ರಂಭಾಪುರಿ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಗುಲ್ಬರ್ಗ ಸಜ್ಜು
ಗುಲ್ಬರ್ಗ, ಅ.14 : ಕರ್ನಾಟಕದಲ್ಲಿ ಭಾರೀ ವಿವಾದ ಹುಟ್ಟುಹಾಕಿರುವ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸೋಮವಾರ ಮಧ್ಯಾಹ್ನ ಜೇವರ್ಗಿಯಲ್ಲಿ ನಡೆಯಲಿದೆ. ಅಡ್ಡ ಪಲ್ಲಕ್ಕಿ ಉತ್ಸವದ ಹಿನ್ನಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗುಲ್ಬರ್ಗ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಭಾನುವಾರ ರಂಭಾಪುರಿಯ ರೇಣುಕಾ ವೀರಸೋಮೇಶ್ವರ ಸ್ವಾಮೀಜಿ ಜಗದ್ಗುರುಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸೋಮವಾರ ಮಧ್ಯಾಹ್ನ 3.15ಕ್ಕೆ ಪ್ರಾರಂಭಿಸಿ ಸಂಜೆ 6 ಗಂಟೆಯೊಳಗೆ ಉತ್ಸವ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ಶುಕ್ರವಾರ ಬೆಂಗಳೂರಿನಲ್ಲಿ ನಿಡುಮಾಮಿಡಿ ಚೆನ್ನಮಲ್ಲ ಶಿವಾಚಾರ್ಯರು ಹಾಗೂ ಮಾತೆ ಮಹಾದೇವಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಅಡ್ಡಪಲ್ಲಕ್ಕಿ ಉತ್ಸವ ತಡೆಯುವಂತೆ ಮನವಿ ಮಾಡಿದ್ದರು. (ಅಡ್ಡಪಲ್ಲಕ್ಕಿ ಉತ್ಸವಕ್ಕೆ ಮತ್ತೆ ಅಡ್ಡಗಾಲು)
ಮಠಾಧೀಶರ ನಿಯೋಗಕ್ಕೆ ರಂಭಾಪುರಿ ಶ್ರೀಗಳ ಜೊತೆ ಮಾತುಕತೆ ನಡೆಸಲು ಜಿಲ್ಲಾಧಿಕಾರಿಗೆ ಸೂಚಿಸುವುದಾಗಿ ಸಿಎಂ ಭರವಸೆ ನೀಡಿದ್ದರು. ಆದ್ದರಿಂದ ಭಾನುವಾರ ಜಿಲ್ಲಾಧಿಕಾರಿ ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
21 ನೇ ಶತಮಾನದಲ್ಲಿ ಮಾನವರು ಮಾನವರ ಹೆಗಲ ಮೇಲೆ ಹೋಗುವ ಅನಾಗರಿಕ ಅಡ್ಡ ಪಲ್ಲಕ್ಕಿ ಉತ್ಸವ ನಡೆಯುವುದು ಅಸಹನೀಯ. ಇದನ್ನು ಕೂಡಲೇ ರಾಜ್ಯ ಸರ್ಕಾರ ನಿಷೇಧಿಸಬೇಕೆಂದು ವಿವಿಧ ಮಠಾಧೀಶರು ಆಗ್ರಹಿಸಿದ್ದಾರೆ.
ಆದ್ದರಿಂದ ಕರ್ನಾಟಕದಲ್ಲಿ ಕೆಲವು ದಿನಗಳಿಂದ ಈ ಅಡ್ಡ ಪಲ್ಲಕ್ಕಿ ಉತ್ಸವ ವಿವಾದ ಹುಟ್ಟು ಹಾಕಿತ್ತು. ಎರಡೂ ಬಣಗಳ ಜೊತೆ ಮಾತುಕತೆ ನಡೆಸಿದ ಬಳಿಕ ಜಿಲ್ಲಾಧಿಕಾರಿ, ಅಡ್ಡಪಲ್ಲಕಿ ಉತ್ಸವ ನಡೆಸಲು ಅನುಮತಿ ನೀಡಿದ್ದಾರೆ.
ಏನಿದು ಆಚರಣೆ : ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿರುವ ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ರಂಭಾಪುರಿ ಮಠಾಧೀಶರು ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ದಸರಾ ದರ್ಬಾರ್ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ನಡೆಸುತ್ತಾರೆ. (ಅಡ್ಡಪಲ್ಲಕ್ಕಿ ಉತ್ಸವ ವಿವಾದ ಅಂತ್ಯ)
ಈ ವರ್ಷ ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ಅ.5 ದಸರಾ ದರ್ಬಾರ್ ಪ್ರಾರಂಭವಾಗಿದೆ. ಸೋಮವಾರ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ದರ್ಬಾರ್ ಮುಕ್ತಾಯವಾಗುತ್ತದೆ. ಈ ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ವಿವಿಧ ಮಠಾಧೀಶರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications