Karnataka Public Schools: 6000 ಕೆಪಿಎಸ್ ಶಾಲೆಗಳು ತೆರೆಯಲು ಪ್ಲಾನ್: ಶಿಕ್ಷಣ ಸಚಿವ
ಬೆಂಗಳೂರು, ನವೆಂಬರ್ 12: ಖಾಸಗಿ ಶಾಲೆಗಳಿಗೆ ಸ್ಪರ್ಧೆ ಒಡ್ಡುವಂತೆ ಮತ್ತು ಎಲ್‌ಕೆಜಿಯಿಂದ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಬಹುದಾದಂತಹ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ತೆರೆಯಲಾಗುವುದು. ರಾಜ್ಯದ 6000 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದರಂತೆ ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಗುರಿ ಇದೆ. ವರ್ಷಕ್ಕೆ ಇಂತಿಷ್ಟು ಶಾಲೆಗಳನ್ನು ಆರಂಭವಾಗಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.
ಡಾ.ಅಬ್ದುಲ್ ಕಲಾಂ ಅಜಾದ್ ಅವರ ಜನ್ಮದಿನ ಪ್ರಯುಕ್ತ ಮಂಗಳವಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆಯೋಜಿಸಿದ್ದ 'ರಾಷ್ಟ್ರೀಯ ಶಿಕ್ಷಣ ದಿನ 2025'ದ ಕಾರ್ಯಕ್ರಮದಲ್ಲಿ ಸಚಿವರು ಕೆಪಿಎಸ್ ಶಾಲೆಗಳ ಸ್ಥಾಪನ ಕುರಿತು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ಈವರೆಗೆ 308 ಕೆಪಿಎಸ್ ಶಾಲೆಗಳು ಇದ್ದವು. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವ ನಮ್ಮ ಸರ್ಕಾರ ಬಜೆಟ್ ನಲ್ಲಿ 500 ಕೆಪಿಎಸ್ ಶಾಲೆಗಳನ್ನು ಘೋಷಿಸಿತು. ಅವುಗಳ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಹಾಯದಿಂದ 200 ಶಾಲೆಗಳು, ಗಣಿಬಾದಿತ ಹತ್ತು ತಾಲೂಕುಗಳಲ್ಲಿ ತಲಾ ಹತ್ತು ಶಾಲೆಗಳಂತೆ ಒಟ್ಟು 100 ಶಾಲೆಗಳು, ಅಲ್ಪಸಂಖ್ಯಾತರ ಇಲಾಖೆಯಿಂದ 100 ಶಾಲೆಗಳು ಸೇರಿದಂತೆ ಒಟ್ಟು 900 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ಹೀಗೆ ಪ್ರತಿ ವರ್ಷದಂತೆ ಒಟ್ಟು 6000 ಶಾಲೆಗಳನ್ನು ತೆರೆಯುವ ಚಿಂತನೆ ಸರ್ಕಾರ ಹಾಕಿಕೊಂಡಿದೆ ಎಂದು ಅವರು ಲೆಕ್ಕ ಕೊಟ್ಟರು.
ಈ ಶಾಲೆಗಳನ್ನು ಮಕ್ಕಳು ಆರನೇ ತರಗತಿಗೆ ಕನ್ನಡ ಮತ್ತು ಇಂಗ್ಲಿಷ್ ಕಲಿಕೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ. ಎಲ್‌ಕೆಜಿಯಿಂದ ಹಿಡಿದು ಪಿಯುಸಿವರೆಗೂ ಇಲ್ಲಿಯೇ ವಿದ್ಯಾಭ್ಯಾಸ ಮಾಡಬಹುದು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಇಲ್ಲಿ ಸಿಗಲಿದೆ. ಖಾಸಗಿ ಶಾಲೆಗಳಿಗೆ ಸ್ಪರ್ಧೆ ಒಡ್ಡುವಂತೆ ತೆರೆಯಲಾಗುತ್ತದೆ ಎಂದು ಅವರ ಭರವಸೆ ನೀಡಿದರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪಠ್ಯಕ್ರಮ ಪರಿಷ್ಕರಣೆ ಮಾಡುವುದಾಗಿ ಭರವಸೆ ಹೇಳಿದ್ದೆವು. ನಾನು ಶಿಕ್ಷಣ ಸಚಿವನಾದ ಮೇಲೆ ಪಠ್ಯಕ್ರಮ ಪರಿಷ್ಕರಣೆಯ ಕಡತಕ್ಕೆ ಮೊದಲ ಸಹಿ ಹಾಕಿದ್ದೆ. ಪಠ್ಯ ಪುಸ್ತಕಗಳಲ್ಲಿ ಶಿಕ್ಷಣ ಇರಬೇಕೆ ಹೊರತು, ಯಾವುದೋ ಒಂದು ಪಕ್ಷದ ಪರವಾದ ಸಿದ್ಧಾಂತ ಇರಬಾರದು. 57 ಸಾವಿರಕ್ಕಿಂತ ಹೆಚ್ಚು ಶಾಲೆಗಳು ರಾಜ್ಯದಲ್ಲಿದ್ದು, ಅವುಗಳಲ್ಲಿ ಅಂದಾಜು 1.16 ಕೋಟಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಸಚಿವರು ಮಾಹಿತಿ ಕೊಟ್ಟರು.
ಭಾರತದ ಮೊದಲ ಶಿಕ್ಷಣ ಸಚಿವರಾಗಿ ಅಬ್ದುಲ್ ಕಲಾಂ ಅಜಾದ್ ಅವರು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಳನ್ನು ನೀಡಿದ್ದಾರೆ. ಅವೆಲ್ಲವನ್ನು ಸ್ಮರಿಸಬೇಕು ಎಂದರು.












Click it and Unblock the Notifications