NEP ರದ್ದಾದರೆ ಜನಾಂದೋಲನ ಖಚಿತ, ರಾಜಕೀಯದಿಂದ ಶಿಕ್ಷಣ ಹೊರಗಿಡಿ: ಬೊಮ್ಮಾಯಿ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 22: ರಾಜ್ಯ ಸರ್ಕಾರ ಕಲಪತಿಗಳ ಜೊತೆಗೆ ಚರ್ಚೆ ಮಾಡದೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಒಂದು ವೇಳೆ ಎನ್‌ಇಪಿ ರದ್ದಾದರೆ ಜನಾಂದೋಲನ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಜೇಶನ್ ಸಂಸ್ಥೆ ವತಿಯಿಂದ ಏರ್ಪಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಪರಿಣಾಮಕಾರಿ ಜಾರಿಗಾಗಿ ಶಿಕ್ಷಣ ತಜ್ಞರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಶಿಕ್ಷಣ ನೀತಿಯನ್ನು ವಿರೋಧ ಮಾಡುತ್ತಿರುವುದರಲ್ಲಿ ಆಶ್ಚರ್ಯ ಇಲ್ಲ. ಅವರು ವಿರೋಧಕ್ಕಾಗಿಯೇ ವಿರೋಧ ಮಾಡಿದ್ದಾರೆ. ಕುಲಪತಿಗಳು, ತಜ್ಞರ ಜತೆಗೂಡಿ ಚರ್ಚಿಸದೇ ನಿರ್ಣಯ ಕೈಗೊಂಡಿದ್ದಾರೆ. ಶಿಕ್ಷಣ ಅಂದರೆ ಸ್ವಂತ ಚಿಂತನೆ, ಸರಿ ತಪ್ಪು ಅಲ್ಲ, ನಿಮಗೆ ಏನು ಅನಿಸಿದೆ. ಅದನ್ನು ಹೇಳಿದ್ದೀರಿ. ಅದನ್ನು ಕೇಳುವ ಮನಸ್ಥಿತಿ ಈ ಸರ್ಕಾರಕ್ಕೆ ಇಲ್ಲ. ಅಂದರೆ ದೇಶಕ್ಕೆ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಅವಶ್ಯಕತೆ ಇದೆ.
ಶಿಕ್ಷಣ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಇಲ್ಲ. ಯಾವ ಕಾರಣಕ್ಕೆ ಶಿಕ್ಷಣ ನೀತಿ ಜಾರಿಗೆ ತಂದಿದ್ದೇವೆ ಎಂದು ಪ್ರಶ್ನೆ ಮಾಡಿ. ಏಕೆಂದರೆ ಶಿಕ್ಷಣ ವ್ಯವಸ್ಥೆ ಏಕಾಏಕಿ ಬಂದಿದ್ದಲ್ಲ. ಸ್ವಾತಂತ್ರ್ಯ ಬಂದಾಗ ಕೇವಲ ಶೇಕಡಾ 15ರಷ್ಟು ಶಿಕ್ಷಣ ಪಡೆದವರು ಇದ್ದರು. ಅದನ್ನು 130 ಕೋಟಿ ಜನರಿಗೆ ತಲುಪಿಸುವ ಕೆಲಸ ಮಾಡುವುದು ಸಣ್ಣ ವಿಷಯವೇನಲ್ಲ ಎಂದು ತಿಳಿದರು.
ಜನರೇ ನಿಮಗ ಪಾಠ ಕಲಿಸುತ್ತಾರೆ
ಶಿಕ್ಷಣ ವ್ಯವಸ್ಥೆಯನ್ನು ಕೇವಲ ಕರ್ನಾಟಕಕ್ಕೆ ಸೀಮಿತ ಮಾಡಬೇಕೆ? ಜನರು ನಿಮಗೆ ಅಭಿವೃದ್ಧಿ ಮಾಡಲು ಅಧಿಕಾರ ಕೊಟ್ಟಿದ್ದಾರೆ. ರಾಜ್ಯಕ್ಕೆ ಹಿನ್ನಡೆ ಮಾಡಲು ಅಲ್ಲ. ಈ ದೇಶದಲ್ಲಿ ದೊಡ್ಡವರು ತಪ್ಪು ಮಾಡಿದಾಗ ಜನರು ದೊಡ್ಡ ಹೋರಾಟಗಳ ಮೂಲಕ ಬದಲಾವಣೆ ತಂದಿದ್ದಾರೆ. ನೀವು ಅಧಿಕಾರ ಸಿಕ್ಕಿದೆ ಅಂತ ಈ ರೀತಿ ಮಾಡಿದರೆ ಜನ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಸರ್ಕಾರ ಕೇವಲ ಮತ ಹಾಕಿದವರನ್ನು ಮಾತ್ರ ನೋಡದೇ ವಿದ್ಯಾರ್ಥಿಗಳು, ಮಕ್ಕಳನ್ನು ನೋಡಬೇಕು. ಬಿಜೆಪಿಯನ್ನು ವಿರೋಧಿಸಿ, ಅದನ್ನು ಬಿಟ್ಟು ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷೆ ಕೊಡಬೇಡಿ. ಸಿದ್ದರಾಮಯ್ಯ ಒನ್ ಮತ್ತು ಸಿದ್ದರಾಮಯ್ಯ ಟು ನಡುವೆ ಸಾಕಷ್ಟು ವ್ಯತ್ಯಾಸ ಇದೆ ಎಂದು ಲೇವಡಿ ಮಾಡಿದರು.
ಸಿಬಿಎಸ್ ಸಿ ಕೇವಲ ಉಳ್ಳವರ ಪಾಲಾಗಿವೆ. ಎಷ್ಟೊ ತಾಲೂಕುಗಳಲ್ಲಿ ವಿಜ್ಞಾನ ಕಾಲೇಜುಗಳಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅದಕ್ಕೆ ಅವಕಾಶ ಇದೆ. ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣ ಅವಕಾಶ ದೊರೆಯುತ್ತದೆ. ನಾವು ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ತಂದಿದ್ದೇವೆ. ಇದರಿಂದ ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತಾಗಿದೆ ಎಂದರು.
ಇಟಲಿ, ಯುರೋಪ್ ಮೆಕಾಲೆ ನೀತಿ ತರುತ್ತೀರಾ?
ಈ ಶಿಕ್ಷಣ ನೀತಿ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ, ಎನ್ಇಪಿ ರದ್ದು ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಅವರು ಘೋಷಣೆ ಮಾಡುತ್ತಾರೆ. ಎನ್ಇಪಿ ರದ್ದು ಮಾಡುವುದಾದರೆ ಜಿ.ಪರಮೇಶ್ವರ್ , ಎಂ.ಬಿ ಪಾಟೀಲ್ ಒಪ್ಪುತ್ತಾರಾ? ಎನ್ಇಪಿ ಅನ್ನು ನಾಗಪುರ್ ಶಿಕ್ಷಣ ನೀತಿ ಎನ್ನುತ್ತಾರೆ. ಎಸ್ ಇಪಿ ಅಂದರೆ ಸೋನಿಯಾಗಾಂಧಿ ಎಜುಕೇಶನ್ ಪಾಲಿಸಿನಾ? ಸೋನಿಯಾ ಗಾಂಧಿ ಅಂದರೆ ಇಟಲಿ. ಇಟಲಿ ಅಂದರೆ ಯುರೋಪ್ ಎಜುಕೇಶನ್ ಅಂದರೆ ಮೆಕಾಲೆ ಶಿಕ್ಷಣ ನೀತಿ ಜಾರಿಗೆ ತರುತ್ತೀರಾ? ಎಂದು ಪ್ರಶ್ನಿಸಿದರು.
ಅಧಿಕಾರ ಇದೆ ಎಂದು ಬದಲಾವಣೆ ಮಾಡುವ ಪ್ರಯತ್ನ ಮಾಡಬಹುದು. ಆದರೆ ಇದರ ವಿರುದ್ಧ ಜನಾಂದೋಲ ನಡೆಯಲಿದೆ. ದಯಮಾಡಿ ಶಿಕ್ಷಣವನ್ನು ರಾಜಕೀಯದಿಂದ ಹೊರಗಿಡಿ. ಸಿದ್ದರಾಮಯ್ಯ ಅವರು ಗಾಂಧಿ ಕುಟುಂಬ ಜಪ ಮಾಡಿವುದನ್ನು ಬಿಟ್ಟು ಲೋಹಿಯಾ ಅವರನ್ನು ಸ್ಮರಿಸಲಿ. ನೀವು ಒಬ್ಬ ರಾಜಾಕರಾಣಿಯಾಗಿ ಶಿಕ್ಷಣವನ್ನು ರಾಜಕಾರಣ ಮಾಡಬೇಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿಗಳು, ಮಾಜಿ ಶಿಕ್ಷಣ ಸಚಿವರಾದ ಡಾ. ಸಿ.ಎನ್ ಅಶ್ವಥ್ ನಾರಾಯಣ, ಎನ್. ಮಹೇಶ್ ಅಭಿಪ್ರಾಯ ಮಂಡಿಸಿದರು.












Click it and Unblock the Notifications