ನೇಮಕಾತಿ ಆದೇಶಕ್ಕಾಗಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ
ಬೆಂಗಳೂರು, ಜುಲೈ 03; ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರದ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿಯೇ ಸರ್ಕಾರದ ಮೇಲೆ ಒತ್ತಡ ಹೇರಲು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಧರಣಿ ಕುಳಿತಿದ್ದಾರೆ.
ನೇಮಕಾತಿ ಆದೇಶ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಸೋಮವಾರ ಆರಂಭಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಶಿಕ್ಷಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೇಮಕಾತಿ ಆದೇಶವಿಲ್ಲ; ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ನೇಮಕವಾದ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಮತ್ತು ನೇಮಕಾತಿ ಆದೇಶ ಸಿಕ್ಕಿಲ್ಲ. 2022ರ ಮೇ ತಿಂಗಳಿನಲ್ಲಿ ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷೆಯನ್ನು ಸುಮಾರು 70 ಸಾವಿರ ಅಭ್ಯರ್ಥಿಗಳು ಬರೆದಿದ್ದರು. ಅದರಲ್ಲಿ 13,352 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಆದರೆ ಕೆಲವು ಅಭ್ಯರ್ಥಿಗಳು ನೇಮಕಾತಿಯ ವಿಚಾರದಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರಿಂದ ಉಳಿದವರ ನೇಮಕಾತಿ ವಿಳಂಬವಾಗುತ್ತಿದೆ. ಯಾವುದೇ ಕಾನೂನು ತೊಡಕು ಇಲ್ಲದಿದ್ದರೂ ನೇಮಕಗೊಂಡಿರುವ 13 ಸಾವಿರ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಈ ಕೂಡಲೇ ನೇಮಕ ಪ್ರಕ್ರಿಯೆ ಚುರುಕುಗೊಳಿಸಬೇಕು ಎನ್ನುವುದು ಬೇಡಿಕೆಯಾಗಿದೆ.
ಖಾಸಗಿ ಸಂಸ್ಥೆಯಲ್ಲೂ ಕೆಲಸವಿಲ್ಲ; ನೇಮಕಾತಿ ವಿಳಂಬದಿಂದ ಹಲವಾರು ಸಮಸ್ಯೆ ಎದುರಿಸಬೇಕಾಗಿದೆ. ಬಹುಪಾಲು ಅಭ್ಯರ್ಥಿಗಳು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನೇಮಕಾತಿ ಪಟ್ಟಿಯಲ್ಲಿ ನಮ್ಮ ಹೆಸುರಿರುವುದರಿಂದ ಖಾಸಗಿ ಸಂಸ್ಥೆಗಳು ಕೆಲಸದಿಂದ ಕೈಬಿಡುತ್ತಿದ್ದು ಅಂತ್ರರಾಗುವ ಸ್ಥಿತಿ ಇದೆ ಎಂದು ಪ್ರತಿಭಟನಾನಿರತ ಶಿಕ್ಷಕರು ನೋವು ತೋಡಿಕೊಂಡಿದ್ದಾರೆ.
ದಾಖಲಾತಿಗಳ ಪರಿಶೀಲನೆ ಕಾರಣಕ್ಕೆ ಮೂಲ ದಾಖಲಾತಿಗಳನ್ನು ಇಲಾಖೆಗೆ ಕೊಟ್ಟಿರುವುದರಿಂದ ಬೇರೆ ಕಡೆ ಉದ್ಯೋಗ ಹುಡುಕಲು ಸಾಧ್ಯವಾಗುತ್ತಿಲ್ಲ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯೂ ಹತ್ತಿರದಲ್ಲಿದ್ದು ನೀತಿ ಸಂಹಿತೆ ಜಾರಿಯಾಗುವ ಆತಂಕವೂ ನಮ್ಮನ್ನು ಕಾಡುತ್ತಿದೆ ಎಂದು ಹೇಳಿದರು.
ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದವರಿಗೂ ಜಾತಿ ಮತ್ತು ಆದಾಯ ಸಿಂಧುತ್ವ ಕೇಳುತ್ತಿರುವುದು ಯಾವ ನ್ಯಾಯ?. ವಿಳಂಬವಾಗಿ ನೇಮಕಾತಿ ಆದೇಶ ನೀಡಿದರೆ ನಮ್ಮ ಮಕ್ಕಳ ಶಿಕ್ಷಣಕ್ಕೂ ಸಮಸ್ಯೆಯಾಗುತ್ತಿದ್ದು, ಈ ಕೂಡಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಖಾತೆ ಸಚಿವರಾದ ಮಧು ಬಂಗಾರಪ್ಪ ಅವರು ಸಮಸ್ಯೆ ಆಲಿಸಿ, ಪರಿಹಾರ ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.
ಉಂಟಾಗಿರುವ ಸಮಸ್ಯೆಗಳು; ಪರೀಕ್ಷೆಗಳು ನಡೆದು, ಫಲಿತಾಂಶ ಬಂದು, ಆಯ್ಕೆಗೊಂಡರೂ ಸಹ ನೇಮಕಾತಿ ವಿಳಂಬದಿಂದಾಗಿ ಅಭ್ಯರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
* ನಾವೆಲ್ಲರೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ನೇಮಕಾತಿಯ ಆಯ್ಕೆಪಟ್ಟಿಯಲ್ಲಿ ನಮ್ಮ ಹೆಸರುಗಳಿರುವ ಕಾರಣಕ್ಕಾಗಿಯೇ ಖಾಸಗಿ ಶಿಕ್ಷಣ ಸಂಸ್ಥೆಗಳು ಕಳೆದ ವಾರ್ಷಿಕ ಅಂಚಿನಲ್ಲಿ ನಮ್ಮನ್ನು ಕೆಲಸದಿಂದ ಕೈ ಬಿಟ್ಟಿರುತ್ತಾರೆ.
* ದಾಖಲಾತಿ ನೈಜತೆ ಪರಿಶೀಲನೆಗಾಗಿ ಮೂಲ ದಾಖಲಾತಿಗಳನ್ನು ಇಲಾಖೆಯ ವಶಕ್ಕೆ ಕೊಟ್ಟಿರುವುದರಿಂದ ಬೇರೆ ಕಡೆಗಳಲ್ಲಿ ಕೆಲಸಕ್ಕೆ ಸೇರಲು ಕಷ್ಟಸಾಧ್ಯವಾಗಿರುತ್ತದೆ.
* ಈ ಕಡೆ ನೇಮಕಾತಿ ಆದೇಶವೂ ಸಿಗದೆ, ಆ ಕಡೆ ಇರುವ ಉದ್ಯೋಗವನ್ನೂ ಕಳೆದುಕೊಂಡು ಜೀವನ ನಿರ್ವಹಣೆ ತುಂಬಾ ಕಷ್ಟದಾಯಕವಾಗಿದೆ. ಅದರ ಜೊತೆಗೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣಾ ನೀತಿ ಸಂಹಿತೆ ಜಾರಿ ಸಮೀಪದಲ್ಲಿಯೇ ಇರುವುದು ನಮ್ಮನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ.
* ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಸಂಖ್ಯೆಗಳಲ್ಲಿ ಶಿಕ್ಷಕರುಗಳಿಲ್ಲದೇ ಮಕ್ಕಳ ಶಿಕ್ಷಣದ ಗುಣಮಟ್ಟ ಕುಂಠಿತವಾಗುತ್ತಿದ್ದು ಇಲಾಖೆ ಮತ್ತು ಸರ್ಕಾರದ ಗುರಿ ಸಾಧನೆ ಕುಂಠಿತವಾಗುತ್ತಿದೆ.
* ಹೊಸದಾಗಿ ಆಯ್ಕೆಯಾದ ಶಿಕ್ಷಕರು ಯಾವಾಗ ನೇಮಕಾತಿ ಆದೇಶ ಸಿಗುತ್ತದೆ? ಮತ್ತು ಅವರು ಬೇರೆ ಬೇರೆ ಜಿಲ್ಲೆಗಳಲ್ಲಿ ಆಯ್ಕೆಯಾಗಿರುವುದರಿಂದ ತಮ್ಮ ಮಕ್ಕಳನ್ನು ಯಾವ ಶಾಲೆಗಳಿಗೆ ದಾಖಲು ಮಾಡಿಸಬೇಕು? ಯಾವ ಸ್ಥಳದಲ್ಲಿ ವಾಸವಾಗುತ್ತಾರೆ? ಎಂಬ ಗೊಂದಲ ಮತ್ತು ಆತಂಕದಲ್ಲಿದ್ದಾರೆ.
* ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೂ ಕೂಡ ಜಾತಿ ಮತ್ತು ಆದಾಯ ಸಿಂಧುತ್ವ ಮಾಡಿಸಬೇಕು ಎಂದು ಕೆಲವು ಜಿಲ್ಲೆಗಳ DDPI ಗಳು ಅಭ್ಯರ್ಥಿಗಳಿಗೆ ಸೂಚಿಸುತ್ತಿದ್ದು ಅಭ್ಯರ್ಥಿಗಳನ್ನು ಇನ್ನೂ ಆತಂಕಕ್ಕೆ ದೂಡಿದೆ.
* ಪ್ರಸ್ತುತ ನೇಮಕಾತಿಗೂ ವರ್ಗಾವಣೆ ಮತ್ತು ಮುಂಬಡ್ತಿಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೂ ಇಲಾಖೆ ಈ ಕಾರ್ಯ ಮುಗಿಸಿದ ಮೇಲೆ ನೇಮಕಾತಿ ಪ್ರಕ್ರಿಯೆ ಮುಗಿಸುತ್ತೇವೆ ಎಂದು ಹೇಳುತ್ತಿರುವುದರಿಂದ ನೇಮಕಾತಿ ತಡವಾಗುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಿದ್ದು, ಪುನಃ ಚುನಾವಣಾ ನೀತಿ ಸಂಹಿತೆ ಎದುರಾಗುವುದರಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಅಭ್ಯರ್ಥಿಗಳು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿಯೇ ಉಳಿಯಬೇಕಾಗುವ ಆತಂಕ ಎದುರಾಗಿದೆ.












Click it and Unblock the Notifications