ರೇವಣ್ಣ ಬೈದಿದಕ್ಕೆ ಆತ್ಮಹತ್ಯೆಗೆ ಶರಣಾದ ಜೆಡಿಎಸ್ ಕಾರ್ಯಕರ್ತ?

Posted By:
Subscribe to Oneindia Kannada

ಹಾಸನ, ಫೆಬ್ರವರಿ 10 : ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು ಬೈದಿದ್ದಕ್ಕೆ ಬೇಸರಗೊಂಡ ಪಕ್ಷದ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 'ಸಾವಿಗೆ ನಾನು ಕಾರಣವಲ್ಲ. ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಲಾಗಿದೆ' ಎಂದು ರೇವಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಹೊಳೆನರಸೀಪುರ ತಾಲೂಕಿನ ಅಕ್ಕಿಚೌಡನಹಳ್ಳಿ ಗ್ರಾಮದ ಗಂಗಾಧರ್ (60) ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿದ್ದ ಗಂಗಾಧರ್ ಅವರು, ಬುಧವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. [ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ವಿವರ]

hm revanna

ಅಕ್ಕಿಚೌಡನಹಳ್ಳಿ ಗ್ರಾಮ ಹಳೇಕೋಟೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಈ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಗಂಗಾಧರ್ ಅವರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಇದಕ್ಕಾಗಿ ರೇವಣ್ಣ ಅವರು ಗಂಗಾಧರ್‌ಗೆ ಬೈದಿದ್ದರಂತೆ.[ದೇವೇಗೌಡರ ಸೊಸೆ ಭವಾನಿ ಸಕ್ರಿಯ ರಾಜಕೀಯಕ್ಕೆ ಎಂಟ್ರಿ!]

ರೇವಣ್ಣ ಬೈದಿದ್ದಕ್ಕೆ ಮನನೊಂದ ಗಂಗಾಧರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗಂಗಾಧರ್ ಸಾವಿಗೂ ಮುನ್ನ ನೀಡಿದ ಹೇಳಿಕೆಯನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದು, 'ಯಾವತ್ತೂ ನಾವು ಬೇರೆಯವರಿಂದ ಬೈಯಿಸಿಕೊಂಡಿಲ್ಲ. ಆದರೆ, ರೇವಣ್ಣ ಸಾಹೇಬ್ರು ಬೈದಿದ್ದಕ್ಕೆ ಬೇಜಾರಾಗಿ ವಿಷ ಕುಡಿದಿರುವುದಾಗಿ' ಗಂಗಾಧರ್ ಹೇಳಿರುವುದು ವಿಡಿಯೋದಲ್ಲಿದೆ.

ಸಾಂತ್ವನ ಹೇಳಿದ ರೇವಣ್ಣ : ಅಕ್ಕಿಚೌಡನಹಳ್ಳಿ ಗ್ರಾಮಕ್ಕೆ ಬುಧವಾರ ಮಧ್ಯಾಹ್ನ ಭೇಟಿ ನೀಡಿದ ರೇವಣ್ಣ ಅವರು ಗಂಗಾಧರ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. 'ಗಂಗಾಧರ್ ಸಾವಿಗೆ ನಾನು ಕಾರಣವಲ್ಲ. ಈ ಆರೋಪದ ಹಿಂದೆ ರಾಜಕೀಯ ಪಿತೂರಿ ಇದೆ. ಬಲವಂತವಾಗಿ ಗಂಗಾಧರ್ ಅವರಿಂದ ಹೇಳಿಕೆ ತೆಗೆದುಕೊಳ್ಳಲಾಗಿದೆ. ಈ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು' ಎಂದು ರೇವಣ್ಣ ಅವರು ಒತ್ತಾಯಿಸಿದರು.

ಅಂದಹಾಗೆ ರಾಜ್ಯ ಚುನಾವಣಾ ಆಯೋಗ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಫೆ.20ರಂದು ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ ಸೇರಿದಂತೆ 15 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
60-year-old JDS activist Gangadher allegedly committed suicide in Holenarasipura taluk of Hassan district on Wednesday, February 10, 2016.
Please Wait while comments are loading...