Hampi Temple: ಹಂಪಿ ದೇವಸ್ಥಾನದಲ್ಲಿ ಬಾಳೆಹಣ್ಣು ನಿಷೇಧ; ಕಾರಣವೇನು?
ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ಇನ್ನು ಮುಂದೆ ಭಕ್ತರು ಪೂಜೆಗೆ ಬಾಳೆಹಣ್ಣು ತೆಗೆದುಕೊಂಡು ಹೋಗುವಂತಿಲ್ಲ. ದೇವಸ್ಥಾನದ ಆಡಳಿತ ಮಂಡಳಿಯೇ ನಿರ್ಧಾರ ತೆಗೆದುಕೊಂಡಿದೆ. ದೇವಸ್ಥಾನದ ಒಳಗಡೆ ಇರುವ ಆನೆಗಳಿಗೆ ಅತಿಯಾದ ಬಾಳೆಹಣ್ಣಿನ ಸಿಪ್ಪೆಯನ್ನು ಹಾಕುತ್ತಿರುವುದರಿಂದ ಸಮಸ್ಯೆಯಾಗುತ್ತಿದ್ದು ಅದನ್ನು ತಪ್ಪಿಸಲು ಈ ನಿರ್ಧಾರ ಮಾಡಲಾಗಿದೆ.
ಹಂಪಿ ವಿರೂಪಾಕ್ಷ ದೇವಸ್ಥಾನವು 7ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರು ಪೂಜೆಗಾಗಿ ತರುವ ಬಾಳೆಹಣ್ಣನ್ನು ಕೆಲವರು ಆವರಣದಲ್ಲೇ ತಿಂದು ಸಿಪ್ಪೆಯನ್ನು ಆನೆಗಳಿಗೆ ನೀಡಿದರೆ, ಕೆಲವರು ಬಾಳೆಹಣ್ಣುಗಳನ್ನೇ ಆನೆಗಳಿಗೆ ನೀಡುತ್ತಾರೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ದೇವಾಲಯದ ದತ್ತಿ ಅಧಿಕಾರಿ ಹನುಮಂತಪ್ಪ ಮಾತನಾಡಿ, "ಭಕ್ತರು ಆನೆಗೆ ಆಹಾರ ನೀಡಲು ಅತಿಯಾದ ಉತ್ಸಾಹ ತೋರುತ್ತಿದ್ದು ಸಮಸ್ಯೆಗೆ ಕಾರಣವಾಗಿದೆ. ಆನೆಗಳಿಗೆ ಇದರಿಂದ ಯಾವುದೇ ಸಮಸ್ಯೆಯಾಗದೇ ಇದ್ದರು, ದೇವಸ್ಥಾನದ ಪ್ರಾಂಗಣದಲ್ಲಿ ಗಲೀಜು ಹೆಚ್ಚಾಗುತ್ತಿದೆ. ಭಕ್ತರು ಬಾಳೆಹಣ್ಣಿನ ಸಿಪ್ಪೆ ಮತ್ತು ಬಾಳೆಹಣ್ಣು ತರುವ ಪ್ಲಾಸ್ಟಿಕ್ ಚೀಲಗಳನ್ನು ಸಹ ಬಿಟ್ಟು ಹೋಗುತ್ತಾರೆ" ಎಂದು ಪಿಟಿಐ ವರದಿ ಮಾಡಿದೆ.
ವಿವಾದ ಮಾಡದಂತೆ ಮನವಿ
ದೇವಸ್ಥಾನಕ್ಕೆ ಬಾಳೆಹಣ್ಣು ತರದಂತೆ ನಿಷೇಧ ಮಾಡಿದ ನಂತರ ಬಹಳಷ್ಟು ಜನ ಕರೆ ಮಾಡುತ್ತಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಬಾಳೆಹಣ್ಣು ತರುವುದರ ಮೇಲೆ ನಿಷೇಧ ಹೇರಿರುವುದು ದೇವಸ್ಥಾನದ ಸ್ವಚ್ಛತೆಯನ್ನು ಕಾಪಾಡಲು ಈ ನಿರ್ಧಾರ ಮಾಡಲಾಗಿದ್ದು ಇದನ್ನು ವಿವಾದ ಮಾಡಬಾರದು ಎಂದು ಜನರಿಗೆ ಮನವಿ ಮಾಡಿದ್ದಾರೆ.
ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ವಿಚಾರಗಳ ಆಧಾರದ ಮೇಲೆ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ, ಅದನ್ನು ಹೊರತು ಪಡಿಸಿ ಇದರಲ್ಲಿ ವಿವಾದ ಮಾಡುವಂತಹ ಯಾವುದೇ ವಿಚಾರವಿಲ್ಲ ಎಂದು ಹೇಳಿದರು.
ಹಂಪಿ ವಿರೂಪಾಕ್ಷ ದೇವಸ್ಥಾನವನ್ನು 'ದಕ್ಷಿಣ ಕಾಶಿ' ಎಂದು ಕರೆಯಲಾಗುತ್ತದೆ. ಹಂಪಿಯನ್ನು ನೋಡಲು ಪ್ರತಿದಿನ ಐದು ಸಾವಿರ ಭಕ್ತರು ಭೇಟಿ ನೀಡುತ್ತಾರೆ. ವಾರಾಂತ್ಯ ಮತ್ತು ರಜೆಯ ದಿನಗಳಲ್ಲಿ ಜನಸಂದಣಿ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ. ದಿನಕ್ಕೆ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಧಾರ್ಮಿಕವಾಗಿ ಮಾತ್ರವಲ್ಲದೆ ಐತಿಹಾಸಿಕವಾಗಿ ಕೂಡ ಹಂಪಿ ಪ್ರಸಿದ್ಧವಾಗಿದ್ದು ವಿದೇಶಿಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.












Click it and Unblock the Notifications