ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ರವಿ ಪೂಜಾರಿ ಕರೆ
ಉಡುಪಿ, ಮೇ 26 : ಕುಂದಾಪುರದ ವಾಜಪೇಯಿ ಎಂದೇ ಖ್ಯಾತರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಕರೆ ಮಾಡಿದ್ದು 10 ಕೋಟಿ ರೂ.ಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಕುಂದಾಪುರ ಶಾಸಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ಮಧ್ಯಾಹ್ನ 12.30ರಿಂದ 1.30ರ ತನಕ ಮೂರು ಬಾರಿ ಶಾಸಕರಿಗೆ ಕರೆ ಬಂದಿದೆ. ಫೋನ್‌ನಲ್ಲಿ ಮಾತನಾಡಿದ ವ್ಯಕ್ತಿ ತನ್ನನ್ನು ತಾನು ಭೂಗತ ಪಾತಕಿ ರವಿ ಪೂಜಾರಿ ಎಂದು ಪರಿಚಯಿಸಿಕೊಂಡಿದ್ದು, ಶ್ರೀನಿವಾಸ ಶೆಟ್ಟಿ ಅವರ ಜೊತೆ ತುಳುವಿನಲ್ಲಿ ಮಾತನಾಡಿದ್ದಾನೆ.

ಕರೆ ಮಾಡಿದ ವ್ಯಕ್ತಿ 10 ಕೋಟಿ ರೂ.ಗಳನ್ನು ನೀಡುವಂತೆ ಶಾಸಕರಿಗೆ ಬೇಡಿಕೆ ಇಟ್ಟಿದ್ದಾನೆ. ಒಟ್ಟು ಮೂರು ಬಾರಿ ಬೇರೆ-ಬೇರೆ ನಂಬರ್‌ನಿಂದ ಕರೆ ಮಾಡಿದ ಭೂಗತ ಪಾತಕಿ ಎಂದು ಹೇಳಿಕೊಳ್ಳುವ ವ್ಯಕ್ತಿ ಒಂದು ಬಾರಿ ಮಾತ್ರ ಶಾಸಕರ ಜೊತೆ ಮಾತನಾಡಿ ಹಣದ ಬೇಡಿಕೆ ಮುಂದಿಟ್ಟಿದ್ದಾನೆ. [ಕುಂದಾಪುರ ವಾಜಪೇಯಿ ಹಾಲಾಡಿ ದಿಗ್ವಿಜಯ]
ಶಾಸಕರು ಈ ಕರೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಮಲೈ ಅವರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಭದ್ರತೆ ತೆಗೆದುಕೊಳ್ಳುವಂತೆ ಎಸ್ಪಿ ಶಾಸಕರಿಗೆ ಸಲಹೆ ನೀಡಿದ್ದಾರೆ. ಆದರೆ, ಶ್ರೀನಿವಾಸ ಶೆಟ್ಟಿ ಅವರು ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ.
1999ರಲ್ಲಿ ರಾಜಕೀಯ ಜೀವನ ಆರಂಭಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾಂಗ್ರೆಸ್ ಪ್ರಭಾವಿ ನಾಯಕ ಪ್ರತಾಪಚಂದ್ರ ಶೆಟ್ಟಿ ಅವರನ್ನು ಸೋಲಿಸಿದರು. 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಹಾಗೂ 2008ರನ್ನು ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿ ಹ್ಯಾಟ್ರಿಕ್ ಸಾಧಿಸಿದರು. [ಮಾಹಿತಿ : ಇಂಡಿಯಾ ವೋಟ್ಸ್]
2013ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶ್ರೀನಿವಾಸ ಶೆಟ್ಟಿ ಅವರು 80, 563 ಮತಗಳನ್ನು ಪಡೆದು ಕಾಂಗ್ರೆಸ್ ಪಕ್ಷದ ಶಿವರಾಮ ಶೆಟ್ಟಿ ಅವರ ವಿರುದ್ಧ ಜಯಗಳಿಸಿದ್ದಾರೆ. ಸರಳ ಸಜ್ಜನಿಕೆಯ ಶಾಸಕರು ಕುಂದಾಪುರದ ವಾಜಪೇಯಿ ಎಂದು ಪ್ರಸಿದ್ಧಿ ಪಡೆದಿದ್ದಾರೆ.












Click it and Unblock the Notifications