ಅತಿಥಿ ಶಿಕ್ಷಕರ ನೇಮಕಾತಿ; ಹೊಸ ಸೂಚನೆ ಕೊಟ್ಟ ಶಿಕ್ಷಣ ಇಲಾಖೆ
ಬೆಂಗಳೂರು, ಅಕ್ಟೋಬರ್ 05; ಸರ್ಕಾರಿ ಪ್ರಾಥಮಿಕ/ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದರ ಕುರಿತು ಶಿಕ್ಷಣ ಇಲಾಖೆ ಜ್ಞಾಪನಾ ಪತ್ರವೊಂದನ್ನು ಹೊರಡಿಸಿದೆ.
ಬಿ. ಬಿ. ಕಾವೇರಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಈ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಪ್ರಾಥಮಿಕ/ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದರ ಕುರಿತು ಎಂಬ ವಿಷಯವನ್ನು ಪತ್ರ ಒಳಗೊಂಡಿದೆ.

ಸರ್ಕಾರದ ಆದೇಶ 25/05/2023, ಕಛೇರಿ ಜ್ಞಾಪನಾ ಸಮ ಸಂಖ್ಯೆ ದಿನಾಂಕ 25/05/2023, 23/08/2023 ಮತ್ತು 16/09/2023. ಅಪರ ಆಯುಕ್ತರ ಕಛೇರಿ, ಕಲಬುರ್ಗಿ, ಇವರ ಜ್ಞಾಪನಾದೇಶ ದಿನಾಂಕ 06/09/2023 ಉಲ್ಲೇಖ ಮಾಡಿದ್ದಾರೆ.
ಜ್ಞಾಪನಾ ಪತ್ರದ ವಿವರ; ಜ್ಞಾಪನಾ ಪತ್ರದಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ/ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ಸರ್ಕಾರದ ಆದೇಶದಂತೆ ಒಟ್ಟು 37,758 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿರುತ್ತದೆ. ಅದರಂತೆ ಜಿಲ್ಲಾವಾರು ಹಂಚಿಕೆ ಮಾಡಿ ಸೂಚನೆಗಳನ್ನು ನೀಡಲಾಗಿರುತ್ತದೆ.
ಪ್ರಸ್ತುತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯ ಪ್ರಕ್ರಿಯೆಯು ಮುಕ್ತಾಯವಾಗಿದ್ದು, ವರ್ಗಾವಣೆಗೊಂಡ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಚಾಲನಾದೇಶ ನೀಡಲು ಆಯಾ ಜಿಲ್ಲಾ ಉಪನಿರ್ದೇಶಕರುಗಳಿಗೆ ತಿಳಿಸಲಾಗಿರುತ್ತದೆ ಎಂದು ತಿಳಿಸಿದೆ.
ಆದರೆ ಕೆಲವೊಂದು ಜಿಲ್ಲೆಗಳಲ್ಲಿ ವರ್ಗಾವಣೆಗೊಂಡ ಶಿಕ್ಷಕರನ್ನು ಶಾಲಾ ಕರ್ತವ್ಯದಿಂದ ಬಿಡುಗಡೆಗೊಳಿಸದೇ ಅದೇ ಹುದ್ದೆಯನ್ನು ಖಾಲಿ ಹುದ್ದೆಯೆಂದು ಪರಿಗಣಿಸಿ ನಿಯಮಬಾಹಿರವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿರುವುದು ಕಛೇರಿಯ ಗಮನಕ್ಕೆ ಬಂದಿರುತ್ತದೆ ಎಂದು ಹೇಳಿದೆ.
ಈ ರೀತಿ ಒಂದೇ ಹುದ್ದೆಯಲ್ಲಿ ಇಬ್ಬರು ಶಿಕ್ಷಕರುಗಳನ್ನು ನೇಮಕಾತಿ ಮಾಡಿ ವೇತನವನ್ನು ಪಾವತಿಸುತ್ತಿರುವ ಕ್ರಮ ನಿಯಮಬಾಹಿರಗಿರುತ್ತದೆ. ಈ ರೀತಿ ನಿಯಮಬಾಹಿರ ಕ್ರಮವಹಿಸಿರುವುದು ಧೃಢಪಟ್ಟಲ್ಲಿ ಸಂಬಂಧಪಟ್ಟ ಉಪನಿರ್ದೇಶಕರು/ ಕ್ಷೇತ್ರ ಶಿಕ್ಷಣಾಧಿಕಾರಿಗಳು/ ಸಂಬಂಧಪಟ್ಟ ಶಾಲಾ ಮುಖ್ಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದೆ.
ಜೊತೆಗೆ ಸರ್ಕಾರಕ್ಕೆ ಉಂಟಾದ ಆರ್ಥಿಕ ನಷ್ಟವನ್ನು ಸಂಬಂಧಪಟ್ಟವರಿಂದಲೇ ವಸೂಲಾತಿಗೆ ಕ್ರಮವಹಿಸಲಾಗುವುದು. ಆದ್ದರಿಂದ ಇಂತಹ ಪ್ರಕರಣಗಳು ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲಿಸಿ ತುರ್ತಾಗಿ ಕಛೇರಿಗೆ ದಿನಾಂಕ 04/10/2023ರೊಳಗೆ ವರದಿ ನೀಡುವಂತೆ ಪತ್ರದಲ್ಲಿ ಸೂಚಿಸಲಾಗಿದೆ.
ಶಿಕ್ಷಣ ಇಲಾಖೆ ಷರತ್ತುಗಳಂತೆ ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗಳಿಗೆ ಮಾತ್ರ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಂಡು, ವರ್ಗಾಯಿತ ಶಿಕ್ಷಕರನ್ನು ಬಿಡುಗಡೆಗೊಳಿಸತಕ್ಕದ್ದು. ಯಾವುದೇ ಗೊಂದಲ/ ದೂರುಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯಿಂದ ನೇಮಕ ಮಾಡಿಕೊಂಡು ಶೈಕ್ಷಣಿಕವಾಗಿ ಹಿನ್ನಡೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆಯೇ ಸುತ್ತೋಲೆಯಲ್ಲಿ ತಿಳಿಸಿತ್ತು.












Click it and Unblock the Notifications