ಡಿ.30ರಿಂದ ಜ.2ರವರೆಗೆ ರಾಜ್ಯದಾದ್ಯಂತ ಹೊಸ ವರ್ಷಾಚರಣೆಗೆ ಸರ್ಕಾರ ನಿರ್ಬಂಧ
ಬೆಳಗಾವಿ ಡಿಸೆಂಬರ್ 21: ರಾಜ್ಯದಾದ್ಯಂತ ಹೊಸವರ್ಷಾಚರಣೆಗೆ ಸರ್ಕಾರ ನಿರ್ಬಂಧ ಹೇರಿದೆ. ಡಿಸೆಂಬರ್ 30ರಿಂದ ಜನವರಿ 2ರವರೆಗೆ ಬಹಿರಂಗವಾಗಿ ಗುಂಪು ಗುಂಪಾಗಿ ಜನ ಸೇರುವುದನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಈ ಸಮಯದಲ್ಲಿ ಜನ ಗುಂಪುಗೂಡಿ ಪಾರ್ಟಿಗಳನ್ನು ಮಾಡುವಂತಿಲ್ಲ. ಅಪಾರ್ಟ್‌ಮೆಂಟ್‌ಗಳಲ್ಲಿ ಡಿಜೆ ಪಾರ್ಟಿ ಮಾಡುವಂತಿಲ್ಲ. ಕ್ಲಬ್‌ಗಳಲ್ಲಿ ಸ್ಪೆಷಲ್ ಈವೆಂಟ್ ಮಾಡಲು ಶೇ. 50ರಷ್ಟು ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಸುವರ್ಣ ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಕೋವಿಡ್ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಪರಿಸ್ಥಿತಿಯನ್ನು ಗಮನಿಸಿ ಬಹಿರಂಗವಾಗಿ ಜನ ಸೇರುವುದನ್ನು ನಿರ್ಬಂಧಿಸಲಾಗಿದೆ. ರೆಸ್ಟೊರೆಂಟ್ ಗಳಲ್ಲಿ ಡಿಜೆ ಪಾರ್ಟಿ ಮಾಡಲು ಅವಕಾಶ ಇಲ್ಲ. ಅಪಾರ್ಟ್‌ಮೆಂಟ್ ಗಳಲ್ಲೂ ಇದು ನಿಯಮ ಅನ್ವಯಿಸುತ್ತದೆ ಎಂದಿದ್ದಾರೆ.
ಈ ಸಮಯದಲ್ಲಿ ಬಹಿರಂಗ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ. ಬಾರ್, ರೆಸ್ಟೋರೆಂಟ್ ಮತ್ತಿತರ ಸ್ಥಳಗಳಲ್ಲಿ ಒಟ್ಟು ಸಾಮರ್ಥ್ಯದ ಶೇಕಡ 50 ರಷ್ಟು ಮಂದಿಗೆ ಮಾತ್ರ ಪ್ರವೇಶ ನೀಡಬೇಕು. ಅಲ್ಲಿನ ಎಲ್ಲ ಸಿಬ್ಬಂದಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವುದು ಕಡ್ಡಾಯ ಎಂದಿದ್ದಾರೆ.

ಇನ್ನೂ ಸರ್ಕಾರದ ಆದೇಶಕ್ಕೂ ಮುನ್ನ ಎಂ.ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಪ್ರದಾಯಿಕ ದೀಪಗಳನ್ನು ಹಾಕುವುದುನ್ನು ಕೈಬಿಡಲಾಗಿತ್ತು. ಸರ್ಕಾರದ ಆದೇಶದಲ್ಲಿ ಈ ಹಿಂದೆ ನಡೆಯುತ್ತಿದ್ದ ಹೊಸ ವರ್ಷದ ಗುಂಪು ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ. ಕ್ರಿಸ್‌ಮಸ್ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ. ಚರ್ಚ್‌ಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲಿಸಿಕೊಂಡೇ ಪ್ರಾರ್ಥನೆ ಸಲ್ಲಿಸಲು ಈಗಾಗಲೇ ವ್ಯವಸ್ಥೆ ಇದೆ. ಅದನ್ನು ಅವರು ಪಾಲಿಸುತ್ತಾರೆ ಎಂದರು. ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಭಾಗಿಯಾಗಿದ್ದರು.
ಪ್ರತೀ ವರ್ಷ ಹೊಸ ವರ್ಷದ ದಿನದಿಂದ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಗಿಜಿಗುಡುತ್ತಿರುತ್ತವೆ. ನಗರದ ಯುವಪೀಳಿಗೆ ಎಂಜಿ ರಸ್ತೆಯ ಸುತ್ತಮುತ್ತ ಬೀಡು ಬಿಟ್ಟಿರುತ್ತದೆ. ರಸ್ತೆಗಳು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ತಿಂಗಳ ಮುಂಚೆಯೇ ಹೊಸ ವರ್ಷದ ಖರೀದಿ ಈ ಬೀದಿಗಳಲ್ಲಿ ಜೋರಾಗಿರುತ್ತದೆ. ರಸ್ತೆಗಳು ಮಾತ್ರವಲ್ಲದೇ ಅಂಗಡಿಗಳು ಶಾಪಿಂಗ್ ಮಾಲ್‌ಗಳು ಗ್ರಾಹಕರನ್ನು ಆಕರ್ಷಕ ದೀಪಗಳಿಂದ ಸೆಳೆಯುತ್ತವೆ. ಆದರೆ ಈ ಬಾರಿ ಅಲಂಕಾರಿಕ ಬೀದಿ ದೀಪಗಳನ್ನು ಹಾಕುವುದನ್ನು ಕೈಬಿಡಲಾಗಿದೆ.

ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಅನುಮತಿ ನೀಡುವ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಳ್ಳದಿದ್ದರೂ, ಬ್ರಿಗೇಡ್ ರಸ್ತೆಯ ಅಂಗಡಿಗಳು ಮತ್ತು ಸಂಸ್ಥೆಗಳ ಸಂಘದ ಸದಸ್ಯರು ಈಗಾಗಲೇ ಹೊಸ ವರ್ಷವನ್ನು ಆಚರಿಸದಿರಲು ಮನಸ್ಸು ಮಾಡಿದ್ದಾರೆ. ಹೊಸ ವರ್ಷದ ಮುನ್ನವೇ ಈ ವರ್ಷ ಯಾವುದೇ ಆಚರಣೆಗಳಿಲ್ಲ. ಜನರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಿ, ಓಮಿಕ್ರಾನ್ ರೂಪಾಂತರದ ಉಲ್ಬಣದೊಂದಿಗೆ, ಸಂಘವು ಡಿಸೆಂಬರ್ 15 ರಿಂದ ಪ್ರಾರಂಭವಾಗುತ್ತಿದ್ದ ಬೀದಿ ದೀಪಗಳ ಸಾಂಪ್ರದಾಯಿಕ ಅಭ್ಯಾಸವನ್ನು ಕೈಬಿಟ್ಟಿದೆ.
ಕಳೆದ ವರ್ಷ ಆಚರಣೆಗೆ ಅನುಮತಿ ನೀಡಿರಲಿಲ್ಲ ಎಂದು ಸಂಘದ ಕಾರ್ಯದರ್ಶಿ ಸುಹೇಲ್ ಯೂಸುಫ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. "ಈ ವರ್ಷ ನಾವು ಯಾವುದೇ ಆಚರಣೆಗಳನ್ನು ಮಾಡದಿರಲು ನಿರ್ಧರಿಸಿದ್ದೇವೆ. ಸಾಮಾನ್ಯವಾಗಿ ಹೊಸ ವರ್ಷದ ಮುನ್ನಾದಿನದಂದು, ವ್ಯಾಪಾರವು ಮಂದವಾಗಿರುತ್ತದೆ. ಆದರೆ ಜನಸಂದಣಿಯು ದೊಡ್ಡದಾಗಿರುತ್ತದೆ. ಆದ್ದರಿಂದ ಈ ಬಾರಿ ಜನಸಂದಣಿ ಇಲ್ಲದಂತೆ ನೋಡಿಕೊಳ್ಳಲು ಸಾಮಾನ್ಯ ಸಮಯಕ್ಕಿಂತ 1-2 ಗಂಟೆಗಳ ಮೊದಲು ಅಂಗಡಿಗಳನ್ನು ಮುಚ್ಚಲು ನಾವು ನಿರ್ಧರಿಸಿದ್ದೇವೆ, "ಎಂದು ಅವರು ಹೇಳಿದರು.












Click it and Unblock the Notifications