ಬಾಲಮುರಳಿಕೃಷ್ಣ ನುಡಿ ನಮನ: ಕಾರಣ ಜನ್ಮನೀ...ಆನಂದಮಯಿ...

By: ಡಾ. ಹಂಸಲೇಖ
Subscribe to Oneindia Kannada

ಕರ್ನಾಟಕ ಸಂಗೀತದ ದಂತಕಥೆ ಬಾಲಮುರಳಿಕೃಷ್ಣ ಅವರಿಗೆ ಕನ್ನಡ ಚಿತ್ರರಂಗದ ಅಪರೂಪದ ಹಾಗೂ ಅಸಾಧಾರಣ ಪ್ರತಿಭೆ ಹಂಸಲೇಖ ಅವರು ನುಡಿ ನಮನ ಸಲ್ಲಿಸಿದ್ದಾರೆ. ಹಂಸಲೇಖ ಅವರು ಬರೆದ ಲೇಖನವನ್ನು ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟಿಸಲಾಗುತ್ತಿದೆ.

ಸಂಗೀತ ಸಿದ್ಧಿ ಪಡೆದವರು ನೂರಾರು ಸಾಧಕರು ಇರುತ್ತಾರೆ. ಅವರಲ್ಲಿ ಪ್ರಸಿದ್ಧಿ ಪಡೆದವರು ಮಾತ್ರ ಇತಿಹಾಸವಾಗುತ್ತಾರೆ. ಶ್ರೀ ಬಾಲಮುರಳಿಕೃಷ್ಣ ಅವರು ಸ್ವರ ಸಾಮ್ರಾಜ್ಯದ ಸುವರ್ಣ ಚರಿತ್ರೆ. ಇವರು ಮೋಜಾರ್ಟ್ ನಂತೆ ಹುಟ್ಟು ಆನಂದಮಯಿ. ಬಾಲಮುರಳಿಕೃಷ್ಣ ಅಂದರೆ ಸಾಕ್ಷಾತ್ ಮಗುವಿನಂತೆ ನಗುತ್ತಿರುವುದು; ಕೊಳಲಿನಂತೆ ಪಲುಕುತ್ತಿರುವುದು; ಶ್ಯಾಮನಂತೆ ಪ್ರೇಮ ಸ್ವರೂಪಿಯಾಗಿರುವುದು ಎಂದೇ ಅರ್ಥ.[ಬಾಲಮುರಳಿ ಕೃಷ್ಣನ ಕೊರಳಿಗೆ ಕನ್ನಡದ 'ಮುತ್ತಿನ ಹಾರ']

Hamsalekha pays tribute to Balamurali krisha

ಅವರಿಗೆ ಒಲಿದಿದ್ದ ಈ ಆನಂದದ ಕಲೆಯ ಕಾರಣ ಇವರನ್ನು ಯಾರ್ಯಾರೂ ಅನುಕರಿಸಲು ಸಾಧ್ಯವೇ ಆಗಲಿಲ್ಲ. ಹುಟ್ಟಿ ಕಾರಣ ಹುಡುಕುವವರ ನಡುವೆ ಒಂದು ನಿರ್ದಿಷ್ಟ ಕಾರಣಕ್ಕಾಗಿ ಹುಟ್ಟಿದವರು ಈ ಆನಂದಮಯಿ! ದಕ್ಷಿಣ ಭಾರತದಲ್ಲಿ ಇವರ ಜನನಕ್ಕಾಗಿಯೇ ಒಂದು ಪ್ರಯೋಗ ಭೂಮಿಕೆ ಸಿದ್ಧವಾಗಿತ್ತು. ಅಲ್ಲಿ 72 ಮೇಳಗಳು ತಾವು ಮರು ಹುಟ್ಟು ಪಡೆಯಲು ಕಾತರದಿಂದ ಕಾದಿದ್ದವು. ಬಾಲಮುರಳಿ ಹುಟ್ಟಿದರು.[ಮತ್ತೊಬ್ಬ ಬಾಲಮುರಳೀಕೃಷ್ಣ ಹುಟ್ಟಿಬರಲು ಕಾಯೋಣ!]

ಶಾಸ್ತ್ರವು ಸಡಿಲಗೊಂಡು ಸಲಿಲವಾಯಿತು. ಪ್ರಯೋಗಗಳ ಪ್ರಪಂಚ ತಿರುಗಾಡಿತು. ಬಾಲಮುರಳಿಯವರ ಆನಂದಪರ್ವ ಉದಯವಾಯಿತು. ಸಿನಿಮಾ ಕ್ಷೇತ್ರವನ್ನು ದೂರುತ್ತಿದ್ದ ಶಾಸ್ತ್ರೀಯರ ಎದುರು; ಬಾಲ್ಯದಿಂದಲೇ ಮುರಿದು ಕಟ್ಟುವ ಕಲೆಯನ್ನು ರೂಢಿಸಿಕೊಂಡಿದ್ದ ಬಾಲಮುರಳಿಯವರು ತಮ್ಮ ಶಾರೀರ ಸಂಪತ್ತಿನಿ೦ದ ಸಿನಿಮಾ ಸಂಗೀತವನ್ನೇ ಶ್ರೀಮಂತಗೊಳಿಸಿ ತಮ್ಮ ಪ್ರಭಾವವನ್ನು ರಾಷ್ಟ್ರಕ್ಕೆ ಹಬ್ಬಿಬಿಟ್ಟರು.

ದಕ್ಷಿಣದ ನಾಲ್ಕೂ ರಾಜ್ಯಗಳಲ್ಲಿನ ಹವ್ಯಾಸಿ ಗಾಯಕರ ಕಿವಿಗಳಿಗೆ ಬಾಲಮುರಳಿಯವರು ಆಪ್ತ ಸ್ನೇಹಿತರಾದರು. ಆದರೆ ಅವರ ಕಂಠಗಳಿಗೆ ಮಾತ್ರ ಅನುಕರಿಸಲು ಸಾಧ್ಯವೇ ಆಗದ ಅಗೋಚರ ದೈವವಾಗಿ ಸಾಕಾರಗೊಂಡರು. ಬಾಲಮುರಳಿಯವರ ಆನಂದ'ವನ್ನು ದಕ್ಕಿಸಿಕೊಳ್ಳುವುದು ದುಸ್ಸಾಧ್ಯ ಎಂಬುದೇ ಬಾಲಮುರಳಿಯವರ ಜನ್ಮದ ಹಿಂದಿದ್ದ ಮಹಾನ್ ಕಾರಣ.[ಶಾಸ್ತ್ರೀಯ ಸಂಗೀತಗಾರ ಎಂ ಬಾಲಮುರಳಿಕೃಷ್ಣ ವಿಧಿವಶ]

ಕರ್ನಾಟಕ ಶಾಸ್ತ್ರೀಯ ಸಂಗೀತದ ಅಂತಃಸ್ಸತ್ವವಾದ ಭಕ್ತಿಯ ಧಾರೆಯನ್ನು ಆನಂದದ ಕಡೆ ಹೊರಳಿಸಿದ "ಕಾರಣ ಜನ್ಮನೀ ಆನಂದಮಯಿ !" ಗುರುಭ್ಯೋನ್ನಮಃ ಸ್ವರಾಧಿಪತಿಯೈನ್ನಮಃ !

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangalampalli Balamuralikrishna, Indian Carnatic vocalist, multi-instrumentalist, playback singer, composer and actor passed away on November 22nd. Music diresctor Dr.Hamasalekha pays tribute to Balamuralikrishna.
Please Wait while comments are loading...