ಕನ್ನಡವನ್ನೇ ಮರೆತ್ರಾ ಸಂಸದ ಸಾಗರ್ ಖಂಡ್ರೆ ?
ಕರ್ನಾಟಕಕ್ಕೆ ಬರುವ ಹೊರ ರಾಜ್ಯದವರು ಕನ್ನಡ ಕಲಿತುಕೊಳ್ಳಬೇಕು. ಕನ್ನಡ ಭಾಷೆ ಹಾಗೂ ಕರ್ನಾಟಕಕ್ಕೆ ಗೌರವ ಕೊಡಬೇಕು ಎನ್ನುವ ಒತ್ತಾಯಗಳ ನಡುವೆ ಕರ್ನಾಟಕದ ಸಂಸದರು ಹಾಗೂ ಸಚಿವರೇ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಸಭೆ ನಡೆಸಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ. ಸಂಸದರೇ ಅಧಿಕಾರಿಗಳ ಸಭೆಯನ್ನು ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ನಡೆಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಆದರೆ, ಸಚಿವ ಈಶ್ವರ್ ಖಂಡ್ರೆ ಹಾಗೂ ಸಂಸದ ಸಾಗರ್ ಈಶ್ವರ್ ಖಂಡ್ರೆ ಅವರು ನಡೆಸಿದ ಸಭೆಯಲ್ಲಿ ಸಾಗರ್ ಅವರು ಅಧಿಕಾರಿಗಳಿಗೆ ಕೇವಲ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಸೂಚನೆ ಕೊಟ್ಟಿರುವುದು ಹಾಗೂ ವಿವರಣೆ ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಅದೇನು ಅಂತ ನೋಡೋಣ..
ಸಾಗರ್ ಅವರು ಇದೇ ಮೊದಲ ಬಾರಿ ಲೋಕಸಭೆಯನ್ನು ಪ್ರವೇಶ ಮಾಡಿದ್ದಾರೆ. ಅತ್ಯಂತ ಕಿರಿಯ ಸಂಸದರು ಎನ್ನುವ ಹೆಗ್ಗಳಿಕೆ ಅವರದ್ದು. ಆದರೆ, ಭಾಷೆಯ ವಿಚಾರದಲ್ಲಿ ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಆ ರೀತಿ ನೋಡಿದರೆ ಲೋಕಸಭೆ ಚುನಾವಣೆಯ ಸಮಯದಲ್ಲೇ ಅವರ ಭಾಷಣಗಳು ವೈರಲ್ ಆಗಿದ್ದವು. ಸಚಿವ ಈಶ್ವರ್ ಖಂಡ್ರೆ ಅವರು ಹಿಂದಿಯಲ್ಲಿ ಮಾತನಾಡು ಎಂದಾಗ ಇಲ್ಲ ನಾನು ಕನ್ನಡದಲ್ಲೇ ಹೇಳುತ್ತೇನೆ ಎಂದು ಹೇಳಿದ್ದ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಈ ವಿಡಿಯೋಗೆ ಕನ್ನಡಿಗರು ಮೆಚ್ಚುಗೆ ಸೂಚಿಸಿದ್ದರು. ಆದರೆ, ಸಂಸದರು ಇದೀಗ ಈಚೆಗೆ ನಡೆಸಿದ್ದಾರೆ ಎನ್ನಲಾದ ಸಭೆಯಲ್ಲಿ ಇಂಗ್ಲಿಷ್ ಹಾಗೂ ಹಿಂದಿಯಲ್ಲೇ ನಿರ್ದೇಶ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಸಾಗರ್ ಅವರು ಹೇಳಿದ್ದೇನು: ಸಂಸದ ಸಾಗರ್ ಅವರು ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ದು. ಸಭೆಯಲ್ಲಿ ಅಧಿಕಾರಿಗಳಿಗೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ಸೂಚನೆ ಕೊಟ್ಟಿದ್ದಾರೆ. ಇಂಗ್ಲಿಷ್‌ನಲ್ಲಿ ಮಾತನಾಡಿರುವ ಅವರು ರಸ್ತೆಗುಂಡಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿವೆ. ಇದನ್ನು ಬೇಗ ಪರಿಹರಿಸಬೇಕು ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಮುಂದುವರಿದು ಅಧಿಕಾರಿಗಳಿಂದ ವಿವರಣೆ ಪಡೆಯುವಾಗ ಈ ಸಮಸ್ಯೆಗಳನ್ನು ಯಾವಾಗ ಪರಿಹರಿಸುತ್ತೀರಿ. ನನಗೊಂದು ಡೆಡ್‌ಲೈನ್ ಹೇಳಿ ಅಂತ ಹಿಂದಿಯಲ್ಲೇ ಮಾತನಾಡಿದ್ದಾರೆ. ಈ ವಿಡಿಯೋ ಯಾವ ಸಂದರ್ಭದ್ದು ಅಥವಾ ಯಾವಾಗ ನಡೆದಿದ್ದು ಎನ್ನುವ ವಿವರ ಲಭ್ಯವಾಗಿಲ್ಲ. ಆದರೆ ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗುತ್ತಿದೆ.
ಇದು ಕರ್ನಾಟಕ ಎನ್ನುವುದನ್ನು ಮರೆತರೇ: ಸಂಸದರು ಇದು ಕರ್ನಾಟಕ ಇಲ್ಲಿ ಕನ್ನಡ ಮಾತನಾಡಬೇಕು ಎನ್ನುವುದನ್ನು ಮರೆತಿದ್ದಾರೆಯೇ ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳ ಸುರಿಮಳೆಯೇ ಆಗಿದೆ. ಇದು ಬಿಹಾರ ಅಥವಾ ಉತ್ತರ ಪ್ರದೇಶ ಅಲ್ಲ ಎನ್ನುವುದನ್ನು ದಯವಿಟ್ಟು ಯಾರಾದರೂ ಇವರಿಗೆ ಹೇಳಿ. ಇದು ಕರ್ನಾಟಕ ಇಲ್ಲಿನ ಕನ್ನಡ ಪ್ರಥಮ ಭಾಷೆ ಎಂದು ಕನ್ನಡಿಗರು ಕಮೆಂಟ್‌ಗಳನ್ನು ಮಾಡಿದ್ದಾರೆ.












Click it and Unblock the Notifications