ನಾಲ್ಕು ಜಿಲ್ಲೆ ಹೊರತುಪಡಿಸಿ ಉಳಿದೆಡೆ ರಾತ್ರಿ ಕರ್ಫ್ಯೂ ನಿರ್ಬಂಧ ತೆರವು
ಬೆಂಗಳೂರು, ಆಗಸ್ಟ್ 31: ಕೊರೊನಾ ಸೋಂಕಿನ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೇರಿದ್ದ ರಾತ್ರಿ ಕರ್ಫ್ಯೂ ನಿರ್ಬಂಧವನ್ನು ರಾಜ್ಯ ಸರ್ಕಾರ ತೆರವುಗೊಳಿಸಲು ತೀರ್ಮಾನಿಸಿದೆ.
ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲಾ ಕಡೆಗಳಲ್ಲಿ ನೈಟ್ ಕರ್ಫ್ಯೂ ನಿರ್ಬಂಧವನ್ನು ತೆರವುಗೊಳಿಸುವ ಸಂಬಂಧ ಸೋಮವಾರ ಮಾಹಿತಿ ನೀಡಿದೆ.
ಕೊಡಗು, ಹಾಸನ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ನಿರ್ಬಂಧ ತೆರವುಗೊಳಿಸಲಿರುವುದಾಗಿ ತಿಳಿಸಿದೆ. ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಮುಂದುವರೆಸಲಾಗುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ವಿಷಯವನ್ನು ಕಂದಾಯ ಸಚಿವ ಆರ್ ಅಶೋಕ್ ಪ್ರಸ್ತಾಪಿಸಿದ್ದಾರೆ.
'ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ನಾಲ್ಕು ಜಿಲ್ಲೆಗಳಲ್ಲು ಹೊರತುಪಡಿಸಿ ಉಳಿದೆಡೆ ನೈಟ್ ಕರ್ಫ್ಯೂ ನಿರ್ಬಂಧ ಸಡಿಲಗೊಳಿಸಲು ತೀರ್ಮಾನಿಸಲಾಗಿದೆ. ಕೇರಳದಿಂದ ಬರುವವರಿಗೆ ಕ್ವಾರಂಟೈನ್ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಕೇರಳದಿಂದ ಬರುವವರಿಗೆ ಒಂದು ವಾರಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ವಿಧಿಸಲಾಗಿದೆ. ಏಳು ದಿನಗಳ ನಂತರ ಪರೀಕ್ಷೆ ನಡೆಸಲಾಗುತ್ತದೆ. ಅವರ ಬಳಿ ಲಸಿಕೆ ಹಾಗೂ ನೆಗೆಟಿವ್ ಆರ್‌ಟಿಪಿಸಿಆರ್ ಪರೀಕ್ಷಾ ವರದಿ ಇದ್ದರೂ ಪರೀಕ್ಷೆ ನಡೆಸುವುದು ಕಡ್ಡಾಯ' ಎಂದು ಹೇಳಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಮಟ್ಟದಲ್ಲಿ ಕರ್ಫ್ಯೂ ಹೇರುವ ಬದಲು ಕೊರೊನಾ ಹೆಚ್ಚಿರುವ ಕಡೆಗಳಲ್ಲಿ ಕಂಟೇನ್ಮೆಂಟ್ ಝೋನ್‌ಗಳನ್ನು ರೂಪಿಸಲು ಜಿಲ್ಲಾಡಳಿತಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಇದರೊಂದಿಗೆ, ರಾಜ್ಯಾದ್ಯಂತ ನೈಟ್ ಕರ್ಫ್ಯೂ ಹಾಗೂ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ವಿಧಿಸಲಾಗಿತ್ತು.
ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗಿಲ್ಲದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಬಂಧಗಳು ಮುಂದುವರೆಯುತ್ತವೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಡಿಸಿ ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ. ದಕ್ಷಿಣ ಜಿಲ್ಲೆಯಲ್ಲಿ ಕೇರಳದಿಂದ ಬಂದವರ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಯಲ್ಲಿ ಇನ್ನಷ್ಟು ದಿನ ಕಠಿಣ ಕ್ರಮಗಳನ್ನು ಮುಂದುವರೆಸಲಾಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದ್ದು, ಹಲವು ದಿನಗಳ ಬಳಿಕ ಹೊಸ ಪ್ರಕರಣಗಳು ಮೂರಂಕಿಗೆ ಕುಸಿದಿದೆ. ಕೋವಿಡ್-19 ಸೋಂಕು ಹರಡುವಿಕೆ ಶೇಕಡಾವಾರು ಪ್ರಮಾಣ ಶೇ.0.64 ಮತ್ತು ಮರಣ ಪ್ರಮಾಣ ಶೇ.1.54ಕ್ಕೆ ಇಳಿಕೆಯಾಗಿದೆ. ಸೋಮವಾರ ಒಟ್ಟು 1,51,219 ಮಾದರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಸೋಮವಾರ ಹೊಸದಾಗಿ 973 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 29,48,228ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 28,92,517 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಕೊರೊನಾ ಸೋಂಕಿನಿಂದ 15 ಜನರು ಸಾವನ್ನಪ್ಪಿದ್ದು, ಅದರಂತೆ ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,293 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇನ್ನೂ 18,392 ಸಕ್ರಿಯ ಕೊರೊನಾ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ನೀಡಿದೆ.
ಬೆಂಗಳೂರು ನಗರದಲ್ಲಿ ಕೊರೊನಾದಿಂದ ಈವರೆಗೆ ಒಟ್ಟು 15,986 ಜನ ಸೋಂಕಿತರ ಸಾವು ಸಂಭವಿಸಿದೆ. ಬೆಂಗಳೂರಿನಲ್ಲಿ 7,343 ಸಕ್ರಿಯ ಕೊರೊನಾ ಸೋಂಕು ಪ್ರಕರಣಗಳಿವೆ.
ಮನೆ ಮನೆಗೆ ಲಸಿಕೆ ಸಾಧ್ಯತೆ: ದೈನಂದಿನ ಕೊರೊನಾ ಲಸಿಕೆಯ ಗುರಿಯನ್ನು ಐದು ಲಕ್ಷ ಡೋಸ್‌ಗಳಿಗೆ ಏರಿಸುವ ರಾಜ್ಯ ಸರ್ಕಾರದ ನಿರ್ಧಾರ ಗ್ರಾಮೀಣ ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡುವಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಅಧಿಕಾರಿಗಳಿಗೆ ಒಂದಿಷ್ಟು ಸಮಾಧಾನ ತಂದಿದೆ.
ಕೊರೊನಾ ಲಸಿಕೆಯ ಪ್ರಯೋಜನಗಳ ಕುರಿತು ವ್ಯಾಪಕ ಪ್ರಚಾರಗಳ ಹೊರತಾಗಿಯೂ, ಲಸಿಕೆ ಕುರಿತ ಹಿಂಜರಿಕೆ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಡೋಸ್‌ಗಳ ಕೊರತೆ ಹಾಗೂ ಲಸಿಕೆ ನಿರ್ವಹಣೆ ಸಂಬಂಧ ಖಾಸಗಿ ಆಸ್ಪತ್ರೆಗಳು ಎದುರಿಸುತ್ತಿರುವ ಸವಾಲುಗಳು ಲಸಿಕಾ ಪ್ರಕ್ರಿಯೆಯನ್ನು ಕಷ್ಟಕರವಾಗಿಸಿವೆ. ಮುಂಬರುವ ದಿನಗಳಲ್ಲಿ ಈ ಅಂಶಗಳು ಲಸಿಕಾ ಪ್ರಕ್ರಿಯೆಯನ್ನು ಹೆಚ್ಚು ಸವಾಲಾಗಿಸಬಹುದು ಹಾಗೂ ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡುವುದು ಅಗತ್ಯವಾಗಬಹುದು ಎಂದು ಸ್ಥಳೀಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.











Click it and Unblock the Notifications