಿಕೊಳ್ಳಬೇಕೆಂದು ಹೈಕೋರ್ಟ್‌ನಲ್ಲಿ ಮನವಿ ಮಾಡಲಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಿವಾಸಿ ಮೊಹಮ್ಮದ್ ಖಲೀವುಲ್ಲಾ ಸಲ್ಲಿಸಿರುವ ರಿಟ್ ಅರ್ಜಿ ಸೋಮವಾರ ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ, ಅರ್ಜಿದಾರರು ಹೇಗೆ ಬಾಧ್ಯಸ್ಥರೆಂದು ಕಳೆದ ವಿಚಾರಣೆ ವೇಳೆ ಕೇಳಲಾಗಿತ್ತು, ಅದಕ್ಕೆ ನಿಮ್ಮ ಉತ್ತರವೇನು ಎಂದು ಅರ್ಜಿದಾರ ವಕೀಲರನ್ನು ಕೇಳಿದರು.
ಅವರು, ಉದ್ದೇಶಪೂರ್ವಕವಾಗಿ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಟ್ಟುಕೊಂಡು ಅವರನ್ನು ಅಪರಾಧಿಗಳಂತೆ ಬಿಂಬಿಸುವ ಪ್ರಯತ್ನ ನಡೆದಿದೆ. ಇದನ್ನು ಪಿಐಎಲ್ ಆಗಿ ಪರಿವರ್ತಿಸಲು ಆದೇಶಸಬೇಕೆಂದು ಕೋರಿದರು.
ಆ ಮನವಿ ಪರಿಗಣಿಸಿದ ನ್ಯಾಯಪೀಠ, ಈ ತಕರಾರು ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸುವ ಮನವಿ ಕುರಿತು ಅರ್ಜಿದಾರರು ಸೂಕ್ತ ಮೆಮೊ ಸಲ್ಲಿಸಬೇಕು. ಆ ಮೆಮೊವನ್ನು ಮುಖ್ಯ ನ್ಯಾಯಮೂರ್ತಿ ಮುಂದೆ ಮಂಡಿಸಬೇಕು. ಮುಖ್ಯ ನ್ಯಾಯಮೂರ್ತಿಗಳ ಸೂಚನೆ ಅನುಸಾರ ಅರ್ಜಿಯನ್ನು ರೋಸ್ಟರ್ ಪೀಠದ (ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುವ ಪೀಠ) ಮುಂದೆ ವಿಚಾರಣೆಗೆ ನಿಗದಿಪಡಿಸಬಹುದು ಎಂದು ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶಿಸಿತು.

ಯಾರು ಯಾರ ಮೇಲೆ ಆರೋಪ?:
ಅರ್ಜಿಯಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ,ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಎಂ.ಪಿ. ರೇಣುಕಾಚಾರ್ಯ, ಸಿ.ಟಿ.ರವಿ, ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಮತ್ತು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿ ಹಲವು ಮುಖಂಡರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಜೊತೆಗೆ ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ, ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸಚಿವೆ ಶೋಭಾಕರಂದ್ಲಾಜೆ ಸೇರಿದಂತೆ ಬಿಜೆಪಿಯ ಶಾಸಕರು, ಸಚಿವರು ಹಾಗೂ ಸಂಸದರನ್ನು ಪ್ರತಿವಾದಿ ಮಾಡಲಾಗಿದೆ.
ಹಾಗೇನಾದರೂ ನ್ಯಾಯಾಲಯ ಈ ಅರ್ಜಿಯನ್ನು ಪರಿಗಣಿಸಿ ಬಿಜೆಪಿ ಶಾಸಕರು, ಸಚಿವರ ವಿರುದ್ಧ ಕ್ರಮಕ್ಕೆ ಮುಂದಾದರೆ ಆಗ ಕೋಮು ಭಾವನೆ ಕೆರಳಿಸುವ ಹೇಳಿಕೆಗಳಿಗೆ ಬ್ರೇಕ್ ಬೀಳಲಿದೆ.
ಈಗಾಗಲೇ ಶಿವಮೊಗ್ಗದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಂಬಂಧ ಸಚಿವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ವರದಿ ಸಲ್ಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮುಸ್ಲಿಂ ಸಮುದಾಯವೇ ಟಾರ್ಗೆಟ್:
ಸಚಿವ ಕೆ.ಎಸ್.ಈಶ್ವರಪ್ಪ ಸೇರಿಹಲವು ಬಿಜೆಪಿಯ ರಾಜ್ಯ ಮತ್ತು ಕೇಂದ್ರದ ಮುಖಂಡರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ರಾಜ್ಯಾದ್ಯಂತ ಉದ್ದೇಶಪೂರ್ವಕವಾಗಿ ಪದೇ ಪದೇ ಪ್ರಚೋದನಾಕಾರಿ ಮತ್ತು ದ್ವೇಷಕಾರುವ ಭಾಷಣ ಮಾಡುತ್ತಿದ್ದಾರೆ. ಆ ಮೂಲಕ ಸಮಾಜದಲ್ಲಿ ತಾರತಮ್ಯ ಉಂಟು ಮಾಡಲು, ಕೋಮುಭಾವನೆ ಹುಟ್ಟುಹಾಕಲು ಮತ್ತು ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಸಮಾಜದಲ್ಲಿ ಕೋಮು ದ್ವೇಷ ಭಾವನೆ ಕೆರಳಿಸುವ ಮತ್ತು ಅಶಾಂತಿ ಮೂಡಿಸುವುದನ್ನು ತಡೆಯಲು ತೆಶೇನ್ ಪುನವಲ್ಲಾ ಮತ್ತು ಕೇಂದ್ರ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿ ರೂಪಿಸಿದೆ. ಅದರಂತೆ ಕೆ.ಎಸ್.ಈಶ್ವರಪ್ಪ ಸೇರಿದಂತೆ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾವನೆ ಕೆರಳಿಸುವ ಹೇಳಿಕೆ ನೀಡುತ್ತಿರುವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಮಾ.28ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಪತ್ರ ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
Recommended Video
ಕಾನೂನು ಕ್ರಮಕ್ಕೆ ಮನವಿ: ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು. ಸುಪ್ರಿಂಕೋರ್ಟ್ ಆದೇಶ ಪ್ರಕಾರ ಪ್ರತಿವಾದಿ ಬಿಜೆಪಿ ನಾಯಕರ ವಿರುದ್ಧ ಕ್ರಮ ಜರುಗಿಸದೆ ಕರ್ತವ್ಯ ಲೋಪ ಎಸಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು.
ದ್ವೇಷ ಪ್ರಚೋದಿಸುವ ಹೇಳಿಕೆ ನೀಡಿದವರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನ್ಯಾಯಾಲಯವೊಂದನ್ನು ಗೊತ್ತುಪಡಿಸಬೇಕು. ಆ ನ್ಯಾಯಾಲಯವು ದಿನವಹಿ ಆಧಾರದ ಮೇಲೆ ವಿಚಾರಣೆ ನಡೆಸಿ ಆರು ತಿಂಗಳ ಒಳಗೆ ಪ್ರಕರಣ ವಿಲೇವಾರಿ ಮಾಡಲು ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.












Click it and Unblock the Notifications