ಗ್ರೆಟರ್ ಬೆಂಗಳೂರು ಮಾಸ್ಟರ್ ಪ್ಲಾನ್ ಅಂತಿಮ ಹಂತಕ್ಕೆ- ಯಾವೆಲ್ಲಾ ಊರು ಬೆಂಗಳೂರಿಗೆ ಸೇರ್ಪಡೆ?
ಬೆಂಗಳೂರು, ಜುಲೈ 4: ಗ್ರೇಟರ್ ಬೆಂಗಳೂರಿನ ಬಗ್ಗೆ ಮಾಸ್ಟರ್ ಪ್ಲಾನ್ ಅಂತಿಮ ಹಂತದಲ್ಲಿದೆ. ಈ ಬಗ್ಗೆ ಮುಂದಿನ ವಾರ ಮುಖ್ಯಮಂತ್ರಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಬಿಬಿಎಂಪಿ ಅಧಿಕಾರಿಗಳ ಸಭೆ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯಿಸಿದ್ದು, ಯಾವ ಬಿಬಿಎಂಪಿಯನ್ನು ಒಡೆಯುವುದಿಲ್ಲ. ಈಗ ಎಲ್ಲವನ್ನು ಹೇಳಲು ಆಗುವುದಿಲ್ಲ. ಸಭೆ ಸೇರಿದ್ದು ಕೇವಲ ಗ್ರೇಟರ್ ಬೆಂಗಳೂರು ವಿಚಾರಕ್ಕಲ್ಲ. ಚುನಾವಣೆ ಇದ್ದ ಕಾರಣ, ಕಳೆದ ನಾಲ್ಕು ತಿಂಗಳುಗಳಿಂದ ಅನೇಕ ಕೆಲಸಗಳು ಬಾಕಿ ಉಳಿದಿದ್ದವು. ಈ ವಿಚಾರವಾಗಿ ಚರ್ಚೆ ಮಾಡಲು ಸಭೆ ಸೇರಲಾಗಿತ್ತು ಎಂದು ಹೇಳಿದರು.

ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಅವರು, ಇದರ ಬಗ್ಗೆ ಆನಂತರ ಚರ್ಚೆ ಮಾಡುತ್ತೇನೆ. ಚನ್ನಪಟ್ಟಣ ಚನ್ನಪಟ್ಟಣದಲ್ಲಿಯೇ ಇರುತ್ತದೆ, ರಾಮನಗರ ರಾಮನಗರದಲ್ಲಿ ಇರುತ್ತದೆ, ಮಾಗಡಿ ಮಾಗಡಿಯಲ್ಲಿ ಇರುತ್ತದೆ, ಕನಕಪುರ ಕನಕಪುರದಲ್ಲಿಯೇ ಇರುತ್ತದೆ ಎಂದು ಹೇಳಿದರು.
ಚನ್ನಪಟ್ಟಣ ತಾಲ್ಲೂಕು ಡಿ.ಕೆ. ಶಿವಕುಮಾರ್ ಮುಂದಾಳತ್ವದಲ್ಲಿ ಬೆಂಗಳೂರು ಆಗಲಿದೆ. ಚನ್ನಪಟ್ಟಣಕ್ಕೆ ಹೊಸ ಚೈತನ್ಯ ತುಂಬಲು ನಾನು ಬಂದಿದ್ದೇನೆ" ಎಂದು ಡಿ ಸಿ ಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ನಾವೆಲ್ಲ ಬೆಂಗಳೂರು ಜಿಲ್ಲೆಯವರು. ನಾವೆಲ್ಲ ಇದ್ದಿದ್ದು ಬೆಂಗಳೂರಿನಲ್ಲಿ, ಈಗಲೂ ಇರುವುದು ಬೆಂಗಳೂರಿನಲ್ಲಿ. ಇರುವ ಹೆಸರನ್ನು ನಾವೇಕೆ ಕಳೆದುಕೊಳ್ಳಬೇಕು. ಇನ್ನೆರಡು ದಿನ ಕಾಯಿರಿ. ನಾವು ಎಲ್ಲಿಗೆ ಸೇರಿದವರು ಎಂಬ ಮಾಹಿತಿ ಬೇಕಾದರೆ ಪಠ್ಯ ಪುಸ್ತಕಗಳನ್ನು ತೆಗೆದುನೋಡಿ. ಹೊಸಕೋಟೆ, ದೇವನಹಳ್ಳಿ, ಮಾಗಡಿ, ಕನಕಪುರ ಹೀಗೆ ನಾವೆಲ್ಲ ಬೆಂಗಳೂರಿಗೆ ಸೇರಿದವರು ಎಂದು ಪುನರುಚ್ಚರಿಸಿದರು.
ರಾಮನಗರ, ಚನ್ನಪಟ್ಟಣವನ್ನು ಅವಳಿ ನಗರಗಳನ್ನಾಗಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದರು ಎಂದು ಕೇಳಿದಾಗ "ಅವರು ಎರಡು ಬಾರಿ ಸಿಎಂ ಆಗಿದ್ದರು ಆಗ ಮಾಡಿದ್ರಾ? ನಾನು ಕೊಟ್ಟಮಾತನ್ನು ಮರೆಯುವವನಲ್ಲ. ಮಾತ್ನನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ" ಎಂದು ಹೇಳಿದರು.
ಚನ್ನಪಟ್ಟಣ ಕತ್ತಲಲ್ಲಿದೆ ಈ ಕ್ಷೇತ್ರವನ್ನು ಅಭಿವೃದ್ಧಿ ಪಟ್ಟಣ ಮಾಡಬೇಕು ಎಂದು ಇಲ್ಲಿನ ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ದೀಪ ಹಚ್ಚಿದ್ದಾರೆ. ಅವರ ಕೈ ಬಲಪಡಿಸಲು ನಾನು ಬಂದಿದ್ದೇನೆ ಎಂದರು.












Click it and Unblock the Notifications