ಹಾಸನಾಂಬ ಉತ್ಸವ ಕಳೆದ ಬಾರಿಗಿಂತ 10 ಲಕ್ಷ ಹೆಚ್ಚು ಭಕ್ತರ ಆಗಮನದ ನಿರೀಕ್ಷೆ, ಈ ಬಾರಿಯ ವಿಶೇಷವೇನು ?
ಹಾಸನ: ಹಾಸನಾಂಬ ಉತ್ಸವ ಕಳೆದ ಬಾರಿಗಿಂತ 10 ಲಕ್ಷ ಹೆಚ್ಚು ಭಕ್ತರ ಆಗಮನದ ನಿರೀಕ್ಷೆ ಇದೆ. ಅಲ್ಲದೆ ಈ ಬಾರಿಯ ವಿಶೇಷತೆಯ ಬಗ್ಗೆಯೂ ಸಚಿವ ಕೆ. ಎಂ. ಶಿವಲಿಂಗೇಗೌಡ ಅವರು ಅಪ್ಡೇಟ್ಸ್ ಕೊಟ್ಟಿದ್ದಾರೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಹಾಸನಾಂಬೆ ಕೇವಲ ಹಾಸನ ಜಿಲ್ಲೆಗೆ ಸೀಮಿತವಾಗಿ ಉಳಿದಿಲ್ಲ. ನಾಡದೇವತೆಯಾಗಿ ಹೊರಹೊಮ್ಮಿದ್ದಾಳೆ. ಉತ್ಸವವು ನಾಡಹಬ್ಬವಾಗಿ ಮಾರ್ಪಟ್ಟಿದೆ. ಹಾಗಾಗಿ ನಾಡಿನ ಹಿತದೃಷ್ಟಿಯಿಂದ ಉತ್ಸವವನ್ನು ನಡೆಸಬೇಕಿದೆ. ಎಲ್ಲವೂ ಕಳೆದ ಬಾರಿಯಂತೆ ನಡೆಯಲಿದೆ. ಆದರೆ, ಕಳೆದ ಬಾರಿಗಿಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರ ಆಗಮನದ ನಿರೀಕ್ಷೆಯಿಂದ ಹೆಚ್ಚುವರಿ ವ್ಯವಸ್ಥೆ ಮಾಡಲಾಗಿದೆ ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಮಾಹಿತಿ ನೀಡಿದ್ದಾರೆ.

ಹಾಸನಾಂಬ ಉತ್ಸವ ಈ ಬಾರಿಯ ವಿಶೇಷವೇನು ?
ಹಾಸನಾಂಬ ಉತ್ಸವದ ಹಿನ್ನೆಲೆ ಪೂರ್ವಸಿದ್ಧತೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿರುವ ಅವರು, ಭಕ್ತರಿಗಾಗಿ ಇಸ್ಕಾನ್‌ನಿಂದ ಲಾಡು ಮಾಡಿಸಲಾಗುತ್ತಿದ್ದು, ಈ ಬಾರಿ ಪೂರ್ಣ ಪ್ರಮಾಣದ ದೊನ್ನೆ ಪ್ರಸಾದ ವಿತರಿಸಲಾಗುವುದು. ನಾಳೆ ಸಂಜೆಯೊಳಗೆ ಸಕಲ ಪೂರ್ವಸಿದ್ಧತೆ ಕೆಲಸಗಳು ಪೂರ್ಣಗೊಳ್ಳಲಿವೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಸುವ್ಯವಸ್ಥೆಯೊಂದಿಗೆ ಹಾಸನಾಂಬ ಉತ್ಸವವನ್ನು ನಡೆಸಲಾಗುವುದು. ಭಾರಿ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗುವುದು. ಉತ್ಸವದ ಪ್ರತಿಯೊಂದು ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಸಲಾಗುವುದು ಎಂದರು.
ಹಾಸನಾಂಬೆಯ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ವೈಭವಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ದಸರಾ ಮಾದರಿ ಕ್ರೀಡೋತ್ಸವನ್ನು ನಡೆಸಲಾಗುತ್ತಿದೆ. ಕುಸ್ತಿ, ಕಬ್ಬಡಿ, ವಾಲಿಬಾಲ್ ಪಂದ್ಯಾಟಗಳು ಪ್ರಮುಖ ಆಕರ್ಷಣೆಯಾಗಿವೆ. ಹಳ್ಳಿಕಾರ್ ಸೇರಿದಂತೆ ಅನೇಕ ಗೋತಳಿಗಳನ್ನು ಒಳಗೊಂಡ ಜಾನುವಾರು ಪ್ರದರ್ಶನವಿರಲಿದೆ. ಟಗರು, ಶ್ವಾನ ಪ್ರದರ್ಶನಗಳು ಗಮನ ಸೆಳೆಯಲಿವೆ. ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಹಾಗೂ ದಸರಾದಲ್ಲಿ ಪಾಲ್ಗೊಂಡ ಕುಸ್ತಿಪಟುಗಳು ಸೇರಿದಂತೆ ಸುಮಾರು 400 ಕುಸ್ತಿಪಟುಗಳು ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.
ಹಾಸನಾಂಬ ಉತ್ಸವ: ಸಿದ್ದಲಿಂಗ ಮಹಾಸ್ವಾಮೀಜಿಗೆ ಆಹ್ವಾನ
ಐತಿಹಾಸಿಕ ಹಾಸನಾಂಬ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಶ್ರೀ ಸಿದ್ಧಗಂಗಾ ಮಠದ ಪೀಠಾಧಿಪತಿ ಸಿದ್ದಲಿಂಗಾ ಮಹಾಸ್ವಾಮೀಜಿ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ. ಶಿವಲಿಂಗೇಗೌಡ ಅವರ ನೇತೃತ್ವದ ನಿಯೋಗದವರು ಇಂದು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿ, ಅಧಿಕೃತವಾಗಿ ಆಹ್ವಾನಿಸಿದರು. ಬಳಿಕ ಲಿಂಗೈಕ್ಯ ಶಿವಕುಮಾರಸ್ವಾಮೀಜಿ ಅವರ ಗದ್ದುಗೆಗೆ ನಮಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಮತ್ತು ಇತರ ಗಣ್ಯರು ಸೇರಿದಂತೆ ಹಲವರು ಇದ್ದರು.


Click it and Unblock the Notifications
