Breaking; ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಮೈಸೂರಿಗೆ ಹೊಸ ಎಸ್ಪಿ
ಬೆಂಗಳೂರು, ಡಿಸೆಂಬರ್ 21; ಕರ್ನಾಟಕ ಸರ್ಕಾರ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ವರ್ಗಾವಣೆ ಮಾಡಲಾಗಿದೆ.
ಬುಧವಾರ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸೀಮಾ ಲಾಟ್ಕರ್‌ರನ್ನು ಮೈಸೂರಿನ ನೂತನ ಎಸ್ಪಿಯಾಗಿ ನೇಮಕ ಮಾಡಲಾಗಿದೆ.
ಕಳೆದ ಎರಡು ವಾರಗಳಿಂದ ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಹಲವಾರು ವರ್ಗಾವಣೆಗಳನ್ನು ಮಾಡುತ್ತಿದೆ. ಮೊದಲು ಇನ್ಸ್‌ಪೆಕ್ಟರ್, ಬಳಿಕ ಸಿವಿಲ್ ಡಿವೈಎಸ್ಪಿಗಳ ವರ್ಗಾವಣೆ ನಡೆದಿತ್ತು.

ಬಳಿಕ ಸಿವಿಎಲ್ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ನಡೆದಿತ್ತು. ಈಗ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಸರ್ಕಾರ ವರ್ಗಾವಣೆಗೆ ಕೈ ಹಾಕಿದೆ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು
* ಆರ್. ಚೇತನ್. ಎಸ್ಪಿ ರಾಜ್ಯ ಗುಪ್ತಚರ ಇಲಾಖೆ
* ಸೀಮಾ ಲಾಟ್ಕರ್. ಎಸ್ಪಿ ಮೈಸೂರು ಜಿಲ್ಲೆ
* ಶಿವಪ್ರಕಾಶ್ ದೇವರಾಜ್. ಎಐಜಿಪಿ, ಸಿಸಿಬಿ ಬೆಂಗಳೂರು
* ಎಂ. ಮುತ್ತುರಾಜ್. ಮೈಸೂರು ಡಿಸಿಪಿ. ಕಾನೂನು ಸುವ್ಯವಸ್ಥೆ
* ಬಾಬಾಸಾಬ್ ನೇಮೇಗೌಡ. ಪೊಲೀಸ್ ವರಿಷ್ಠಾಧಿಕಾರಿ ಗದಗ
ಡಿಸೆಂಬರ್ 19ರಂದು ಕರ್ನಾಟಕ ಸರ್ಕಾರ 17 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿತ್ತು. ಅದರಲ್ಲೂ ಕರ್ನಾಟಕ ಹೈಕೋರ್ಟ್ ಎಸಿಬಿ ರದ್ದುಗೊಳಿಸಿದ ಬಳಿಕ ಅಲ್ಲಿದ್ದ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗುತ್ತಿದೆ.
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಂಸ್ಥೆಗೆ ಮಂಜೂರಾಗಿದ್ದ ಹುದ್ದೆಗಳನ್ನು ಬಳಸಿಕೊಂಡು ಹೊಸದಾಗಿ ಪೊಲೀಸ್ ಉಪ-ವಿಭಾಗ ಮತ್ತು ಸಂಚಾರ ಪೊಲೀಸ್ ಠಾಣೆಗಳನ್ನು ಸೃಜಿಸುವ ಕುರಿತು ಸಹ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಂಜೂರಾಗಿದ್ದ ಸಿವಿಲ್ ಮತ್ತು ಸಶಸ್ತ್ರ ಹುದ್ದೆಗಳನ್ನು ಲೋಕಾಯುಕ್ತ ಸಂಸ್ಥೆಗೆ ಹಾಗೂ ಪೊಲೀಸ್ ಇಲಾಖೆಗೆ ಹಂಚಿಕೆ ಮಾಡಿ, ಮುಂದಿನ ಮರು ಸ್ಥಳ ನಿಯುಕ್ತಿಗೊಳಿಸಿ ಸಹ ಆದೇಶಿಸಲಾಗಿದೆ.












Click it and Unblock the Notifications