DK Shivakumar: ನಾನು ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾರೆ : ಡಿಕೆ ಶಿವಕುಮಾರ್
ಹುಬ್ಬಳ್ಳಿ, ಜನವರಿ 22: ನಾನು ಮುಖ್ಯಮಂತ್ರಿ ಆಗಲಿ ಎಂದು ಗುಣಧರನಂದಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ. ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾ ಇರ್ತಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ವರೂರು ನವಗ್ರಹ ತೀರ್ಥಕ್ಷೇತ್ರದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾ ಇರ್ತಾರೆ. ವಿನಯ್ ಗುರೂಜಿ ಈ ಮಾತನ್ನು ಹೇಳಿದ್ದರು. ಈಗ ಗುಣಧರನಂದಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಎಂದರು.

ಅಹಿಂಸೆ, ಸತ್ಯ, ತ್ಯಾಗಕ್ಕೆ ಮತ್ತೊಂದು ಹೆಸರು ಜೈನ ಧರ್ಮ. ಈ ಡಿ ಕೆ ಶಿವಕುಮಾರ್ ನಿಮ್ಮ ಧರ್ಮದ ಜೊತೆಗೆ ಇರ್ತಾನೆ. ನನ್ನ ಮೇಲೆ ನಂಬಿಕೆ ಇಡಿ ಜೈನ ಅಭಿವೃದ್ಧಿ ನಿಗಮ ಮಾಡಲು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ, ಮುಂಬರುವ ಬಜೆಟ್ ನಲ್ಲಿಯೇ ರಚನೆ ಮಾಡಲು ಮನವಿ ಮಾಡ್ತೇನೆ. ಅಲ್ಪಸಂಖ್ಯಾತ ಸ್ಥಾನಮಾನ ಕೊಟ್ಟಿದ್ದು ನಮ್ಮ ಕಾಂಗ್ರೆಸ್. ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ ಅಲ್ಪಸಂಖ್ಯಾತ ಸ್ಥಾನಮಾನ ಕೊಡಲಾಗಿದೆ. ನಮ್ಮ ಸರ್ಕಾರ, ನಮ್ಮ ಪಕ್ಷ ನಿಮ್ಮ ಜೊತೆಗೆ ಇರುತ್ತದೆ ಎಂದು ಭರವಸೆ ನೀಡಿದರು.
ನಾನು ನನ್ನ ಕರ್ತವ್ಯ ಮಾಡುತ್ತೇನೆ. ಮಿಕ್ಕಿದ್ದು ಪಕ್ಷ ತೀರ್ಮಾನ ಮಾಡುತ್ತದೆ. ಧರ್ಮಗುರುಗಳು ಆಶೀರ್ವಾದ ಮಾಡುವಾಗ ನಾವು ಏನು ಹೇಳಲು ಸಾಧ್ಯ? ಅದು ಅವರ ಇಚ್ಛೆ. ಏನೇ ಇದ್ದರೂ ನಮ್ಮ ಪಕ್ಷವಷ್ಟೇ. ಪಕ್ಷ ಮುಖ್ಯ. ಪಕ್ಷ ಏನು ತೀರ್ಮಾನ ಮಾಡುತ್ತದೋ, ಅದನ್ನು ನಾವು ಮಾಡುತ್ತೇವೆ. ನಾನು ಯಾವುದೇ ಸ್ಥಾನವನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಏನು ಕೆಲಸ ಮಾಡಬೇಕೋ ಅದನ್ನು ನಾನು ಮಾಡುತ್ತೇನೆ. ನಾನು ಆತುರದಲ್ಲಿಲ್ಲ ಎಂದು ತಿಳಿಸಿದರು.
ಇನ್ನೂ ಬಿಜೆಪಿ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಅವರು ನಿಮ್ಮ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಡಿಕೆ ಶಿವಕುಮಾರ್ ಗಾಗಿ ಶತ್ರು ಸಂಹಾರ ಪೂಜೆ
ಡಿ ಕೆ ಶಿವಕುಮಾರ್ ಗಾಗಿ ಸುಮೇರು ಪರ್ವತದಲ್ಲಿನ ಪಾರ್ಶ್ವನಾಥರ ತೀರ್ಥಂಕರ ಎದುರು ಪೂಜೆ ವೇಳೆ ಶತ್ರು ಸಂಹಾರ ಮಂತ್ರ ಪಠಿಸಲಾಯಿತು. ಎರಡು ಬಾರಿ ಶತ್ರು ಸಂಹಾರ ಮಂತ್ರವನ್ನು ಜೈನ ಮುನಿ ಗುಣಧರನಂದಿ ಸ್ವಾಮೀಜಿ ಪಠಿಸಿದರು. ಮಹಾಮಸ್ತಕಾಭಿಷೇಕದ ವೇದಿಕೆ ಕಾರ್ಯಕ್ರಮ ನಂತರ ಸುಮೇರು ಪರ್ವತ ವೀಕ್ಷಣೆಗೆ ತೆರಳಿದ್ದ ಡಿಕೆ ಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಡಿ.ಸುಧಾಕರ, ಶಾಸಕ ಎನ್ ಹೆಚ್ ಕೋನರಡ್ಡಿ ಎದುರೆ ಶತ್ರು ಸಂಹಾರ ಪೂಜೆ ನಡೆಸಿದ್ದು ವಿಶೇಷವಾಗಿತ್ತು.












Click it and Unblock the Notifications