ಗೃಹಜ್ಯೋತಿ ಯೋಜನೆ; ನೋಂದಣಿಗೆ ಕೊನೆ ದಿನಾಂಕ ಘೋಷಣೆ
ಬೆಂಗಳೂರು, ಜುಲೈ 13; ಕರ್ನಾಟಕ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದು 'ಗೃಹಜ್ಯೋತಿ' ಯೋಜನೆ. ಜನರು ಈಗಾಗಲೇ ಯೋಜನೆಗೆ ಫಲಾನುಭವಿಯಾಗಲು ಅರ್ಜಿಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಸರ್ಕಾರ ಯೋಜನೆ ಫಲಾನುಭವಿಯಾಗಲು ನೋಂದಣಿ ಮಾಡಲು ಗಡುವು ನೀಡಿದೆ.
ಇಂಧನ ಸಚಿವ ಕೆ. ಜೆ. ಜಾರ್ಜ್ ವಿಧಾನಸಭೆ ಕಲಾಪದಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ್ದಾರೆ. 'ಗೃಹಜ್ಯೋತಿ' ಯೋಜನೆ ಕುರಿತಂತೆ ನಡೆದ ಚರ್ಚೆಯ ವೇಳೆ ಸಚಿವರು ಈ ಬಗ್ಗೆ ಮಾತನಾಡಿದರು. ಇನ್ನೂ ನೋಂದಣಿ ಮಾಡದ ಗ್ರಾಹಕರು ಬೇಗ ಅರ್ಜಿ ಸಲ್ಲಿಸಿ.

ಸಚಿವರು ಮಾತನಾಡಿ, "ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮೊದಲು ಕಡೆಯ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಈಗ, ಕಡೆಯ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದ್ದೇವೆ. ಅದರಂತೆ, ಜುಲೈ 27ರಂದು ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿರುತ್ತದೆ" ಎಂದು ಹೇಳಿದರು.
ಆತಂಕ ಬೇಡ; ಸರ್ಕಾರ ನೀಡಿದ ಗಡುವಿನೊಳಗೆ ಅರ್ಜಿ ಸಲ್ಲಿಕೆ ಮಾಡದಿದ್ದರೆ ಜನರು ಯಾವುದೇ ಆತಂಕ ಪಡಬೇಕಿಲ್ಲ. ಸಚಿವರು, "ಯೋಜನೆ ವ್ಯಾಪ್ತಿಯಿಂದ ಹೊರಗುಳಿದವರನ್ನು ಯೋಜನೆಯೊಳಕ್ಕೆ ತರಲು ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕದ ನಂತರ ಎರಡು ತಿಂಗಳವರೆಗೆ ವಿದ್ಯುತ್ ಅದಾಲತ್ ನಡೆಸಲಾಗುವುದು" ತಿಳಿಸಿದ್ದಾರೆ.
'ಗೃಹಜ್ಯೋತಿ' ಯೋಜನೆ ಫಲಾನುಭವಿಯಾಗಲು ಜೂನ್ 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈಗಾಗಲೇ 1 ಕೋಟಿಗೂ ಅಧಿಕ ಜನರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆ ಆಗಸ್ಟ್‌ನಲ್ಲಿ ಜಾರಿಗೆ ಬರಲಿದ್ದು, ಯೋಜನೆ ಫಲಾನುಭವಿಯಾಗಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಜನರು ಯೋಜನೆಯ ಫಲಾನುಭವಿಯಾಗಲು ಆನ್‌ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ (https://sevasindhugs.karnataka.gov.in/) ವಿವಿರಗಳನ್ನು ನೀಡಿ ಸುಲಭವಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಇಂಧನ ಇಲಾಖೆ ಹತ್ತಿರದ ನಿಮ್ಮ ಹತ್ತಿರದ ವಿದ್ಯುತ್ ಕಚೇರಿ, ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಮೊದಲು ಯೋಜನೆಗೆ ನೋಂದಣಿಯಾಗಲು ಡೆಡ್‌ಲೈನ್ ಇಲ್ಲ ಎಂದು ಹೇಳಿತ್ತು. ಈಗ ಜುಲೈ 27ರ ಅಂತಿಮ ದಿನಾಂಕ ನಿಗದಿ ಮಾಡಿದೆ.
'ಗೃಹಜ್ಯೋತಿ' ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಗ್ರಾಮೀಣ ಪ್ರದೇಶದ ಜನರು ಯೋಜನೆ ಫಲಾನುಭವಿಗಳು ಗ್ರಾಮ ಪಂಚಾಯತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಈ ಕೇಂದ್ರದಲ್ಲಿ ಅರ್ಜಿಗಳನ್ನು ಸಲ್ಲಿಸಲು ಪ್ರತಿ ಅರ್ಜಿಗೆ 20 ರೂ. ಗಳ ಶುಲ್ಕವನ್ನು ನಿಗದಿ ಮಾಡಲಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸಿ ಫಲಾನುಭವಿಯಾದವರು ಆಗಸ್ಟ್‌ನಲ್ಲಿ ಶೂನ್ಯ ಬಳಕೆಯ ವಿದ್ಯುತ್ ಬಿಲ್ ಪಡೆಯಲಿದ್ದಾರೆ. ರಾಜ್ಯದ ಗೃಹಬಳಕೆಯ ಗ್ರಾಹಕರಿಗೆ 200 ಯೂನಿಟ್‌ಗಳ ತನಕ ಉಚಿತ ವಿದ್ಯುತ್ ನೀಡುವ ಮಹತ್ವದ ಯೋಜನೆ 'ಗೃಹಜ್ಯೋತಿ'ಯಾಗಿದೆ. ಕಾಂಗ್ರೆಸ್ ಪಕ್ಷ 2023ರ ವಿಧಾನಸಭೆ ಚುನಾವಣೆಯಲ್ಲಿ ಜನರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ಕೊಟ್ಟಿತ್ತು.
ನೋಂದಣಿ ಮಾಡಲು ಲಿಂಕ್; ಜನರು 'ಗೃಹಜ್ಯೋತಿ' ಯೋಜನೆಗೆ ಹೆಸರು ನೋಂದಾಯಿಸುವ ಮೂಲಕ 200 ಯೂನಿಟ್ ತನಕ ಉಚಿತ ವಿದ್ಯುತ್ ಪಡೆಯಬಹುದು. ಈ ಯೋಜನೆಗೆ ನೋಂದಾಯಿಸಿಕೊಳ್ಳಲು https://sevasindhugs.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
ಜನರು 'ಗೃಹಜ್ಯೋತಿ' ಯೋಜನೆಗೆ ನೋಂದಣಿ ಮಾಡುವಾಗ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಬರುವ ಓಟಿಪಿ ನಮೂದು ಮಾಡಬೇಕು. ಉಳಿದಂತೆ ಕೆಳಗಿನ ವಿವರ ಭರ್ತಿ ಮಾಡಬೇಕಿದೆ.
* ಎಸ್ಕಾಂ ಹೆಸರು
* ಖಾತೆ ಸಂಖ್ಯೆ
* ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ
* ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ
* ಎಸ್ಕಾಂ ಹೆಸರು1
* ಬಳಕೆದಾರರ ವಿಧ (ಇಲ್ಲಿ ಎರಡು ಆಯ್ಕೆಗಳಿದ್ದು ಬಾಡಿಗೆದಾರರು/ ಮಾಲೀಕರು) ಎಂದಿದೆ
* ಆಧಾರ್ ಸಂಖ್ಯೆ
* ಅರ್ಜಿದಾರರ ಹೆಸರು
* ಸಂವಹನಕ್ಕಾಗಿ ದೂರವಾಣಿ ಸಂಖ್ಯೆ
ಸಿದ್ದರಾಮಯ್ಯ ಮನವಿ; ಜುಲೈ 6ರಂದು ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಗೆ ರಾಜ್ಯದ 1 ಕೋಟಿಗೂ ಅಧಿಕ ಕುಟುಂಬಗಳು ಯಶಸ್ವಿಯಾಗಿ ಅರ್ಜಿ ಸಲ್ಲಿಸಿವೆ. ಕನಿಷ್ಠ ನಿಬಂಧನೆಗಳು ಮತ್ತು ಸರಳ ಅರ್ಜಿ ಪ್ರಕ್ರಿಯೆಯ ಮೂಲಕ ಎಲ್ಲಾ ಅರ್ಹ ಕುಟುಂಬಗಳಿಗೆ ಯೋಜನೆಯನ್ನು ತಲುಪಿಸಬೇಕೆಂಬುದು ನಮ್ಮ ಉದ್ದೇಶ. ಯೋಜನೆಯ ವ್ಯಾಪ್ತಿಗೆ ಒಳಪಡುವವರು ತಪ್ಪದೇ ಅರ್ಜಿ ಸಲ್ಲಿಸಿ, ಇತರರಿಗೂ ಅರ್ಜಿ ಸಲ್ಲಿಸಲು ನೆರವಾಗಿ. ಬೆಲೆಯೇರಿಕೆಯಿಂದ ಸಂಕಷ್ಟದಲ್ಲಿರುವ ಜನರ ಬದುಕಲ್ಲಿ ನೆಮ್ಮದಿಯ ಬೆಳಕು ಮೂಡಲಿ" ಎಂದು ಮನವಿ ಮಾಡಿದ್ದರು.












Click it and Unblock the Notifications