ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದು ದೇವೇಗೌಡರಲ್ಲ : ಎಚ್.ವಿಶ್ವನಾಥ್
ಬೆಂಗಳೂರು, ಜುಲೈ 07 : 'ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನನ್ನ ಕ್ಷೇತ್ರದ ಜನರು, ಎಚ್.ಡಿ.ದೇವೇಗೌಡರಲ್ಲ' ಎಂದು ಹುಣಸೂರು ಶಾಸಕ, ಜೆಡಿಎಸ್ ನಾಯಕ ಎಚ್.ವಿಶ್ವನಾಥ್ ಹೇಳಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ಅವರು ಮುಂಬೈನ ಖಾಸಗಿ ಹೋಟೆಲ್‌ನಲ್ಲಿದ್ದಾರೆ. ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, 'ನಾನು ಹೆಸರಿಗೆ ಮಾತ್ರ ಜೆಡಿಎಸ್ ಅಧ್ಯಕ್ಷನಾಗಿದ್ದೆ. ನನ್ನ ಅಳಿಯನ ವರ್ಗಾವಣೆ ಮಾಡಿಸಲು ಸಹ ನನಗೆ ಆಗಲಿಲ್ಲ. ನನ್ನ ಅಳಿಯನಿಗೆ ಕುಡುಕನ ಪಟ್ಟ ಕಟ್ಟುವ ಕೆಲಸ ಮಾಡಿದ್ದು ಸಾ.ರಾ.ಮಹೇಶ್' ಎಂದು ಆರೋಪಿಸಿದರು.
'ರಾಜ್ಯದಲ್ಲಿ ಜೆಡಿಎಸ್ ವಾಷ್ ಔಟ್ ಆಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮ ಮಾತಿಗೆ ಮನ್ನಣೆ ಕೊಡುವ ಕೆಲಸ ಮಾಡಲಿಲ್ಲ. ಹೆಸರಿಗೆ ಮಾತ್ರ ಜೆಡಿಎಸ್ ಅಧ್ಯಕ್ಷನಾಗಿದ್ದೆ. ಜೆಡಿಎಸ್ ನಾಯಕರ ನಡವಳಿಕೆ ಬಹುತೇಕ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ' ಎಂದರು.

'ಜಿ.ಟಿ.ದೇವೇಗೌಡ ಅವರು ಸಹ ರಾಜೀನಾಮೆ ಕೊಡುತ್ತಾರೆ ಕಾದು ನೋಡಿ. ಸಾ.ರಾ.ಮಹೇಶ್ ನಡವಳಿಕೆ ಸರಿಯಿಲ್ಲ. ಜಿ.ಟಿ.ದೇವೇಗೌಡ ಬೇಸತ್ತು ಹೋಗಿದ್ದಾರೆ. ಅವರು ಎಲ್ಲ ಪಕ್ಷದಲ್ಲಿ ಇದ್ದು ಬಂದಿರುವವರು ರಾಜೀನಾಮೆ ನೀಡುವ ಸಾಧ್ಯತೆ ಇದೆ' ಎಂದು ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದರು.
ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನದಿಂದ ದೇವೇಗೌಡ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ.












Click it and Unblock the Notifications