H3N2 ವೈರಸ್: ಕಡಿಮೆ ದರದಲ್ಲಿ ಪರೀಕ್ಷೆಗೆ ಕ್ರಮ, ವಾರಕ್ಕೆ 25 ತಪಾಸಣೆಗೆ ಆಸ್ಪತ್ರೆಗೆ ಸೂಚನೆ: ಸುಧಾಕರ್
H3N2 ವೈರಸ್ ಸೋಂಕು ಭೀತಿ ಆವರಿಸಿದೆ, ಆದರೆ ಯಾರೂ ಆತಂಕದ ಪಡುವಂತಹ ಸ್ಥಿತಿ ಇಲ್ಲ. ಕಡಿಮೆ ದರದಲ್ಲಿ ತಪಾಸಣೆ ನಡೆಸುವುದು ಸೇರಿದಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೆಂಗಳೂರು, ಮಾರ್ಚ್ 06: H3N2 ವೈರಸ್ ಸೋಂಕು ಭೀತಿ ಆವರಿಸಿದೆ, ಆದರೆ ಯಾರೂ ಆತಂಕದ ಪಡುವಂತಹ ಸ್ಥಿತಿ ಇಲ್ಲ. ಈಗಾಗಲೇ ರಾಜ್ಯದಲ್ಲಿ ಕಡಿಮೆ ದರದಲ್ಲಿ ತಪಸಣೆ ನಡೆಸುವುದು ಸೇರಿದಂತೆ ಆಸ್ಪತ್ರೆಗಳಿಗೆ ಒಂದಷ್ಟು ಗುರಿ ನಿಗದಿಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ರಾಜ್ಯದಲ್ಲಿ ಹೊಸ ವೈರಸ್ ಕುರಿತು ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ. ಎಲ್ಲ ಆಸ್ಪತ್ರೆಗಳ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಈಗಾಗಲೇ ಆದೇಶಿಸಲಾಗಿದೆ. ಹಾಗೆಯೇ ಜನರು ಮುನ್ನೆಚ್ಚರಿಕೆ ವಹಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಇನ್‌ಫ್ಲುಯೆಂಜಾಗೆ ಪ್ರತಿ ವರ್ಷ ಲಸಿಕೆ ನೀಡಲಾಗುತ್ತಿದೆ. ಈಗ ಆರೋಗ್ಯ ಸಿಬ್ಬಂದಿ ಪಡೆಯಲು ಲಿಖಿತ ಸೂಚನೆ ನೀಡಲಾಗುವುದು ಎಂದರು.

ಆಸ್ಪತ್ರೆಗಳ ಐಸಿಯುನಲ್ಲಿ ಕೆಲಸ ಮಾಡುವವರು ಸೇರಿದಂತೆ ಕೆಲ ನಿರ್ದಿಷ್ಟ ವೈದ್ಯರು, ಸಿಬ್ಬಂದಿಗೆ ಸರ್ಕಾರದಿಂದಲೇ ಲಸಿಕೆ ನೀಡಲಾಗುವುದು. 2019 ರವರೆಗೆ ಈ ಲಸಿಕೆ ನೀಡಲಾಗುತ್ತಿತ್ತು. ಕೋವಿಡ್ ಬಂದ ಬಳಿಕ ಈ ಕುರಿತು ಲಸಿಕೆ ನೀಡಿಕೆ ಮುಂದುವರೆಸಿರಲಿಲ್ಲ. ಇದೀಗ ಆ ಲಸಿಕೆಯನ್ನು ರಾಜ್ಯದ ಅಷ್ಟು 31 ಜಿಲ್ಲೆಗಳಲ್ಲಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಆಸ್ಪತ್ರೆಗಳಿಗೆ ಗುರಿ ನಿಗದಿ
ಪ್ರತಿ ವಾರ 25 ಪರೀಕ್ಷೆ ಮಾಡಬೇಕೆಂದು ಕೇಂದ್ರ ಸರ್ಕಾರ ಗುರಿ ನೀಡಿದೆ. ಬೆಂಗಳೂರಿನ ವಿಕ್ಟೋರಿಯಾ ಹಾಗೂ ವಾಣಿ ವಿಲಾಸ ಆಸ್ಪತ್ರೆಗಳಲ್ಲಿ ಸಾರಿ ಹಾಗೂ ಐಎಲ್‌ಐ ಪ್ರಕರಣಗಳ ಪೈಕಿ 25 ಮಂದಿಗೆ ಈ ಪರೀಕ್ಷೆ ಮಾಡಿ ಯಾವ ಪ್ರಭೇದದ ವೈರಾಣು ಎಂದು ಪತ್ತೆ ಮಾಡಲಾಗುವುದು ಎಂದರು.
15 ವರ್ಷದವರಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹಾಗೂ 65 ವರ್ಷ ಮೇಲ್ಪಟ್ಟ ನಾಗರಿಕರಲ್ಲಿ ಈ ಹೊಸ ಸೋಂಕು ಕಂಡು ಬರುವ ಸಾಧ್ಯತೆ ಇದೆ. ಗರ್ಭಿಣಿಯರಿಗೂ ಸೋಂಕು ಬರುವ ಸಾಧ್ಯತೆ ಹೆಚ್ಚಿದೆ. ಶುಚಿತ್ವ ಪಾಲಿಸುವ ಜೊತೆಗೆ ಗುಂಪು ಗೂಡುವುದನ್ನು ಬಿಡಬೇಕು. ಈ ಮೂಲಕ ಸೋಂಕು ವ್ಯಾಪಿಸುವುದನ್ನು ತಡೆಯಬಹುದು.

ದರ ನಿಯಂತ್ರಣಕ್ಕೆ ಸಮಿತಿ
ಹೊಸ ಸೋಂಕು ಪರೀಕ್ಷೆಯ ದರ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸಮಿತಿ ರಚಿಸಲು ಸೂಚನೆ ನೀಡಲಾಗಿದೆ. ಕೊರೋನ ರೀತಿಯಲ್ಲೇ ಈ ಸೋಂಕನ್ನು ಪರೀಕ್ಷಿಸಲಾಗುವುದು. ಕಡಿಮೆ ದರದಲ್ಲಿ ಪರೀಕ್ಷೆ ಮಾಡುವಂತೆ ಕ್ರಮ ವಹಿಸಲು ಸೂಚಿಸಿದ್ಧೇವೆ. ವರದಿ ಬಂದ ಬಳಿಕ ಪರೀಕ್ಷೆಗೆ ದರ ಎಷ್ಟು ಎಂದು ತಿಳಿಸಲಾಗುವುದು ಎಂದರು.
ಅನಗತ್ಯವಾಗಿ ಆ್ಯಂಟಿಬಯೋಟಿಕ್ಸ ಬೇಡ
ಜನವರಿಯಿಂದ ಮಾರ್ಚ್‌ವರೆಗೆ ಎಚ್1ಎನ್1 ನ 20 ಪ್ರಕರಣಗಳು ಪತ್ತೆಯಾಗಿವೆ. ಎಚ್3ಎನ್2 ನ 26 ಪ್ರಕರಣ ಪತ್ತೆಯಾಗಿದೆ. ಇನ್‌ಫ್ಲುಯೆಂಜ ಬಿ 10, ಅಡಿನೋ 69 ಪ್ರಕರಣ ಕಂಡುಬಂದಿದೆ. ಅನೇಕರು ಆ್ಯಂಟಿಬಯೋಟಿಕ್ಸ ಮಾತ್ರೆ ಸೇವಿಸುತ್ತಿದ್ದಾರೆ. ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವಿಸುವುದು, ಅನಗತ್ಯವಾಗಿ ಆ್ಯಂಟಿಬಯೋಟಿಕ್ಸ ಸೇವಿಸುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ ಎಂದು ಸಚಿವರು ಪುನರುಚ್ಚರಿಸಿದರು.
ಬೇಸಿಗೆಗೂ ಮುನ್ನ ಅಂದರೆ ಫೆಬ್ರವರಿಯಲ್ಲೇ ಉಷ್ಣಾಂಶ ಹೆಚ್ಚಾಗಿತ್ತು. ಹೀಗಾಗಿ ಆರೋಗ್ಯ ಸಮಸ್ಯೆ ಸೃಷ್ಟಿಯಾಯಿತು.ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬಿಸಿಲಲ್ಲಿ ಓಡಾಡುವುದು ತಪ್ಪಿಸಿ. ಹೆಚ್ಚಿನ ಪ್ರಮಾಣದಲ್ಲಿ ನೀರು ಜೊತೆಗೆ ಮಜ್ಜಿಗೆ, ಎಳನೀರು ಸೇವಿಸುವ ಮೂಲಕ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗದಂತೆ ಎಚ್ಚರ ವಹಿಸಿ ಎಂದು ಅವರು ಸಲಹೆ ನೀಡಿದರು.












Click it and Unblock the Notifications