ಕೊರೊನಾ ನಿರ್ವಹಣೆ; ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿ ರಚನೆಗೆ ಅಧಿಸೂಚನೆ
ಬೆಂಗಳೂರು, ಆಗಸ್ಟ್ 17: ಕೊರೊನಾ ಸೋಂಕಿನ ನಿರ್ವಹಣೆ ಸಂಬಂಧ ಜಿಲ್ಲಾಡಳಿತಗಳಿಗೆ ಮಾರ್ಗದರ್ಶನ ನೀಡಲು ಜಿಲ್ಲಾ ಮಟ್ಟದಲ್ಲಿ ಕೊರೊನಾ ತಾಂತ್ರಿಕ ತಜ್ಞರ ಸಮಿತಿಯ ರಚನೆ ಮಾಡುವಂತೆ ರಾಜ್ಯ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಈ ಅಧಿಸೂಚನೆಗೆ ಸಹಿ ಹಾಕಿದ್ದಾರೆ.
ರಾಜ್ಯದಲ್ಲಿ ಎರಡು ಕೊರೊನಾ ಅಲೆ ಅನುಭವಗಳೊಂದಿಗೆ ಹಾಗೂ ಅಕ್ಟೋಬರ್- ನವೆಂಬರ್ ತಿಂಗಳಿನಲ್ಲಿ ಕೊರೊನಾ ಮೂರನೇ ಅಲೆ ಸಾಧ್ಯತೆಯ ತಜ್ಞರ ಮಾಹಿತಿ ಮೇರೆಗೆ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಜಿಲ್ಲಾ ಮಟ್ಟದಲ್ಲಿ ತಜ್ಞರ ಸಮಿತಿಯನ್ನು ರಚಿಸಲು ಶಿಫಾರಸು ಮಾಡಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ, ಐಸಿಎಂಆರ್, ಏಮ್ಸ್ ನವದೆಹಲಿ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರೆ ಪ್ರಮುಖ ಸಂಸ್ಥೆಗಳನ್ನು ನಿರಂತರ ಆಧಾರದಲ್ಲಿ ನೀಡಿದ ಮಾರ್ಗಸೂಚಿಗಳನ್ನು ತಾಂತ್ರಿಕ ಸಮಿತಿ ಅನುಸರಿಸಲಿದೆ. ರಾಜ್ಯ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ನಿರಂತರ ಸಂಪರ್ಕದದಲ್ಲಿದ್ದು, ಒಟ್ಟಾರೆ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಲಿದೆ.
ಈ ಸಮಿತಿಯು ಜಿಲ್ಲಾ ಮಟ್ಟದ ದತ್ತಾಂಶವನ್ನು ಪರಿಶೀಲಿಸಬೇಕು ಹಾಗೂ ಇತರೆ ಜಿಲ್ಲೆಗಳು, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಹೋಲಿಕೆ ಮಾಡಬೇಕು. ಸ್ಥಳೀಯವಾಗಿ ಪಡೆದ ಮಾಹಿತಿಯನ್ನು ಬಳಸಿಕೊಂಡು ಜಿಲ್ಲಾಡಳಿತಕ್ಕೆ ಸಹಾಯ ಮಾಡಬೇಕು. ಈ ಮೂಲಕ ಸಾರ್ವಜನಿಕ ಆರೋಗ್ಯ ಕ್ರಮಗಳು ಹಾಗೂ ನಿಯಂತ್ರಣ ಕ್ರಮಗಳನ್ನು ಸುಧಾರಿಸಬೇಕು ಎಂದು ತಿಳಿಸಲಾಗಿದೆ.
ರಾಜ್ಯ ಹಾಗೂ ದೇಶದ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳಲು ಈ ಸಮಿತಿ ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡುತ್ತದೆ ಎನ್ನಲಾಗಿದೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಹಿರಿಯ ತಜ್ಞರನ್ನು, ವೈದ್ಯಕೀಯ ಜಿಲ್ಲಾಧಿಕಾರಿ, ಶ್ವಾಸಕೋಶ ತಜ್ಞ, ಹಿರಿಯ ವೈದ್ಯರು, ಹಿರಿಯ ಶಿಶುವೈದ್ಯ, ಹಿರಿಯ ಪ್ರಸೂತಿ ತಜ್ಞರು, ಸೂಕ್ಷ್ಮ ಜೀವವಿಜ್ಞಾನಿ, ವಿಶ್ವ ಆರೋಗ್ಯ ಸಂಸ್ಥೆ ವೈದ್ಯಾಧಿಕಾರಿ ಹಾಗೂ ಹಿರಿಯ ಆಯುಷದ ವೈದ್ಯರನ್ನು ಜಿಲ್ಲಾ ಮಟ್ಟದ ಈ ಸಮಿತಿ ಒಳಗೊಂಡಿರುತ್ತದೆ.
ಸಮಿತಿಯು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ವಿಶೇಷ ಆಹ್ವಾನಿತರಾಗಿ ಹೊಂದಿರುತ್ತದೆ. ಅಧಿಸೂಚನೆ ಪ್ರಕಾರ, ಸಮಿತಿಯು ನಿಯಮಿತವಾಗಿ ಕನಿಷ್ಠ ಹದಿನೈದು ದಿನಗಳಿಗೊಮ್ಮೆ ಸಭೆ ನಡೆಸಬೇಕು. ಹಾಗೂ ಅಗತ್ಯವನ್ನು ಆಧರಿಸಿ ಭೇಟಿಯಾಗಬೇಕು. ವಿಚಾರಣೆಯ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಿಗೆ ಉಪ ಆಯುಕ್ತರ ಮೂಲಕ ಕಳುಹಿಸಬೇಕು. ರಾಜ್ಯ ಮಟ್ಟದಲ್ಲಿ ರಚಿಸಲಾದ ತಾಂತ್ರಿಕ ಸಲಹಾ ಸಮಿತಿಯು ಸೂಚಿಸಿದ ಚಟುವಟಿಕೆಗಳನ್ನು ಜಿಲ್ಲಾ ಮಟ್ಟ ಕಾರ್ಯನಿರ್ವಹಣೆ ಮಾಡಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪ್ರಭಾವ: ರಾಜ್ಯದಲ್ಲಿ ಸೋಮವಾರ 1065 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1486 ಸೋಂಕಿತರು ಗುಣಮುಖರಾಗಿದ್ದಾರೆ. 28 ಮಂದಿ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 37007 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಸೋಮವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2930529ಕ್ಕೆ ಏರಿಕೆಯಾಗಿದೆ. ಒಟ್ಟು 2871448 ಸೋಂಕಿತರು ಗುಣಮುಖರಾಗಿದ್ದು. 22048 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಚುರುಕುಗೊಂಡ ಕೊರೊನಾ ಪರೀಕ್ಷಾ ಪ್ರಕ್ರಿಯೆ: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಕೂಡ ತಗ್ಗಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 16,549 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ 97,031 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಒಟ್ಟು 1,13,580 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಈವರೆಗೂ 76,15,558 ಜನರಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮಾಡಲಾಗಿದೆ. ಇದರ ಹೊರತಾಗಿ 3,34,09,537 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಈವರೆಗೂ ಒಟ್ಟು 4,10,25,095 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ.












Click it and Unblock the Notifications