Ashwini Puneeth Raj Kumar: 'ಅಂಗಾಂಗ ದಾನ' ಜಾಗೃತಿ ರಾಯಭಾರಿ ಆಗಲಿದ್ದಾರೆ 'ಅಪ್ಪು' ಪತ್ನಿ?
ಬೆಂಗಳೂರು, ಜುಲೈ 23: ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರು ನಿಧನರಾದ ಬಳಿಕ ಅವರು ಅಂಗಾಂಗ ದಾನ ಪ್ರಮಾಣ ಹೆಚ್ಚಾಗಿತ್ತು. ಇದೀಗ ಅಂಗಾಂಗ ದಾನ ದಿನಾಚರಣೆಯನ್ನು ಸರ್ಕಾರ ಮುಂದಿನ ತಿಂಗಳ ಆಗಸ್ಟ್ 3 ರಂದು ಆಯೋಜಿಸಿದ್ದು, ಅಂಗಾಂಗ ದಾನ ಕುರಿತ ಜಾಗೃತಿಗೆ ರಾಯಭಾರಿಯಾಗುವಂತೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನ ಆರೋಗ್ಯ ಸಚಿವರು ಆಹ್ವಾನಿಸಿದ್ದಾರೆ.
ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯಿಂದ ಅಗಸ್ಟ್ 3 ರಂದು ನಡೆಯಲಿರುವ ಅಂಗಾಂಗ ದಾನ ದಿನಾಚರಣೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಅಂಗಾಂಗ ದಾನ ಕುರಿತ ಜಾಗೃತಿಗೆ ರಾಯಭಾರಿಯಾಗುವಂತೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಹ್ವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ದೊಡ್ಡಮನೆ ಕುಟುಂಬ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿದೆ. ವರನಟ ಡಾ.ರಾಜಕುಮಾರ್ ಅವರಂತೆಯೇ ಡಾ.ಪುನೀತ್ ರಾಜಕುಮಾರ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಪುನೀತ್ ರಾಜಕುಮಾರ್ ಅವರು ಕಣ್ಣುಗಳ ದಾನ ರಾಜ್ಯದಲ್ಲಿ ಸಾವಿರಾರು ಜನರಿಗೆ ಅಂಗಾಂಗ ದಾನ ಮಾಡಲು ಪ್ರೇರಣೆಯಾಗಿತ್ತು.
ಅಲ್ಲದೇ ರಾಜ್ಯದಲ್ಲಿ ಅಂಗಾಂಗ ದಾನ ಪ್ರಮಾಣ ಏರಿಕೆ ಕೂಡಾ ಆಗಿತ್ತು. ಅನೇಕರು ದಿ.ಪುನೀತ್ ರಾಜಕುಮಾರ್ ಅವರನ್ನೇ ಮಾದರಿಯನ್ನಾಗಿಟ್ಟುಕೊಂಡು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಇದೆಲ್ಲ ಮಗನಿಸಿರುವ ಆರೋಗ್ಯ ಇಲಾಖೆ ಮತ್ತು ಸಚಿವರು ಇದೀಗ ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಅಂಗಾಂಗ ದಾನ ಜಾಗೃತಿಗೆ ರಾಯಭಾರಿಯಾಗುವಂತೆ ಆಹ್ವಾನ ನೀಡಲಾಗಿದೆ.
ಅಂಗಾಂಗ ದಾನದಿಂದ 8 ಜನರಿಗೆ ಜೀವದಾನ
ಅಂಗಾಂಗ ದಾನದ ಮೂಲಕ ಒಬ್ಬ ದಾನಿ ತನ್ನ ಸಾವಿನ ಬಳಿಕವೂ 8 ಜನರಿಗೆ ಜೀವದಾನ ಮಾಡಬಹುದಾಗಿದೆ. ಅಲ್ಲದೇ ಅಂಗಾಂಶ ದಾನದ ಮೂಲಕ 50 ಜನರ ಜೀವವನ್ನು ಉಳಿಸಬಹುದಾಗಿದೆ. ಜೀವನದ ಸಾರ್ಥಕತೆ ಕಾಣಬಹುದಾದ ಅಂಗಾಂಗ ದಾನಕ್ಕೆ ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ನೀಡುವತ್ತ ಕಾರ್ಯಕ್ರಮಗಳನ್ನು ರೂಪಿಸಲು ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಅಂಗಾಂಗ ದಾನದ ಮಹತ್ವ, ಅಂಕಿ ಸಂಖ್ಯೆ ಮಾಹಿತಿ
ಅಗಸ್ಟ್ 03 ರಂದು ಅಂಗಾಂಗ ದಾನ ದಿನಾಚರಣೆಗೆ ಆಚರಿಸುತ್ತಿರುವ ರಾಜ್ಯ ಆರೋಗ್ಯ ಇಲಾಖೆ, ಅಂಗಾಂಗ ದಾನ ಮಾಡಿದ ರಾಜ್ಯದ 150 ಕುಟುಂಬಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂಗಾಂಗ ದಾನದ ಪ್ರಮಾಣ ಪ್ರತಿ ಮಿಲಿಯನ್ ಜನಸಂಖ್ಯೆಗೆ 0.08 ರಷ್ಟಿದೆ. ಸುಮಾರು 3 ಲಕ್ಷ ಜನರು ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದಾರೆ. ಆದರೆ ಪ್ರತಿ ವರ್ಷ ಕೇವಲ 10,000 ಜನರು ಮಾತ್ರ ಕಸಿ ಪಡೆಯುತ್ತಾರೆ.
ಭಾರತದಲ್ಲಿ ಸುಮಾರು 50,000 ರೋಗಳಗೆ ಹೃದಯ ಕಸಿ ಅಗತ್ಯವಿದೆ. ಆದರೆ 1% ಜನರಿಗೆ ಮಾತ್ರ ಅಂಗಾಂಗವನ್ನು ಪಡೆಯುತ್ತಿದ್ದಾರೆ. 2 ಲಕ್ಷ ಭಾರತೀಯರಿಗೆ ಕಾರ್ನಿಯಾ ಕಸಿ ಅಗತ್ಯವಿದೆ. ಆದರೆ ಪ್ರತಿ ವರ್ಷ ಕೇವಲ 50,000 ಕಾರ್ನಿಯಗಳನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ.
ಕೊರತೆ ನೀಗಿಸಲು ಹಲವು ಕ್ರಮ
ರಾಜ್ಯ ಸರ್ಕಾರವು ಮಾನವ ಅಂಗಾಂಗಗಳ ಕೊರತೆಯನ್ನು ನೀಲಸಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.
ನಿಮ್ಹಾನ್ಸ್ ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾನವ ಅಂಗಾಂಗ ಹಿಂಪಡೆಯುವ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಅಂಗಾಂಗ ಹಿಂಪಡೆಯುವಿಕೆ ಪ್ರಾರಂಭಿಸಲಾಗಿದೆ. ಮೆದುಳು ನಿಷ್ಕ್ರಿಯ ಹೊಂದದ ರೋಗಿಗಳನ್ನು ಗುರುತಿಸಿ ಅಂಗಾಂಗ ದಾನ ಮಾಡುವ ಕುರಿತು ಸಮಾಲೋಚನೆಗಳನ್ನ ಸಂಬಂಧಿಸಿದವರೊಂದಿಗೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರದ ವತಿಯಿಂದ ಬಡ ರೋಗಳಿಗೆ ಉಚಿತ ಅಂಗಾಂಗ ಕಸಿ ಮಾಡುವ ಯೋಜನೆ ಆರಂಭಿಸಲಾಗಿದ್ದು, ಇದುವರೆಗೂ 73 ರೋಗಿಗಳು ಪ್ರಯೋಜನ ಪಡೆದಿದ್ದಾರೆ. ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ ನರವಿಜ್ಞಾನ ಸಂಸ್ಥೆ ಹಾಗೂ ಕರ್ನಾಟಕ ವೈದ್ಯಕೀಯ ಸಂಸ್ಥೆ, ಕಿಮ್ಸ್ ಹುಬ್ಬಳ್ಳಿಯಲ್ಲಿ ಕಿಡ್ನಿ ಕಸಿ ಮಾಡಲಾಗುತ್ತಿದೆ ಎಂದರು.












Click it and Unblock the Notifications