ಪೇಜಾವರ ಹಿರಿಯ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಲಾಗದಿದ್ದವರಿಗೆ ಪುಷ್ಪನಮನದ ಅವಕಾಶ
ಬೆಂಗಳೂರು, ಜ 5: ಕೃಷ್ಣೈಕ್ಯರಾದ ಉಡುಪಿ ಪೇಜಾವರ ಮಠದ ಹಿರಿಯ ಶ್ರೀಗಳು, ಶತಮಾನದ ಸಂತ ವಿಶ್ವೇಶ್ವತೀರ್ಥ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶನಿವಾರದಂದು (ಜ 11), ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂಜೆ ನಾಲ್ಕು ಗಂಟೆಯಿಂದ ಈ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡುತ್ತಿದ್ದ ಶಾಸಕ ಅರವಿಂದ ಲಿಂಬಾವಳಿ, "ಪಕ್ಷಾತೀತವಾಗಿ ರಾಜಕೀಯ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಧಾರ್ಮಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನುವುದು ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದೆ" ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡುತ್ತಾ, "ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಲಾಗದಿದ್ದವರಿಗೆ, ಜನವರಿ ಹನ್ನೊಂದರ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸುವ ಅವಕಾಶವಿದೆ. ಶ್ರೀಗಳ ಬಗ್ಗೆ ತಮ್ಮ ಅನುಭವವನ್ನೂ ಹಂಚಿಕೊಳ್ಳಬಹುದಾಗಿದೆ" ಎಂದು ಹೇಳಿದರು.
"ಈ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳ ಅಪರೂಪದ ಚಿತ್ರಸಂಗ್ರಹದ ಪ್ರದರ್ಶನವೂ ನಡೆಯಲಿದೆ. ಇದು ಸಾರ್ವಜನಿಕರಿಗೆ ಮುಕ್ತವಾದಂತಹ ಕಾರ್ಯಕ್ರಮ" ಎಂದು ಶರವಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಿ.ಸುಬ್ಬಣ್ಣ, ಸಿ.ಕೆ.ರಾಮಮೂರ್ತಿ, ಜಯಸಿಂಹ, ಪೂರ್ಣಪ್ರಜ್ಞ ವಿದ್ಯಾಪೀಠದ ಗೌರವ ಕಾರ್ಯದರ್ಶಿ ವಿದ್ವಾನ್ ಕೇಶವಾಚಾರ್ಯ ಮುಂತಾದವರು ಹಾಜರಿದ್ದರು.












Click it and Unblock the Notifications