ಹಾಸನ ಟಿಕೆಟ್ ಫೈಟ್: ಭವಾನಿ, ಸ್ವರೂಪ್ ಗೂ ಇಲ್ಲ ಟಿಕೆಟ್: ದೊಡ್ಡ ಗೌಡರ ಹೊಸ ಪ್ಲಾನ್ ಏನು?
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಗೊಂದಲಕ್ಕೆ ತೆರೆ ಎಳೆಯಲು ದೇವೇಗೌಡು ಹೊಸ ಸೂತ್ರವನ್ನ ಪ್ರಯೋಗ ಮಾಡಿದ್ದು, ಮೂರನೇ ಹೆಸರು ಕೇಳಿ ಬರುತ್ತಿದೆ.
ಹಾಸನ,ಮಾರ್ಚ್ 15: ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ದಳಪತಿಗಳು ಈಗಾಗಲೇ 93 ಅಭ್ಯರ್ಥಿಗಳನ್ನ ಅಂತಿಮಗೊಳಿಸಿದ್ದು, ಹಾಸನ ವಿಧಾನಸಭಾ ಕ್ಷೇತ್ರವೇ ದೊಡ್ಡ ಕಗ್ಗಂಟಾಗಿದೆ.
ಹಾಸನ ಅಭ್ಯರ್ಥಿ ಘೋಷಣೆಗೂ ಮುನ್ನ ಭವಾನಿ ರೇವಣ್ಣ ಹಾಗೂ ಸ್ವರೂಪ್ ಪ್ರಕಾಶ್ ಅವರು ಬಿರುಸಿನ ಪ್ರಚಾರ ಶುರು ಮಾಡಿದ್ದು, ಈ ವಿಚಾರವಾಗಿ ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ದೊಡ್ಡ ಗೌಡು ಹಾಸನ ವಿಚಾರವಾಗಿ ಅಖಾಡಕ್ಕಿಳಿದಿದ್ದಾರೆ.

ಹಾಸನ ಕ್ಷೇತ್ರದ ಟಿಕೆಟ್ ಇಬ್ಬರು ಪಟ್ಟು ಹಿಡಿದಿದ್ದು, ಈ ಬಾರಿ ಟಿಕೆಟ್ ಯಾರಿಗೆ ಕೊಡ್ತಾರೆ ಎನ್ನುವುದೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಗೊಂದಲಕ್ಕೆ ತೆರೆ ಎಳೆಯಲು ದೇವೇಗೌಡು ಹೊಸ ಸೂತ್ರವನ್ನ ಪ್ರಯೋಗ ಮಾಡಿದ್ದಾರೆ. ಭವಾನಿ ರೇವಣ್ಣ ಹಾಗೂ ಸ್ವರೂಪ್ ಪ್ರಕಾಶ್ ಹೆಸರುಗಳನ್ನ ಕೈ ಬಿಟ್ಟು ಇದೀಗ ಕ್ಷೇತ್ರದಲ್ಲಿ ಹೊಸ ಹೆಸರು ಭಾರಿ ಸದ್ದು ಮಾಡುತ್ತಿದೆ.
ಹೌದು, ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಹಾಸನ ಟಿಕೆಟ್ ವಿಚಾರದಲ್ಲಿ ದಳಪತಿಗಳು ಹೊಸ ಸೂತ್ರ ಪ್ರಯೋಗ ಮಾಡಲು ಪ್ಲಾನ್ ಹಾಕಿಕೊಂಡಿದ್ದಾರೆ. ಪದೇ ಪದೇ ಮಾಜಿ ಮುಖ್ಯಮಂತ್ರಿ ಸಾಮಾನ್ಯ ಕಾರ್ಯಕರ್ತರಿಗೆ ಹಾಸಕ ಟಿಕೆಟ್ ಅಂತ ಹೇಳಿದ್ರು, ಅದೇ ಅಲ್ಲದೇ ಹಾಸನ ಟಿಕೆಟ್ ಕುರಿತು ನಾನು ಪಕ್ಷವನ್ನ ಕಳೆದುಕೊಳ್ಳಲ್ಲ ಎಂದು ಹೇಳಿದ್ದು, ಭವಾನಿ ರೇವಣ್ಣ ಹಾಗೂ ಸ್ವರೂಪ್ ನಡುವಿನ ಟಿಕೆಟ್ ಗದ್ದಲ ಬಗೆಹರಿಸಲು ಹೊಸ ಸೂತ್ರಕ್ಕೆ ದೇವೇಗೌಡರು ಮುಂದಾಗಿದ್ದಾರೆ.

ಭವಾನಿಗೆ ಕೊಟ್ಡರೆ ಸ್ವರೂಪ್ ಗೆ ಅಸಮಾಧಾನ. ಸ್ವರೂಪ್ ಗೆ ಕೊಟ್ಟರೆ ಭವಾನಿಗೆ ಅಸಮಾಧಾನ. ಹೀಗಾಗಿ ಇಬ್ಬರಿಗೂ ಟಿಕೆಟ್ ಕೊಡದೇ ಮೂರನೆಯವರಿಗೆ ಕೊಡಲು ದೇವೇಗೌಡ್ರು ಪ್ಲಾನ್ ಮಾಡಿದ್ದು, ಇಬ್ಬರಲ್ಲಿ ಯಾರಿಗೇ ಕೊಟ್ಟರೂ ಮತ್ತೊಬ್ಬರು ತಟಸ್ಥರಾಗುವ ಸಾದ್ಯತೆ ಇದೆ. ಹಾಗಾಗಿ ಇಬ್ಬರಿಗೂ ಟಿಕೆಟ್ ತಪ್ಪಿಸಿ ಮೂರನೆಯವರಿಗೆ ಟಿಕೆಟ್ ನೀಡಲು ದಳಪತಿಗಳು ಮುಂದಾಗಿದ್ದು, ರಾಜೇಗೌಡ ಎನ್ನುವ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಕಣಕ್ಕಿಳಿಸಲು ದೇವೇಗೌಡರು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಹಾಸನದ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಕೆ.ಎಂ.ರಾಜೇಗೌಡ ಅವರನ್ನು ಹಾಸನದಿಂದ ಕಣಕ್ಕಿಳಿಸಲು ಮುಂದಾಗಿದ್ದಾರೆ. ಎಚ್.ಡಿ.ರೇವಣ್ಣ ಅವರು ಕೆ.ಎಂ.ರಾಜೇಗೌಡ ಅವರೊಂದಿಗೆ ಈಗಾಗಲೇ ಎರಡು ಬಾರಿ ಗೌಪ್ಯವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಇನ್ನು ವಿಧಾನಸಭೆ ಚುನಾವಣೆ ಗೆ ಸ್ಪರ್ಧಿಸಲು ಒಪ್ಪಿದ ಕೆ.ಎಂ.ರಾಜೇಗೌಡ ಅವರು ಹಾಸನದಲ್ಲಿ ತಮ್ಮ ಬೆಂಬಲಿಗರೊಂದಿಗೆ ಟೆಂಪಲ್ ರನ್ ಆರಂಭಿಸಿದ್ದಾರೆ. ನೀರುಬಾಗಿಲು ಆಂಜನೇಯ, ಹಾಸನಾಂಬ, ಹಾಸನದ ಸಿದ್ದೇಶ್ವರ ದೇವಸ್ಥಾನ ಹಾಗೂ ಹಾಸನದ ಬೈಲಹಳ್ಳಿಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿದ್ದಾರೆ.
ಇನ್ನೂ ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಬಳಿಯೂ ಕೆ.ಎಂ.ರಾಜೇಗೌಡರ ಸಾಧಕ-ಬಾಧಕಗಳ ಬಗ್ಗೆ ಎಚ್.ಡಿ.ರೇವಣ್ಣ ಚರ್ಚೆ ನಡೆಸಿದ್ದಾರೆ. ಅಲ್ಲದೇ ರಾಜೇಗೌಡ ಕೂಡಾ ದಾಸ ಒಕ್ಕಲಿಗ ಸಮುದಾಯದವರು. ರಾಜೇಗೌಡ ರಿಗೆ ಟಿಕೆಟ್ ಕೊಟ್ಟರೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟ ಸಂದೇಶ ರವಾನೆಯಾಗುತ್ತದೆ.
ಸ್ವರೂಪ್ ಗೆ ಟಿಕೆಟ್ ಕೊಟ್ಟರೆ ಭವಾನಿ ರೇವಣ್ಣ ಬಣ ತಟಸ್ಥರಾಗುತ್ತಾರೆ, ಭವಾನಿಗೆ ಟಿಕೆಟ್ ಕೊಟ್ಟರೆ ಸ್ವರೂಪ್ ಬಣ ತಟಸ್ಥರಾಗುತ್ತದೆ. ಆದರೆ, ರಾಜೇಗೌಡರಿಗೆ ಕೊಟ್ಟರೆ ಇಬ್ಬರೂ ಅಸಮಾಧಾನ ಮರೆತು ಬೆಂಲಿಸುವ ಸಾದ್ಯತೆ ಹೆಚ್ಚಾಗಿದ್ದು, ಈ ಲೆಕ್ಕಾಚಾರದಲ್ಲಿ ರಾಜೇಗೌಡರ ರಿಗೆ ಟಿಕೆಟ್ ಕೊಡಲು ದಳಪತಿಗಳು ಚಿಂತನೆ ನಡೆಸಿದ್ದು, ಮಾರ್ಚ್ 18 ರಂದು ಹಾಸನದಲ್ಲೇ ಅಭ್ಯರ್ಥಿಯನ್ನ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಘೋಷಿಸಲಿದ್ದಾರೆ.












Click it and Unblock the Notifications