ನಿಂಬೆ ಹಣ್ಣು ಎಸೆಯಲು ಹೋದ ಮೂವರು ಕೆರೆ ಪಾಲಾದರು!
ಹಾಸನ, ಫೆ. 11 : ಅರ್ಚರಕ ಮಾತು ನಂಬಿ ಕೆರೆಗೆ ನಿಂಬೆ ಹಣ್ಣು ಎಸೆಯಲು ಹೋದ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಹಾಸನದಲ್ಲಿ ಮಂಗಳವಾರ ನಡೆದಿದೆ. ಸ್ಥಳೀಯ ಜನರ ಸಮಯ ಪ್ರಜ್ಞೆಯಿಂದಾಗಿ ಇಬ್ಬರ ಜೀವ ಉಳಿದಿದೆ.
ದೂರದಿಂದ ನಿಂಬೆಹಣ್ಣು ಎಸೆದರೆ ದಡಕ್ಕೆ ಬೀಳುತ್ತದೆ ಎಂದು ಭಾವಿಸಿ ಹಾಸನ ಜಿಲ್ಲೆಯ ಸಾತೇನಹಳ್ಳಿ ಕೆರೆ ಸಮೀಪ ಕಾರಿನಲ್ಲಿ ತೆರಳಿದಾಗ ಕಾರು ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಈ ದುರಂತ ಸಂಭವಿಸಿದೆ. ಕಾರಿನಲ್ಲಿದ್ದ ಪ್ರೇಮ, ಆಕೆಯ ಪುತ್ರ ವಿಕಾಸ್ ಮತ್ತು ಮಾವ ರಾಜಣ್ಣ ಸಾವನ್ನಪ್ಪಿದ್ದಾರೆ.[ಬೇಲೂರು : ಕೆರೆಗೆ ಉರುಳಿದ ಸರ್ಕಾರಿ ಬಸ್ 8 ಸಾವು]

ಸ್ಥಳೀಯರು ಕಾರಿನಲ್ಲಿದ್ದ ಐವರ ಪೈಕಿ ನಾಗರಾಜ್ ಮತ್ತು ವಿನಯ್ ಅವರನ್ನು ಬದುಕಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಾತೇನಹಳ್ಳಿಯ ಕೆರೆಗೆ ಇದೇ ಮೊದಲ ಬಾರಿಗೆ ಯಗಚಿ ಜಲಾಶಯದಿಂದ ನೀರು ಬಿಡಲಾಗಿತ್ತು. ಪೂರ್ಣವಾಗಿ ತುಂಬಿದ್ದ ಕರೆ ಮೂವರನ್ನು ಬಲಿ ತೆಗೆದುಕೊಂಡಿದೆ.
ಘಟನೆ ವಿವರ : ಹಾಸನದ ಸಾತೇನಹಳ್ಳಿಯ ನಾಗರಾಜ್ ಹಾಗೂ ಕುಟುಂಬ ಸದಸ್ಯರು ಜಕ್ಕನಹಳ್ಳಿಯ ಅಜ್ಜಪ್ಪ ದೇವಾಲಯಕ್ಕೆ ಮಾರುತಿ ಓಮಿನಿ ಕಾರಿನಲ್ಲಿ ಹೋಗಿದ್ದರು. ದೇವಾಲಯದಲ್ಲಿ ಪೂಜೆ ಬಳಿಕ ಅರ್ಚಕರು ನಾಗರಾಜ್ ಅವರಿಗೆ 5 ನಿಂಬೆಹಣ್ಣುಗಳನ್ನು ಕೊಟ್ಟಿದ್ದರು.
ಇವುಗಳನ್ನು ಕೆರೆಗಳಿಗೆ ಎಸೆಯಿರಿ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅರ್ಚಕರು ತಿಳಿಸಿದ್ದರು. ಅದರಂತೆ ಮಾರ್ಗದಲ್ಲಿ ಸಿಕ್ಕ ಕೆರೆಗಳಿಗೆ 4 ನಿಂಬೆಹಣ್ಣುಗಳನ್ನು ನಾಗರಾಜ್ ಎಸೆದಿದ್ದರು. ಕೊನೆಯ ನಿಂಬೆ ಹಣ್ಣನ್ನು ಸಾತೇನಹಳ್ಳಿ ಕೆರೆಗೆ ಎಸೆಯಲು ತೀರ್ಮಾನಿಸಿದ್ದರು.
ಸಾತೇನಹಳ್ಳಿ ಕೆರೆ ಹತ್ತಿರಬಂದಾಗ ದೂರದಿಂದ ನಿಂಬೆಹಣ್ಣು ಎಸೆದರೆ ದಡಕ್ಕೆ ಬೀಳುತ್ತದೆ ಎಂದು ಭಾವಿಸಿ ಕೆರೆ ಸಮೀಪ ಕಾರಿನಲ್ಲಿ ತೆರಳಿದಾಗ ಕಾರು ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಕೆರೆ ತುಂಬಿದ್ದರಿಂದ ಕಾರು ತಕ್ಷಣ ಮುಳುಗಿದ್ದು, ಮೂವರು ಮೃತಪಟ್ಟಿದ್ದಾರೆ.
ಕಾರು ಕೆರೆಗೆ ಉರುಳಿ ಬಿದ್ದಿದ್ದನ್ನು ಕಂಡ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಕೆರೆಯಲ್ಲಿ ತೇಲುತ್ತಿದ್ದ ನಾಗರಾಜ್, ವಿನಯ್ ಅವರನ್ನು ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಇಬ್ಬರ ಮೃತದೇಹ ಮಂಗಳವಾರ ಸಂಜೆ ಪತ್ತೆಯಾಗಿದೆ. ಪ್ರೇಮಾ ಅವರ ಮೃತದೇಹಕ್ಕಾಗಿ ಬುಧವಾರ ಹುಡುಕಾಟ ನಡೆಯುತ್ತಿದೆ.












Click it and Unblock the Notifications