ಹಸಿರು ಬಟಾಣಿಯಿಂದಲೂ ಕ್ಯಾನ್ಸರ್: ಆರೋಗ್ಯ ಇಲಾಖೆಯಿಂದ ಎಚ್ಚರಿಕೆ!
ಬೆಂಗಳೂರು ಫೆಬ್ರವರಿ 28: ಇಡ್ಲಿ ಬಳಿಕ ಈಗ ಹಸಿರು ಬಟಾಣಿಯಿಂದಲೂ ಕ್ಯಾನ್ಸರ್ ಬರುತ್ತದೆ ಎಂದು ಆಹಾರ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಈಗಾಗಲೇ ರಾಜ್ಯದಲ್ಲಿ ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ಜಂಟಿಯಾಗಿ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದು ಸ್ಯಾಂಪಲ್ಸ್‌ಗಳನ್ನು ಕಲೆ ಹಾಕಿ ಪರೀಕ್ಷೆಗೆ ಒಳಪಡಿಸಿವೆ. ಈ ವರದಿಯಲ್ಲಿ ಬಟಾಣಿ ಬಣ್ಣಕ್ಕಾಗಿ ಬಳಸುವ ಕಲರ್ ದೇಹಕ್ಕೆ ಹಾನಿಕಾರಕವಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ನಾನಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎನ್ನಲಾಗಿದೆ.
ಹೌದು... ಶೇಖರಿಸಿದ ಬಟಾಣಿ, ಬಣ್ಣ ಹಾಕಿದ ಬಟಾಣಿ ಹಾಗೂ ರಸ್ತೆ ಬದಿ ಮಾರಾಟವಾಗುವ ಬಗೆ ಬಗೆಯ ಬಣ್ಣದ ಬಟಾಣಿಗಳ ಮಾರಾಟ ಮಳಿಗೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಬಟಾಣಿಗಳ ಸ್ಯಾಂಪಲ್ಸ್ ಕಲೆ ಹಾಕಲಾಗಿತ್ತು. ಈ ಸ್ಯಾಂಪಲ್ಸ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಇದರ ವರದಿ ಬಂದಿದ್ದು ಈ ಬಣ್ಣದ ಬಟಾಣಿ ಸೇವನೆಯಿಂದ ಮಾರಕ ಕ್ಯಾನ್ಸರ್ ಬರಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಇಂತಹ ನಿಷೇಧಿತ ಬಣ್ಣ ಬಳಿಸಿದ ಬಟಾಣಿ ಬಳಕೆಯಿಂದ ಹೃದಯ ಸಂಬಂಧಿ ಕಾಯಿಲೆಗಳು, ಕಿಡ್ನಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಆಹಾರ ತಜ್ಞರು ತಿಳಿಸಿದ್ದಾರೆ. ಈಗಾಗಲೇ 8-10 ಕಡೆ ಕ್ಯಾನ್ಸರ್ ಕಾರಕ ಅಂಶವಿರುವ ಬಟಾಣಿ ಮಾರಾಟ ಮಾಡುವುದು ಪತ್ತೆ ಮಾಡಲಾಗಿದೆ.
ಇಂದು ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ
ಇನ್ನೂ ಇಡ್ಲಿ ತಯಾರಿಕೆಯಲ್ಲಿ ಬಳಸಲಾಗುವ ಪ್ಲಾಸ್ಟಿಕ್ ಪೇಪರ್ ನಿಂದಾಗಿ ಕ್ಯಾನ್ಸರ್ ಬರುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ದಾಳಿ ವೇಳೆ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡು ಬಂದಿದೆ. ಇಡ್ಲಿಯನ್ನು ಬೇಯಿಸಲು ಪ್ಲಾಸ್ಟಿಕ್ ಪೇಪರ್‌ಗಳನ್ನು ಬಳಕೆ ಮಾಡಲಾಗುತ್ತದೆ. ಇದು ಬಿಸಿಗೆ ಕರಗಿ ಇದರಿಂದ ಕ್ಯಾನ್ಸರ್ ಕಾರಕ ಅಂಶ ಇಡ್ಲಿಯಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ಇಡ್ಲಿ ವಿಷಕಾರಿಯಾಗುತ್ತದೆ ಎಂದು ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆ ಪರೀಕ್ಷಾ ವರದಿಯಿಂದ ತಿಳಿದು ಬಂದಿದೆ.
ಹೀಗಾಗಿ ಈ ವರದಿಯ ಬಗ್ಗೆ ಮಾತನಾಡಲು ಇಂದು ಮಧ್ಯಾಹ್ನ ಸಚಿವ ದಿನೇಶ್‌ಗುಂಡೂರಾವ್ ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಯಾವ ಹೋಟೆಲ್‌ಗಳಲ್ಲಿ ತಯಾರಾಗುವ ಇಡ್ಲಿ ಹಾನಿಕಾರಕ ಎಂದು ತಿಳಿಸುವ ಸಾಧ್ಯತೆ ಇದೆ. ಜೊತೆಗೆ ಇಡ್ಲಿ ತಯಾರಿಸಲು ಹಾಗೂ ಪಾರ್ಸಲ್ ಮಾಡಲು ಪ್ಲಾಸ್ಟಿಕ್ ಬಳಕೆ ತಪ್ಪಿಸುವಂತೆ ಆದೇಶ ನೀಡಲಿದ್ದಾರೆ. ಇಂತಹ ಇಡ್ಲಿಯನ್ನು ಸಾರ್ವಜನಿಕರು ಸೇವಿಸದೇ ಇರಲು ಕೂಡ ಸಲಹೆ ನೀಡಲಿದ್ದಾರೆ.
ಜೊತೆಗೆ ಯಾವೆಲ್ಲಾ ಹೋಟೆಲ್‌ಗಳ ಮೇಲೆ ದಾಳಿ ನಡೆದಿತ್ತು. ಅದರಲ್ಲಿ ಯಾವ ಹೋಟೆಲ್‌ಗಳ ಇಡ್ಲಿ ಹಾನಿಕಾರಕ ಹಾಗೂ ಸೇವನೆಗೆ ಯೋಗ್ಯವಲ್ಲ ಎನ್ನುವುದು ಗೊತ್ತಾಗಲಿದೆ.
ಗೋಬಿ, ಕಬಾಬ್ ತಯಾರಿಸಲು ಬಳಸುವ ಬಣ್ಣ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು ಇದನ್ನು ಬಳಸದಂತೆ ಈ ಹಿಂದೆ ಆರೋಗ್ಯ ಇಲಾಖೆ ವರದಿ ನೀಡಿತ್ತು. ಇದೀಗ ಬಟಾಣಿಗೆ ಬಳಸುವ ಬಣ್ಣ ಸೇವನೆಗೆ ಯೋಗ್ಯವಲ್ಲ ಎಂದು ವರದಿ ನೀಡಿದೆ. ಇಡ್ಲಿ ತಯಾರಿಕೆಗೆ, ಪಾರ್ಸಲ್ ಮಾಡಲು ಹಾಗೂ ಸೇವನೆಗೆ ನೀಡುವಾಗ ಬಳಸುವ ಪ್ಲಾಸ್ಟಕ್ ಕ್ಯಾನ್ಸರ್ ನಂತರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ವರದಿ ಬಂದಿದೆ.
ಹೀಗಾಗಿ ಈ ಎಲ್ಲಾ ವಿಷಯಗಳ ಬಗ್ಗೆ ಇಂದು ಸಚಿವ ದಿನೇಶ್ ಗುಂಡೂರಾವ್ ಮಾತನಾಡಲಿದ್ದು, ಯಾವ ಆಹಾರ ಸೇವನೆಗೆ ಯೋಗ್ಯ, ಯಾವುದು ಯೋಗ್ಯವಲ್ಲ ಎನ್ನುವುದನ್ನು ತಿಳಿಸಲಿದ್ದಾರೆ.












Click it and Unblock the Notifications