ದ್ವೇಷ ಭಾಷಣ: ಬಂಧನ ಭೀತಿಯಿಂದ ಚಕ್ರವರ್ತಿ ಸೂಲಿಬೆಲೆ ಪಾರು
ಬೆಂಗಳೂರು, ನವೆಂಬರ್ 17: ಕೋಮು ದ್ವೇಷ ಭಾವನೆ ಪ್ರಚೋದಿಸಲು ಪ್ರಯತ್ನಿಸಿದ ಆರೋಪದ ಮೇಲೆ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾರವಾರ ಗ್ರಾಮಾಂತರ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
"ಯಾವಾಗ ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಾರೋ ಆ ಸಂದರ್ಭದಲ್ಲಿ ಹಿಂದುಗಳು ಬದುಕುವುದು ಕಷ್ಟ" ಎಂಬುದಾಗಿ ಹೇಳಿಕೆ ನೀಡುವ ಮೂಲಕ ಹಿಂದೂ ಹಾಗೂ ಮುಸ್ಲಿಂ ಧರ್ಮದವರ ಮಧ್ಯೆ ದ್ವೇಷ ಭಾವನೆ ಬಿತ್ತುತ್ತಿದ್ದಾರೆಂದು ಆರೋಪಿಸಲಾಗಿದೆ. ಇದೀಗ ಪ್ರಕರಣಕ್ಕೆ ನ್ಯಾಯಾಲಯ ತಡೆ ನೀಡಿರುವುದರಿಂದ ಸೂಲಿಬೆಲೆ ಬಂಧನ ಭೀತಿಯಿಂದ ಪಾರಾಗಿದ್ದಾರೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರ ಪೀಠ ಈ ಆದೇಶ ಮಾಡಿದೆ. ರಾಜಕೀಯ ಪ್ರೇರಿತ ಕ್ರಮ: ಅರ್ಜಿದಾರರ ಪರ ಹಿರಿಯ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಅರ್ಜಿದಾರರು ಸಮಾಜದ ಯಾವುದೇ ವರ್ಗಗಳ ನಡುವೆ ದ್ವೇಷ ಹಾಗೂ ವೈಮನ್ಸು ಉಂಟು ಮಾಡುವ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ. ಸರ್ಕಾರವು ಸಮಾಜದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಸುತ್ತಿದೆ ಎಂಬ ಕಾರಣಕ್ಕೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರಷ್ಟೇ. ಅದೂ ಸಹ ಸಂವಿಧಾನದ ಪರಿಚ್ಛೇದ 19ರ ಅಡಿಯಲ್ಲಿ ಲಭ್ಯವಿರುವ ಅಭಿವ್ಯಕ್ತ ಸ್ವಾತಂತ್ರ್ಯದ ವ್ಯಾಪ್ತಿ ಅಡಿಯೇ ಮಾತನಾಡಿದ್ದಾರೆ ಎಂದರು.
ಅಲ್ಲದೆ, ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸರ್ಕಾರವು ನಡೆದುಕೊಳ್ಳುತ್ತಿರುವ ಧೋರಣೆ ಬಗ್ಗೆ ಅರ್ಜಿದಾರರು ಉತ್ತರ ನೀಡಿರುವುದನ್ನು ಮುಂದಿಟ್ಟುಕೊಂಡು ಪೊಲೀಸರು ದುರುದ್ದೇಶದಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಕ್ರಮ ಎಂದು ದೂರಿದರು. ಸಮಾಜದಲ್ಲಿ ದ್ವೇಷ ಉಂಟು ಮಾಡುವ ಯಾವುದೇ ಉದ್ದೇಶ ಸಹ ಅರ್ಜಿದಾರರಿಗೆ ಇಲ್ಲ. ಆದ್ದರಿಂದ ಎಫ್‌ಐಆರ್‌ಗೆ ತಡೆ ನೀಡಬೇಕು ಎಂದು ಕೋರಿದರು. ಈ ಮನವಿಯನ್ನು ನ್ಯಾಯಪೀಠವು ಪುರಸ್ಕರಿಸಿದ್ದು, ಅರ್ಜಿ ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಚಕ್ರವರ್ತಿ ಸೂಲಿಬೆಲೆ 2013ರ ಅ.3ರಂದು ಕಾರವಾರ ತಾಲೂಕಿನ ಕಡವಾಡದ ಭೋವಿವಾಡಾದಲ್ಲಿರುವ ಆದಿಮಾಯಿ ದೇವಸ್ಥಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪತ್ರಿಕಾಗೋಷ್ಟಿ ನಡೆಸಿದ್ದ ಅವರು, "ಯಾವಾಗ ಸಿದ್ದರಾಮಯ್ಯ ಅವರು ಆಧಿಕಾರಕ್ಕೆ ಬರುತ್ತಾರೋ ಆ ಸಂದರ್ಭದಲ್ಲಿ ಹಿಂದೂಗಳಿಗೆ ಬದುಕುವುದು ಕಷ್ಟವಾಗಿದೆ. ಮುಸಲ್ಮಾನರಿಗೆ ಸಿದ್ದರಾಮಯ್ಯನವರು ಒಂದು ರೀತಿಯ ಅಭಯ ಹಸ್ತಕೊಟ್ಟು ನಾನೀದ್ದೀನಿ ನಿಮ್ಮ ಜೊತೆ ಅಂತ ಎಲ್ಲಿಯವರೆಗೆ ಹೇಳುತ್ತಾರೋ ಅಲ್ಲಿಯವರೆಗೆ ಈ ರೀತಿಯ ಕೃತ್ಯಗಳು ನಿರಂತರವಾಗಿ ಇರುತ್ತದೆ" ಎಂದು ಹೇಳಿಕೆ ನೀಡಿದ್ದರು.
ಈ ಕುರಿತು ಕಾರವಾರ ಗ್ರಾಮೀಣಾ ಠಾಣೆಯ ಗುಪ್ತಚರ ವಿಭಾಗದ ಮುಖ್ಯಪೇದೆ ಉಲ್ಲಾಸ್ ತೋಕು ನಾಯ್ಕ ಅವರು ನೀಡಿದ ದೂರು ಆಧರಿಸಿ, 2023ರ ಅ.5ರಂದು ಪೊಲೀಸರು (ಕಾರವಾರ ಗ್ರಾಮೀಣಾ ಠಾಣೆ) ಭಾರತೀಯ ದಂಡ ಸಂಹಿತೆ ಸೆಕ್ಷನ್ 505(2)ಎಫ್‌ಐಆರ್ ದಾಖಲಿಸಿದ್ದರು.
ಹಿಂದೂ ಮತ್ತು ಮುಸ್ಲಿಂ ಧರ್ಮದವರು ಹಾಗೂ ಸಮಾಜದಲ್ಲಿನ ವಿವಿಧ ವರ್ಗಗಳ ನಡುವೆ ವೈರತ್ವ, ದ್ವೇಷ ಮತ್ತು ವೈಮನಸ್ಸು ಉಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ ಆರೋಪ ಚಕ್ರವರ್ತಿ ಸೂಲಿಬೆಲೆ ಮೇಲಿದೆ. ಪ್ರಕರಣವು ಕಾರವಾರ ಹಿರಿಯ ಸಿವಿಲ್ ಮತ್ತು 2ನೇ ಹೆಚ್ಚುವರಿ ಜೆಂಎಫ್‌ಸಿ ನ್ಯಾಯಾಲಯದ ವಿಚಾರಣಾ ಹಂತದಲ್ಲಿದೆ. ಇದರಿಂದ ಎಫ್‌ಐಆರ್ ರದ್ದು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.












Click it and Unblock the Notifications