KPSC: 'ಕೆಪಿಎಸ್‌ಸಿ ಸಂಸ್ಥೆ ಶುದ್ಧೀಕರಿಸಿ ಸರ್ಕಾರ ಕನ್ನಡಪರವಾಗಿಸಲಿ'
ಬೆಂಗಳೂರು, ಮಾರ್ಚ್ 07: ಕರ್ನಾಟಕ ಲೋಕಸೇವಾ ಆಯೋಗವು (KPSC) ಇತ್ತೀಚಿನ ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ಸಾಕಷ್ಟು ಲೋಪದೋಷವಾಗಿದೆ. ಕನ್ನಡ ಬಾರದ ಅಧಿಕಾರಿಗಳೇ ಇದ್ದಾರೆಯೇ ಎಂಬ ಆರೋಪ ಕೇಳಿ ಬಂದವು. ಇದರಿಂದ ಸರ್ಕಾರವು ಮುಜುಗರ ಅನುಭವಿಸಿತ್ತು. ವಿದ್ಯಾರ್ಥಿಗಳಿಗೂ ತೊಂದರೆ ಆಗಿತ್ತು. ಇದೀಗ ಕೆಪಿಎಸ್‌ಸಿ ಕಾರ್ಯವೈಖರಿಯಲ್ಲಿ ಸುಧಾರಣೆ ತರಲು ಸರ್ಕಾರ ಮುಂದಾಗಿದೆ.
ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು, ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯಶೈಲಿಯಲ್ಲಿ ಸರ್ಕಾರವು ಸುಧಾರಣೆ ತರಲು ಮುಂದಾಗಿದೆ. ಈ ಬಗ್ಗೆ ಪ್ರಾಧಿಕಾರ ನಿರಂತರ ಆಗ್ರಹ ಮಾಡಿತ್ತು. ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿದ್ದ ಅಂಶವನ್ನು ಅವರು ಈ ವೇಳೆ ಸ್ಮರಿಸಿದರು.

ಸದ್ಯ ಆಯೋಗದ ಶುದ್ಧೀಕರಣ ಮಾಡಲು ಮುಂದಾಗಿರುವ ಸರ್ಕಾರದ ಈ ಕ್ರಮವು ಅಸಂಖ್ಯ ಕನ್ನಡಿಗ ಅಭ್ಯರ್ಥಿಗಳ ಉದ್ಯೋಗಾಕಾಂಕ್ಷೆಯನ್ನು ಸಾಕಾರವಾಗಿಸುವಲ್ಲಿ ಉತ್ತಮ ನಡೆಯಾಗಿದೆ. ಆಯೋಗದ ಆಡಳಿತ ವೈಖರಿ ಶುದ್ಧೀಕರಿಸಿ ಅದನ್ನು ಸಂಪೂರ್ಣ ಕನ್ನಡಪರವಾದ ಸಂಸ್ಥೆಯಾಗಿ ಮಾಡಬೇಕು ಎಂದು ಅವರು ಹೇಳಿದರು.
ಸರ್ಕಾರದ ನಿರ್ಧಾರದಿಂದ ಅಭ್ಯರ್ಥಿಗಳಲ್ಲಿ ವಿಶ್ವಾಸ
ರಾಜ್ಯ ಸರ್ಕಾರದ ಭಾಷಾಂತರ ಇಲಾಖೆ, ವಿವಿಧ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಲ್ಲಿ ಪ್ರತಿಭಾನ್ವಿತ ಶಿಕ್ಷಣ ತಜ್ಞರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರುಗಳ ಸೇವೆಯನ್ನು ಬಳಸಿಕೊಂಡಲ್ಲಿ ಲೋಕಸೇವಾ ಆಯೋಗವು ಉತ್ತಮ ಹೆಸರನ್ನು ಪಡೆಯಬಹುದೆಂದು ತಾವು ಈ ಹಿಂದೆಯೇ ಹೇಳಿದ್ದೇವು. ಈಗ ಸರ್ಕಾರವು ಕನ್ನಡದಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ನಿರ್ದೇಶನವನ್ನು ನೀಡಲು ಮುಂದಾಗಿದೆ. ಇದು ಅಸಂಖ್ಯಾತ ಕನ್ನಡಿಗ ಉದ್ಯೋಗಾರ್ಥಿಗಳಿಗೆ ವಿಶ್ವಾಸ ತುಂಬುವ ಪ್ರಯತ್ನವಾಗಿದೆ ಎಂದು ಡಾ.ಬಿಳಿಮಲೆ ಹೇಳಿದರು.
ಸ್ವಾಯತ್ತ ಸಂಸ್ಥೆಯ ಹಣೆಪಟ್ಟಿಯೇ ಕನ್ನಡಕ್ಕೆ ವಿರೋಧಿಯಾಗಿರುವುದು ವಿಷಾದನೀಯ. ಸರ್ಕಾರದ ಶುದ್ಧೀಕರಣ ತೀರ್ಮಾನವು ಸಂಸ್ಥೆಯ ವೃತ್ತಿಪರತೆಯನ್ನು ಹೆಚ್ಚಿಸುವಂತಾದರೆ ಅದು ಕನ್ನಡದ ನಿಜವಾದ ಸೇವೆ ಎನ್ನಬಹುದು ಕೇಂದ್ರ ಲೋಕಸೇವಾ ಆಯೋಗವು ಪ್ರತಿ ವರ್ಷ ನಡೆಸುವ ಪರೀಕ್ಷೆಗಳಲ್ಲಿ ಒಮ್ಮೆಯೂ ಪ್ರಮಾದ ಉಂಟಾಗದೆ ಇರಲು ಸಾಧ್ಯವಾದರೆ ಕೆಪಿಎಸ್‌ಸಿಯಲ್ಲಿ ಇದು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ತೀರ್ಮಾನವು ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಹೊಸ ಶಕೆ ಆರಂಭವಾಗುವ ಹಾಗಾಗಲಿ ಎಂದು ಅವರು ಆಶಿಸಿದ್ದಾರೆ.

ಆರೋಗ್ಯ ಸಚಿವರ ಕನ್ನಡಪರ ನಿಲುವು ಅಭಿನಂದನೀಯ
ಆರೋಗ್ಯ ಇಲಾಖೆಯ ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಜಾರಿಗೆ ತರಲು ವೈಯಕ್ತಿಕ ಗಮನಹರಿಸಿ ರಾಜ್ಯ ಸರ್ಕಾರದ ಎಲ್ಲ ಪತ್ರ ವ್ಯವಹಾರಗಳನ್ನು, ಆದೇಶಗಳನ್ನು ಕನ್ನಡದಲ್ಲಿಯೇ ಹೊರಡಿಸಲಾಗುವುದು ಎಂದು ಪ್ರಾಧಿಕಾರಕ್ಕೆ ವರದಿ ನೀಡಲಾಗಿದೆ. ಈ ಕುರಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರ ನಿಲುವು ಮೆಚ್ಚುವಂತದ್ದು ಎಂದರು.
ಆರೋಗ್ಯ ಸಚಿವರ ಈ ಕನ್ನಡಪರ ನಿಲುವು ಬೇರೆ ಇಲಾಖೆಗಳಿಗೆ ಮಾದರಿಯಾಗಬೇಕೆಂದು ಆಶಿಸಿದರು. ಸರ್ಕಾರದ ಎಲ್ಲ ಇಲಾಖೆಗಳ ಆಡಳಿತದಲ್ಲಿ ಕನ್ನಡದ ಅನುಷ್ಠಾನ ಸಂಪೂರ್ಣವಾದರೆ ಜನಸಾಮಾನ್ಯರಲ್ಲಿ ಸರ್ಕಾರದ ಬಗ್ಗೆ ಭರವಸೆ ಮೂಡುವುದು ಸಹಜವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಂಗ್ಲ ಭಾಷೆಯ ಸರ್ಕಾರದ ಆದೇಶವನ್ನು ಉಲ್ಲೇಖಿಸಿ ಕ್ರಮಕ್ಕೆ ಆರೋಗ್ಯ ಸಚಿವರನ್ನು ಆಗ್ರಹಿಸಿದ್ದರು.












Click it and Unblock the Notifications