Priya Krishna: ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾ ಕೃಷ್ಣಗೆ ಪಂತರಪಾಳ್ಯದಲ್ಲಿ ಮಹಿಳೆಯರಿಂದ ಭರ್ಜರಿ ಸ್ವಾಗತ
ಬೆಂಗಳೂರು, ಏಪ್ರಿಲ್. 26: ವಸತಿ ಸಚಿವ ವಿ.ಸೋಮಣ್ಣ ಅವರ ಹಾಲಿ ಕ್ಷೇತ್ರ ಬೆಂಗಳೂರಿನ ಗೋವಿಂದರಾಜನಗರ ಒಂಥರಾ ಹೈ ವೋಲ್ಟೇಜ್ ಕ್ಷೇತ್ರ. ತಾವು ಕ್ಷೇತ್ರ ತೊರೆದಿದ್ದರೂ, ಇಲ್ಲಿನ್ನೂ ತಮ್ಮ ಪ್ರಭಾವ ಉಳಿಸಿಕೊಂಡಿದ್ದರು. ಆದರೆ, ವರುಣಾ ಕ್ಷೇತ್ರದಲ್ಲಿ ಪ್ರಚಾರ ಪ್ರಾರಂಭವಾದಾಗಿನಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಬಿರುಸು ಪಡೆದುಕೊಳ್ಳುತ್ತಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾ ಕೃಷ್ಣ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಗೋವಿಂದರಾಜನಗರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವ ಹುಮ್ಮಸ್ಸಿನಲ್ಲಿರುವ ಪ್ರಿಯಾ ಕೃಷ್ಣಗೆ ಪ್ರಚಾರಕ್ಕೆ ಹೋದ ಕಡೆಯೆಲ್ಲ ಭವ್ಯ ಸ್ವಾಗತ ದೊರೆಯುತ್ತಿದೆ.

ಆಪ್ತರು, ಬೆಂಬಲಿಗರು, ಕಾರ್ಯಕರ್ತರೊಂದಿಗೆ ಗೋವಿಂದರಾಜನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿರುವ ಪ್ರಿಯಾ ಕೃಷ್ಣ ಅವರಿಗೆ, ಕೆಲವೆಡೆ ಹೂ ಗುಚ್ಛ ನೀಡಿ ಸ್ವಾಗತಿಸಲಾಗುತ್ತಿದ್ದರೆ, ಮತ್ತೆ ಕೆಲವೆಡೆ ಹಾರ ಹಾಕಿ, ಶಾಲು ಹೊದಿಸಿ ಅಭಿಮಾನ ವ್ಯಕ್ತಪಡಿಸಲಾಗುತ್ತಿದೆ. ಪುಟಾಣಿ ಮಕ್ಕಳೂ ಸಹ ಪ್ರಿಯಾ ಕೃಷ್ಣ ಅವರಿಗೆ ಗುಲಾಬಿ ಹೂ ಕೊಟ್ಟು ಶುಭಾಶಯ ಹೇಳಿದ್ದಾರೆ. ಅದೇ ರೀತಿ, ಪಂತರ ಪಾಳ್ಯದಲ್ಲಿ ಪ್ರಚಾರಕ್ಕೆ ತೆರಳಿದ್ದ ಪ್ರಿಯಾ ಕೃಷ್ಣಗೆ ಅಲ್ಲಿನ ಮಹಿಳೆಯರು ಆರತಿ ಮಾಡಿ, ತಿಲಕ ಇಟ್ಟು ಸ್ವಾಗತ ನೀಡಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ಕಾವೇರಿಪುರ ವಾರ್ಡ್, ಮೂಡಲಪಾಳ್ಯ ವಾರ್ಡ್, ನಾಗರಭಾವಿ ವಾರ್ಡ್, ಅಗ್ರಹಾರ ದಾಸರಹಳ್ಳಿ ವಾರ್ಡ್, ಮಾರೇನಹಳ್ಳಿ ವಾರ್ಡ್ ಸೇರಿದಂತೆ ಗೋವಿಂದರಾಜನಗರ ಕ್ಷೇತ್ರ ವ್ಯಾಪ್ತಿಯ ಪ್ರತಿ ಮನೆಗೂ ಭೇಟಿ ನೀಡಿ ಪ್ರಿಯಾ ಕೃಷ್ಣ ಮತ ಯಾಚಿಸುತ್ತಿದ್ದಾರೆ. ಈ ನಡುವೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವ ಮೂಲಕ ಪಕ್ಷ ಮತ್ತಷ್ಟು ಬಲವರ್ಧನೆಯಾಗುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಯೋಜನೆಗಳು ಹಾಗೂ ತಮ್ಮ ಸಮಾಜಮುಖಿ ಕಾರ್ಯಗಳನ್ನು ಕ್ಷೇತ್ರದ ಮನೆಗಳಿಗೆ ತಲುಪಿಸುವ ಮೂಲಕ, ತಮ್ಮ "ಕೈ" ಬಲಪಡಿಸುವಂತೆ ಪ್ರಿಯಾ ಕೃಷ್ಣ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಜೊತೆಗೆ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಭರವಸೆ ನೀಡುತ್ತಿದ್ದಾರೆ.

ಸ್ದಯ ವಿ.ಸೋಮಣ್ಣ ಅವರ ಕ್ಷೇತ್ರ ಬದಲಾವಣೆ ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಇರುವ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ಗೆ ಲಾಭವಾಗಬಹುದು. ಬಿಜೆಪಿ ಸರ್ಕಾರದ ವಿರುದ್ಧದ ಬೆಲೆ ಏರಿಕೆ, ಭ್ರಷ್ಟಾಚಾರ, 40% ಕಮೀಷನ್ ಇತ್ಯಾದಿ ಆರೋಪಗಳು, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾ ಕೃಷ್ಣ ಗೆಲುವಿಗೆ ಅನುಕೂಲಕರವಾಗಬಹುದು ಎಂದು ಅಂದಾಜಿಸಲಾಗಿದೆ.
ಇನ್ನು, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾ ಕೃಷ್ಣ 1,156 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. 2018 ರ ಚುನಾವಣೆಯ ಸಮಯದಲ್ಲಿ 1,020 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿದ್ದರು. 5 ವರ್ಷಗಳಲ್ಲಿ ಅವರ ಆಸ್ತಿ 1,156 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.












Click it and Unblock the Notifications