Congress guarantee: ಅತ್ತೆ ಒಪ್ಪಿದಲ್ಲಿ ಮಾತ್ರ ಸೊಸೆಗೆ ಕಾಂಗ್ರೆಸ್ ಗ್ಯಾರಂಟಿ ಹಣ: ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ, ಮೇ 31: ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿರುವ ಕಾಂಗ್ರೆಸ್ ಗೆ ಇದೀಗ ಗ್ಯಾರಂಟಿ ಘೋಷಣೆಗಳ ಜಾರಿಯೇ ದೊಡ್ಡ ತಲೆನೋವಾಗಿದ್ದು, ಗ್ಯಾರಂಟಿ ಘೋಷಣೆ ಜಾರಿ ಕುರಿತು ಬಿಜೆಪಿ ಒತ್ತಾಯಿಸುತ್ತಿದೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಯಡಿ ಕುಟುಂಬದ ಒಡತಿಯಾದ ಅತ್ತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಈ ಕುರಿತು ಮಂಗಳವಾರ ಸುವರ್ಣ ಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ಸಂಪ್ರದಾಯದಲ್ಲಿ ಕುಟುಂಬದ ಒಡತಿಯಾದ ಅತ್ತೆಗೆ ಮಾಸಿಕವಾಗಿ 2 ಸಾವಿರ ರೂ. ಗೌರವ ಧನ ನೀಡಲಾಗುವುದು. ಒಂದು ವೇಳೆ ಅತ್ತೆ ಒಪ್ಪಿಗೆ ನೀಡಿದ್ದಲ್ಲಿ ಸೊಸೆಗೆ ಆ ಗೃಹಲಕ್ಷ್ಮೀ ಗ್ಯಾರಂಟಿ ಗೌರವ ಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಕುಟುಂಬದ ಒಡತಿಗೆ 2 ಸಾವಿರ ರೂ. ಮಾಸಿಕ ಗೌರವ ಧನ ನೀಡುವುದಾಗಿ ಭರವಸೆ ಕೊಟ್ಟಿದೆ. ಅದರಂತೆ ನಮ್ಮ ಸರ್ಕಾರ ನಡೆದುಕೊಳ್ಳುತ್ತದೆ. ನೂರಕ್ಕೆ ನೂರಷ್ಟು ಐದು ಗ್ಯಾರಂಟಿಗಳನ್ನು ಸರ್ಕಾರ ಈಡೇರಿಸಲಿದೆ ಎಂದು ಹೇಳಿದರು.
ಇನ್ನೂ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆ ಕುರಿತು ಸಾಕಷ್ಟು ಒತ್ತಾಯ ಹಾಕುತ್ತಿದ್ದಾರೆ. ನಮ್ಮ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವುದೇ ಗೊಂದಲ ಇಲ್ಲ. ಪ್ರತಿಪಕ್ಷದವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಭೆ ಕರೆದಿದ್ದಾರೆ. ಸಿದ್ದರಾಮಯ್ಯ ಅವರು ಸಚಿವರ ಜೊತೆಗೆ ಚರ್ಚಿಸಲಿದ್ದಾರೆ. ಆ ಸಭೆಯಲ್ಲಿ ಗ್ಯಾರಂಟಿ ಘೋಷಣೆಗಳ ಮಾನದಂಡ ರೂಪಿಸಿ, ಕುಟುಂಬದ ಒಡತಿಯಾದ ಅತ್ತೆಗೆ ಮಾಸಿಕ ಗೌರವ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇತ್ತ ಕರ್ನಾಟಕ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಎಲ್ಲಾ ಭರವಸೆಗಳನ್ನು ಹಂತ, ಹಂತವಾಗಿ ಈಡೇರಿಸುತ್ತೇವೆ. ಈಗಾಗಲೇ ಇದರ ಕುರಿತಾಗಿ ಸಿದ್ಧತೆಗಳು ಸಹ ಆರಂಭವಾಗಿವೆ. ವಿಪಕ್ಷಗಳು ಸ್ವಲ್ಪ ತಾಳ್ಮೆಯಿಂದ ಇರಿ. ಹಾಗೆಂದು ಜನರನ್ನು ತುಂಬಾ ದಿನ ಕಾಯಿಸುವುದಿಲ್ಲ ಎಂದು ಭರವಸೆ ನೀಡಿದರು.
ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ, ಮನೆ ಒಡತಿಗೆ .2,000 ಮಾಸಿಕ ಗೌರವಧನ ಸೇರಿದಂತೆ ಜನತೆಗೆ ನೀಡಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದ ಅವರು, ಬಿಜೆಪಿಯವರು ಪ್ರತಿಯೊಬ್ಬರ ಖಾತೆಗೆ .15 ಲಕ್ಷ ಹಾಕುತ್ತೇವೆ ಎಂದು ಹೇಳಿ ಜನರನ್ನು ನಂಬಿಸಿ ಕೈ ಕೊಟ್ಟಿದ್ದಾರೆ. ನಾವು ಹಾಗಲ್ಲ, ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.












Click it and Unblock the Notifications