ಗೋವಾ, ಮಹಾರಾಷ್ಟ್ರ, ಕೇರಳದ ಪ್ರಯಾಣಿಕರಿಗೆ RT-PCR ನೆಗೆಟಿವ್ ವರದಿ ಕಡ್ಡಾಯ
ಬೆಂಗಳೂರು, ಜನವರಿ 4: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ಗೋವಾದಿಂದ ಆಗಮಿಸುವ ಪ್ರತಿಯೊಬ್ಬರಿಗೂ RT-PCR ಪರೀಕ್ಷೆಯ ನೆಗಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸುದೀರ್ಘ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸಹಿತ ಹಲವು ಅಧಿಕಾರಿಗಳು ಭಾಗವಹಿಸಿದ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಕಂದಾಯ ಸಚಿವ ಆರ್ ಅಶೋಕ್ ಹಾಗೂ ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
"ಮಹಾರಾಷ್ಟ್ರ, ಕೇರಳ ಮತ್ತು ಗೋವಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗಿದೆ. ಈ ರಾಜ್ಯಗಳಿಂದ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುವುದು. ವಿಮಾನ, ರಸ್ತೆ ಹಾಗೂ ಸಮುದ್ರ ಮಾರ್ಗದಲ್ಲಿ ಆಗಮಿಸುವ ಪ್ರಯಾಣಿಕರಿಗೆ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗುವುದು," ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಗೋವಾದಿಂದ ಆಗಮಿಸಿದವರಿಗೆ ಕೊವಿಡ್-19 ಪರೀಕ್ಷೆ:
ಜನವರಿ 1ರ ನಂತರ ಗೋವಾದಿಂದ ರಾಜ್ಯಕ್ಕೆ ಆಗಮಿಸಿದ ಹಲವರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಗೋವಾದಿಂದ ರಾಜ್ಯಕ್ಕೆ ಆಗಮಿಸಿದವರ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಲಾಗುವುದು. ಇದರ ಜೊತೆಗೆ ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ಆಗಮಿಸುವ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ RT-PCR ಪ್ರಮಾಣವನ್ನು ಪಡೆದುಕೊಳ್ಳಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.
ಓಮಿಕ್ರಾನ್ ಅಪಾಯದ ದೇಶದಿಂದ ಬಂದವರಿಗೆ ಕ್ವಾರೆಂಟೇನ್:
ಓಮಿಕ್ರಾನ್ ಅಪಾಯವನ್ನು ಹೊಂದಿರುವ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲೇ ಪರೀಕ್ಷೆಗೊಳಪಡಿಸಲಾಗುವುದು. ಸೋಂಕು ಪಾಸಿಟಿವ್ ಬಂದರೆ ಅಂಥವರನ್ನು ಸಾಂಸ್ಥಿಕ ಕ್ವಾರೆಂಟೇನ್ ನಲ್ಲಿ ಇರಿಸಲಾಗುತ್ತದೆ. ಸಾಂಸ್ಥಿಕ ಕ್ವಾರಂಟೇನ್ ವೆಚ್ಚವನ್ನು ಆ ಪ್ರಯಾಣಿಕರೇ ಭರಿಸಬೇಕಾಗುತ್ತದೆ ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.












Click it and Unblock the Notifications