ಕರ್ನಾಟಕದಲ್ಲಿ ಹೂಡಿಕೆಗೆ ಸೂಕ್ತ ವೇದಿಕೆ ರಚನೆ: 40,000 ಕೋಟಿ ರೂ.ಬಂಡವಾಳ ಹರಿವು
ಬೆಂಗಳೂರು, ಆಗಸ್ಟ್ 18: ಕರ್ನಾಟಕದಲ್ಲಿ ಅಮೆರಿಕ ದೇಶದ ಹತ್ತಾರು ಕಂಪನಿಗಳು ಹೂಡಿಕೆ ಮಾಡಲು ಮುಂದೆ ಬರುತ್ತಿವೆ. ಅವರಿಗೆ ಹೂಡಿಕೆಗೆ ಸುಗಮ ಅನುಕೂಲ ಕಲ್ಪಿಸಲು ಸೂಕ್ತ ವೇದಿಕೆಯೊಂದನ್ನು ರಚಿಸಲಾಗುವುದು. ಇದರ ಜತೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಕನಿಷ್ಠ ಪಕ್ಷ ಶೇಕಡ 75ರಷ್ಟಾದರೂ ಅಭಿವೃದ್ಧಿಪಡಿಸಿದ ಕೈಗಾರಿಕಾ ನಿವೇಶನಗಳನ್ನೇ ಇನ್ನು ಮುಂದೆ ಉದ್ಯಮಗಳಿಗೆ ನೀಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದರು.
ಅಮೆರಿಕನ್ ಚೇಬರ್ ಆಫ್ ಕಾಮರ್ಸ್ ಇನ್ ಇಂಡಿಯಾ ಸಂಘಟನೆಯ ಕರ್ನಾಟಕ ಘಟಕವು ಶುಕ್ರವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಸಚಿವರು ಮಾತನಾಡಿದರು. ಉದ್ಯಮಿಯೊಬ್ಬರ ಸಲಹೆಗೆ ಸ್ಪಂದಿಸಿದ ಸಚಿವರು, ಹಣಕಾಸು ಸಲಹಾ ಸಮಿತಿ ರಚಿಸುವ ಇಂಗಿತ ವ್ಯಕ್ತಪಡಿಸಿದರು.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡು ತಿಂಗಳಲ್ಲೇ 40 ಸಾವಿರ ಕೋಟಿ ರೂ. ಬಂಡವಾಳ ರಾಜ್ಯಕ್ಕೆ ಹರಿದು ಬರುವುದು ಖಾತ್ರಿ ಆಗಿದೆ. ಮಿಕ್ಕಂತೆ ಇನ್ನೂ 60 ಸಾವಿರ ಕೋಟಿ ರೂ. ಹೂಡಲು ಅನೇಕ ಕಂಪನಿಗಳು ಮುಂದೆ ಬಂದಿವೆ. ಅಂದರೆ, ಕ್ಷಿಪ್ರ ಕಾಲಾವಧಿಯಲ್ಲಿ 1 ಲಕ್ಷ ಕೋಟಿ ರೂ.ಗಳ ಒಟ್ಟು ಬಂಡವಾಳ ಹರಿದು ಬರಲಿದೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಟಾಟಾ ಸಮೂಹದ ಸಂಸ್ಥೆ ಮುಂದೆ ಬಂದಿದೆ. ಮೂರು ಕಡೆಗಳಲ್ಲಿ ಕಾಮನ್ ಫೆಸಿಲಿಟೀಸ್ ಸೆಂಟರ್‍ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

15 ದಿನಗಳಲ್ಲಿ ಉದ್ಯಮಿಗಳ ಸಭೆ
ರಾಜ್ಯದಲ್ಲಿ ಇರುವ ಕೈಗಾರಿಕಾ ನೀತಿಗಳು ಉತ್ತೇಜನಕಾರಿ ಆಗಿವೆ. ದೇಶದಲ್ಲಿ ಬೇರೆ ರಾಜ್ಯಗಳಲ್ಲಿ ಇರದೇ ಇರುವಂತಹ ಅನುಕೂಲಗಳನ್ನು ಈ ನೀತಿಗಳು ನೀಡುತ್ತಿದೆ. ಬಿಯಾಂಡ್ ಬೆಂಗಳೂರು ಉಪಕ್ರಮದಡಿ, ರಾಜಧಾನಿಯಿಂದ ಆಚೆಗೆ ಹೋಗಿ ಉದ್ದಿಮೆಗಳನ್ನು ಸ್ಥಾಪಿಸುವವರಿಗೆ ರಿಯಾಯಿತಿ ಕೊಡಲಾಗುತ್ತಿದೆ. ಇನ್ನು 15 ದಿನಗಳಲ್ಲಿ ಉದ್ಯಮಿಗಳ ಸಭೆ ಕರೆದು, ಅವರ ಆಲೋಚನೆಗಳಿಗೆ ಕಿವಿ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಕದ ಎಲ್ಲ ಕೈಗಾರಿಕಾ ಪ್ರದೇಶಗಳನ್ನೂ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ. ಇದಕ್ಕೆ ಪೂರಕವಾಗಿ ಹೊಸ ಕೈಗಾರಿಕಾ ನೀತಿಯನ್ನೂ ಜಾರಿಗೆ ತರುವ ಕೆಲಸ ನಡೆಯುತ್ತಿದೆ. ಅಗತ್ಯ ಭೂಮಿ, ನೀರು ಮತ್ತು ವಿದ್ಯುತ್ ಸಮೃದ್ಧವಾಗಿರುವ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಉದ್ಯಮಿಗಳು ಹೂಡಿಕೆಗೆ ಮನಸ್ಸು ಮಾಡಬೇಕು. ಅದನ್ನು ನಾವು ಸಂಪೂರ್ಣ ಸ್ವಾಗತಿಸುತ್ತೇವೆ ಎಂದು ಅವರು ಆಹ್ವಾನ ನೀಡಿದರು.
'ಇನ್ವೆಸ್ಟ್ ಕರ್ನಾಟಕ ಫೋರಂ' ಪುನರ್ ರಚನೆ
ರಾಜ್ಯದಲ್ಲಿ ಐಟಿ ಕ್ಷೇತ್ರ ಚೆನ್ನಾಗಿದೆ. ಇದರ ಜೊತೆಗೆ ಉತ್ಪಾದನಾ ಕ್ಷೇತ್ರವೂ ಅಭಿವೃದ್ಧಿ ಆಗಬೇಕು. ಹೀಗಾಗಿ ಇದಕ್ಕೆ ಪೂರಕವಾದ ನಿಯಮಗಳನ್ನು ರೂಪಿಸಲಾಗುವುದು. ಅಮೆರಿಕದ ಕಂಪನಿಗಳು ಇ-ಮೊಬಿಲಿಟಿ, ಇಎಸ್‌ಡಿಎಂ, ಪರಿಸರ ಸ್ನೇಹಿ ಇಂಧನ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಹೆಚ್ಚು ಹೂಡಿಕೆ ಮಾಡುವಂತೆ ಮಾತುಕತೆಗೆ ಚಾಲನೆ ನೀಡಲಾಗಿದೆ. ಇವೆಲ್ಲವೂ ಸಾಧ್ಯವಾಗುವಂತೆ ನೋಡಿಕೊಳ್ಳಲು 'ಇನ್ವೆಸ್ಟ್ ಕರ್ನಾಟಕ ಫೋರಂ' ಅನ್ನು ಪುನರ್ ರಚನೆ ಮಾಡಲಾಗುತ್ತಿದೆ.
ಇದಷ್ಟೇ ಅಲ್ಲದೇ ಹೂಡಿಕೆ ಆಕರ್ಷಿಸಲು ಸರ್ಕಾರಕ್ಕೆ ಸೂಕ್ತ ಸಲಹೆ ನೀಡಲು 'ಸ್ಟ್ರಾಟೆಜಿಕ್ ಇನ್ವೆಸ್ಟ್‌ಮೆಂಟ್ಸ್ ಕಮಿಟಿ' (SIC)ಯನ್ನು ಕೂಡ ರಚಿಸಲಾಗುತ್ತಿದೆ ಎಂದು ಪಾಟೀಲ್ ತಿಳಿಸಿದರು. ಕಾರ್ಯಕ್ರಮದಲ್ಲಿ ಅಮೆಚಾನ್ ಪ್ರತಿನಿಧಿಗಳಾದ ರಾಜಾನ್ ಖನ್ನಾ, ಸೋಮ್ ಸತ್ಸಂಗಿ, ಅತುಲ್ ಉಜಗರ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications