'ಜನರು ಸರ್ಕಾರಕ್ಕೆ ಮಹಾಮಂಗಳಾರತಿ ಮಾಡುತ್ತಿದ್ದಾರೆ'

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 28 : ರಾಜ್ಯದಲ್ಲಿ ತೀವ್ರ ಬರಗಾಲವಿದ್ದು ಅನ್ನ ನೀರು, ಮೇವಿಲ್ಲದೆ ಜನರು ಮತ್ತು ಜಾನುವಾರುಗಳು ತತ್ತರಿಸಿ ಹೋಗಿದ್ದಾರೆ. ಬರ ಪರಿಸ್ಥಿತಿಯ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸರ್ಕಾರ ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡಂತೆ ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಮತ್ತು ಸಚಿವರುಗಳಿಗೆ ಜನತೆ ಸುಡು ಬಿಸಿಲಲ್ಲೇ ಮಹಾಮಂಗಳಾರತಿ ಮಾಡುತ್ತಿದ್ದಾರೆ. ಬರ ಅಧ್ಯಯನ ಪ್ರವಾಸ ಕೇವಲ ಕಾಟಾಚಾರದ್ದು, ಜನತೆಯ ಕಣ್ಣೋರೆಸುವ ನಾಟಕ ಎಂದು ಪ್ರಕಟಣೆಯಲ್ಲಿ ಕುಮಾರಸ್ವಾಮಿ ದೂರಿದ್ದಾರೆ. [ರಣಬಿಸಿಲಿಗೆ ನೆಲಕಚ್ಚಿದ ಹೂಕೋಸು, ರೈತರಿಗೆ ಸಂಕಷ್ಟ]

kumaraswamy

ಜನರ ಆಕ್ರೋಶಕ್ಕೆ ಹೆದರಿದ ಮುಖ್ಯಮಂತ್ರಿಯವರು ಹಾವೇರಿ ಜಿಲ್ಲೆಯ ಬೆಳೆ ಹಾನಿ ಸಮೀಕ್ಷೆಯ ಸಂದರ್ಭದಲ್ಲಿ ಬರ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿದರೆಂಬ ಆಪಾದನೆ ಮೇರೆಗೆ 20 ಕೆಳಸ್ತರದ ಅಧಿಕಾರಿಗಳನ್ನು ಸಾಮೂಹಿಕವಾಗಿ ಅಮಾನತ್ತುಗೊಳಿಸಲಾಗಿದೆ. ಸರ್ಕಾರ ತಾನು ಮಾಡಿದ ತಪ್ಪನ್ನು ಮರೆಮಾಚಲು ಕೆಳಹಂತದ ಅಧಿಕಾರಿಗಳನ್ನು ಶಿಕ್ಷಿಸುವ ಮೂಲಕ 'ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ' ಪ್ರಯೋಗಿಸಿದೆ. ['ಜೂನ್ 15ರ ತನಕ ಬರ ಪರಿಹಾರ ಕಾಮಗಾರಿ ನಡೆಸಿ']

ಬರ ನಿರ್ವಹಣೆಯಲ್ಲಿ ವೈಫಲ್ಯ ತೋರಿರುವ ಕಂದಾಯ ಇಲಾಖೆಯ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು, ಪ್ರಾಂತೀಯ ಆಯುಕ್ತರು, ಜಿಲ್ಲಾ ಉಸ್ತುವಾರಿ ವಹಿಸಿರುವ ಹಿರಿಯ ಐಎಎಸ್ ಅಧಿಕಾರಿಗಳೂ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿರುವ ಉನ್ನತ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡುವ ಬದಲು ಅವರ ರಕ್ಷಣೆಗೆ ನಿಂತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. [ಚಿತ್ರಗಳು : ಧಾರವಾಡದಲ್ಲಿ ಸಿದ್ದರಾಮಯ್ಯ ಬರ ಪ್ರವಾಸ]

ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಉತ್ತರ ಭಾರತದ ರಾಜಕಾರಣಿಗಳ ಕೃಪಾಕಟಾಕ್ಷದಿಂದ ಆಯಕಟ್ಟಿನ ಹುದ್ದೆ ಅಲಂಕರಿಸಿರುವ ಹೊರ ರಾಜ್ಯದ ಐಎಎಸ್ ಅಧಿಕಾರಿಗಳು ಗಾಲ್ಫ್ ಆಡುತ್ತಾ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ['ಬರ'ಗೆಟ್ಟ ರಾಯಚೂರು ಜನತೆಗೆ ನೀರು ಮಾಫಿಯಾ ಬರೆ]

ಪ್ರಮುಖ ಹುದ್ದೆಯಲ್ಲಿರುವ ಈ ಅಧಿಕಾರಿಗಳು ರಾಜ್ಯದ ಬರ ನಿರ್ವಹಣೆಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಈ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಬರ ಇಲ್ಲ, ಬರಿ ಕಡು ಬೇಸಿಗೆಯಷ್ಟೇ ಎಂದು ಗ್ರಾಮೀಣಾಭಿವೃದ್ಧಿ ಸಚಿವರು ಉದ್ಗರಿಸಿದರೆ ಸ್ವತ ಮುಖ್ಯಮಂತ್ರಿಯವರೇ ರಾಜ್ಯದಲ್ಲಿ ಮಹಾರಾಷ್ಟ್ರದಷ್ಟು ತೀವ್ರತರವಾದ ಬರಗಾಲವಿಲ್ಲವೆಂದು ತಾವೇ ಸಮಜಾಯಿಸಿ ಕೊಟ್ಟುಕೊಳ್ಳುತ್ತಾರೆಂದರೆ ಇದನ್ನು ರಾಜ್ಯದ ಜನತೆಯ ದೌರ್ಭಾಗ್ಯ ಎನ್ನೋಣವೇ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಇಂತಹ ಬೇಜವಾಬ್ದಾರಿ ಹೇಳಿಕೆ, ಕಾಟಚಾರದ ಬರ ಸಮೀಕ್ಷೆ ಮಾಡುವ ಬದಲು ಬರದಿಂದ ತತ್ತರಿಸಿರುವ ನಾಡಿನ ಜನತೆಯ ಸಂಕಷ್ಟಕ್ಕೆ ಸ್ಪಂದಿಸುವ ಪ್ರಾಮಾಣಿಕ ಬದ್ಧತೆಯನ್ನು ಸರ್ಕಾರ ಇನ್ನು ಮುಂದಾದರೂ ಪ್ರದರ್ಶಿಸಲಿ ಎಂದು ಆಶಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS state president H.D.Kumaraswamy alleged that Karnataka government failed in providing drought relief.
Please Wait while comments are loading...