ಸಿದ್ದರಾಮಯ್ಯನವರೇ ನೀವು ಕೊಡುವ ಕೋಳಿ, ಕುರಿ, ಅಕ್ಕಿ ಬೇಡ: ಮಾಜಿ ಡಿಸಿಎಂ ಹೇಳಿದ್ದೇನು?
ಬೆಂಗಳೂರು, ನವೆಂಬರ್ 27: ಸಿದ್ದರಾಮಯ್ಯನವರು ಅಕ್ಕಿ ಕೊಡ್ತೀನಿ, ಬ್ಯಾಳಿ ಕೊಡ್ತೀನಿ, ಕೋಳಿ, ಕುರಿ ಕೊಡ್ತೀನಿ ಎನ್ನುತ್ತಾರೆ. 140 ಕೋಟಿಯಲ್ಲಿ ಶೇ 25 ದಲಿತರಿರುವ ನಾವು ನಮಗೆ ಕೋಳಿ, ಕುರಿ, ಅಕ್ಕಿ ಬೇಡ. ಶಿಕ್ಷಣ ಕೊಡಿ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ದೀನದಲಿತರನ್ನು ಮತಬ್ಯಾಂಕಾಗಿ ಬಳಸಿಕೊಂಡರೇ ಹೊರತು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಬಯಸಿದಂತೆ ಅಸ್ಪೃಶ್ಯರು ಮತ್ತು ದಲಿತರನ್ನು ಮೇಲೆತ್ತುವ ಕೆಲಸ ಮಾಡಲಿಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಆದ್ಯತೆ ಕೊಡಲು ಹೇಳಿದ್ದರು. ಬಡತನ, ಮೂಢನಂಬಿಕೆ, ಶಿಕ್ಷಣ ವಂಚಿತರಾಗಿರುವ ದಲಿತರನ್ನು ಮೇಲೆತ್ತುವ ಕೆಲಸವನ್ನು ಯಾವತ್ತೂ ಕಾಂಗ್ರೆಸ್ ಪಕ್ಷ ಮಾಡಲಿಲ್ಲ ಎಂದು ಕಿಡಿಕಾರಿದರು.

ಇನ್ನೂ ಈ ವೇಳೆ ಮಾಜಿ ಸಚಿವ ಸಿ.ಟಿ.ರವಿ ಅವರು ಮಾತನಾಡಿ, 2015ರವರೆಗೂ ನವೆಂಬರ್ 26ರ ಈ ದಿನವನ್ನು ಲಾಡೆ ಎಂದು ಕರೆಯುತ್ತಿದ್ದರು. ಸಂವಿಧಾನ ಗೌರವ ದಿನ ಎಂದು ಅದನ್ನು ಆಚರಿಸಲು ನರೇಂದ್ರ ಮೋದಿಜೀ ಅವರು ತಿಳಿಸಿದರು. ಭಾರತರತ್ನವನ್ನು ಅವರಿಗೆ ಅವರೇ ಕೊಟ್ಟುಕೊಂಡರು. ನೈಜ ಭಾರತರತ್ನ ಡಾ. ಅಂಬೇಡ್ಕರ್ ಅವರಿಗೆ ಭಾರತರತ್ನವನ್ನು ಹಲವು ದಶಕಗಳ ಬಳಿಕ ಅಟಲ್‍ಜೀ ಅವರ ಪ್ರಸ್ತಾವನೆಯ ನಂತರ ಪ್ರಧಾನಿ ವಿ.ಪಿ.ಸಿಂಗ್ ಅವರು ಬಿಜೆಪಿ ಬೆಂಬಲದ ಸರಕಾರ ಇದ್ದಾಗ ನೀಡಿದ್ದರು ಎಂದರು.
ಅವರಿಗೆ ಬದುಕಿದ್ದಾಗಲೇ ಭಾರತರತ್ನ ಕೊಡಬೇಕಿತ್ತು. 33 ವರ್ಷಗಳ ವರೆಗೆ ಯಾಕೆ ಕೊಟ್ಟಿಲ್ಲ? ಅಂಬೇಡ್ಕರರಿಗೆ ಅವರ ವ್ಯಕ್ತಿತ್ವಕ್ಕೆ ತಡವಾಗಿ ನ್ಯಾಯ ಸಿಗುತ್ತಿದೆ ಎಂದು ವಿಶ್ಲೇಷಿಸಿದರು. ಅಂಬೇಡ್ಕರರ ಪಂಚತೀರ್ಥಗಳನ್ನು ಮೋದಿಜೀ ಅವರ ಸರಕಾರ ನಿರ್ಮಿಸಿದೆ. ಆದರೆ, 2004 ರಿಂದ 2014ರವರೆಗೆ ಇದ್ದ ಯುಪಿಎ ಸರಕಾರ ಈ ವಿಚಾರದತ್ತ ಯೋಚನೆಯನ್ನೂ ಮಾಡಲಿಲ್ಲ ಎಂದು ಟೀಕಿಸಿದರು.
ಮೈ ಮರೆವಿನ ಕ್ಷಣ ಘೋರ ಭೀಕರ. ರಾಷ್ಟ್ರವಿನಾಶಕೆ ದಾರಿ ಎಂಬ ಕವಿವಾಣಿಯನ್ನು ಉಲ್ಲೇಖಿಸಿದ ಅವರು, ಕುರಿ, ಕೋಳಿ ಆಸೆಗೆ ಮೈಮರೆತರೆ ಅದು ರಾಷ್ಟ್ರವಿನಾಶಕೆ ದಾರಿ ಎಂದು ಸಲಹೆ ನೀಡಿದರು.
ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ಪರದೇಶೀಯರ ಆಳ್ವಿಕೆಯ ನಂತರ ನಮ್ಮ ಮಾನಸಿಕತೆ ಕುಗ್ಗಿ ಹೋಗಿತ್ತು. 1929ರಲ್ಲಿ ಭಾರತಕ್ಕೆ ಒಂದು ಸಂವಿಧಾನ ಬೇಕೆಂಬ ನಿರ್ಧಾರಕ್ಕೆ ಬರಲಾಯಿತು. 1946ರಲ್ಲಿ ಸಂವಿಧಾನ ಸಮಿತಿ ರಚಿಸಿ, ಲಕ್ಷಾಂತರ ಸಲಹೆ ಸೂಚನೆ ಸ್ವೀಕರಿಸಿ, ಅಕ್ಷರಶಃ ಒಂದು ತಪಸ್ಸಿನ ಮಾದರಿಯಲ್ಲಿ ಕೆಲಸ ನಡೆಯಿತು. ವೈವಿಧ್ಯಮಯ ಜನಜೀವನ, ವಿವಿಧ ರೀತಿಯ ಸಂಸ್ಕೃತಿ, ರಾಜಪರಂಪರೆಯ ಕಟ್ಟುಪಾಡು, ನಿಯಮಾವಳಿಗಳ ಮಧ್ಯೆ ಡಾ. ಅಂಬೇಡ್ಕರ್ ಮತ್ತು ಇತರ ಸದಸ್ಯರು ಜಗತ್ತಿಗೇ ಅತ್ಯುತ್ತಮ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ
ಸಂವಿಧಾನದ ಅರಿವು ಈಗ ಹೆಚ್ಚಾಗಿದೆ. ಸಂವಿಧಾನದ ಆಶಯವನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಪೂಜ್ಯ ಭಾವನೆಯಿಂದ ಅದನ್ನು ಆಡಳಿತದಲ್ಲಿ ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಅಂಬೇಡ್ಕರ್ ಅವರ ಜೀವನಾನುಭವವು ಈ ಸಂವಿಧಾನದಲ್ಲಿ ಸೇರಿದೆ ಎಂದರು. ಇಂದಿರಾಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ನಮ್ಮ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕಿ ಎಂದು ಅವರು ಅಭಿಪ್ರಾಯ ಪಟ್ಟರು.
ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಧರ್ಮದ ಮುಂದುವರೆದ ಭಾಗವೇ ಸಂವಿಧಾನ ಎಂದು ನುಡಿದರು. ಧರ್ಮವನ್ನು ಹೊರತುಪಡಿಸಿದ ಸಂವಿಧಾನ ನಮ್ಮ ದೇಶದಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟರು.












Click it and Unblock the Notifications