ರಾಜ್ಯಾದ್ಯಂತ ಇಂದಿನಿಂದಲೇ ಸರ್ಕಾರಿ ಪ್ರಾಥಮಿಕ & ಪ್ರೌಢ ಶಾಲೆಗಳು ಓಪನ್, ವಿದ್ಯಾರ್ಥಿಗಳ ಸ್ವಾಗತಕ್ಕೆ ಸಿದ್ಧತೆ ಹೇಗಿದೆ?
ಕರ್ನಾಟಕ, ಮೇ, 31: ಇದೀಗ ಬೇಸಿಗೆ ರಜೆ ಮುಕ್ತಾಯವಾದ ಹಿನ್ನೆಲೆ ರಾಜ್ಯಾದಲ್ಲಿ ಎಲ್ಲೆಡೆ ಸರ್ಕಾರಿ ಶಾಲೆಗಳು ಬುಧವಾರದಿಂದ (ಮೇ 31 ) ಆರಂಭ ಆಗಲಿವೆ. ಹಾಗೆಯೆ ಪರೀಕ್ಷೆ ಬರೆದು ಇಷ್ಟು ದಿನ ಬೀಸಿಗೆ ರಜೆಯಲ್ಲಿದ್ದ ಮಕ್ಕಳು ಇಂದಿನಿಂದ ಶಾಲೆಗೆ ಪಾಟಿಚೀಲ ಹಿಡಿದು ಹೊರಡಲು ಯುದ್ಧಕ್ಕೆ ಸಜ್ಜಾದಂತೆ ಶಾಲೆಗೆ ಹೊರಡಲು ತಯಾರಾಗಿದ್ದಾರೆ.
ಇನ್ನು 2023 -24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಇಂದಿನಿಂದ ರಾಜ್ಯದೆಲ್ಲೆಡೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭ ಆಗಿರಲಿವೆ. ಈ ಹಿನ್ನೆಲೆ ಹಲವೆಡೆ ಈಗಾಗಲೇ ನಿನ್ನೆಯಿಂದಲೂ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣವನ್ನು ಸೂಷ್ಟಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳಿಗೆ ಸಿಹಿ ಹಂಚಿವ ಮೂಲಕ ಶಾಲೆಗೆ ಬರಮಾಡಿಕೊಳ್ಳಲು ಶಿಕ್ಷಣ ಇಲಾಖೆಯೂ ಸೂಚನೆ ನೀಡಿದೆ.

ಇಂದಿನಿಂದ ಶಾಲೆ ಆರಂಭ ಹಿನ್ನೆಲೆ ರಾಜ್ಯಾದ್ಯಂತ ಎಲ್ಲಾ ಕಡೆಯೂ ಶಾಲೆಗಳಲ್ಲಿಯೂ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಮೇ 29 ಮತ್ತು ಮೇ 31ರಂದು ಶಾಲೆಯ ಕೊಠಡಿ, ಶೌಚಾಲಯ, ಕಾಂಪೌಂಡ್, ಆವರಣ ಎಲ್ಲವನ್ನು ಹಿರಿಯ ವಿದ್ಯಾರ್ಥಿಗಳು ಹಾಗೂ ಸಹಾಯಕರೊಂದಿಗೆ ಶಿಕ್ಷಕರು ಸ್ವಚ್ಛಗೊಳಿಸಿ ಮೊದಲ ದಿನ ಮಕ್ಕಳನ್ನು ಬರಮಾಡಿಕೊಳ್ಳಲು ಸನ್ನದ್ಧರಾಗಿದ್ದಾರೆ. ಅಲ್ಲದೆ ಮಕ್ಕಳನ್ನು ಶಾಲೆಯವರೆಗೂ ಬಿಡಲು ಪೋಷಕರು ಕೂಡ ತಯಾರಾಗಿ ಬರುತ್ತಿದ್ದಾರೆ.
ಹಾಗೆಯೇ ಶಿಕ್ಷಣ ಇಲಾಖೆ ಪ್ರಕಾರ ಶಾಲೆಗೆ ಆಗಮಿಸಲಿರುವ ಮಕ್ಕಳಿಗೆ ಮೊದಲ ದಿನ ಬಿಸಿಯೂಟದ ಜೊತೆ ಸಿಹಿ ಹಂಚಬೇಕು. ನಂತರ ಸ್ವಲ್ಪ ಸಮಯದ ಬಳಿಕ ಶೈಕ್ಷಣಿಕ ತರಗತಿಗಳನ್ನು ಪ್ರಾರಂಭಿಸಬೇಕು ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಮತ್ತೊಂದೆಡೆ ಇದೀಗ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಆದ್ದರಿಂದ ಒಂದು ವೇಳೆ ಮಕ್ಕಳು ಶಾಲೆಗೆ ಬರಲಾಗದಿದ್ದರೆ ರಜೆ ಘೋಷಿಸಲು ಸಹ ಸೂಚನೆ ನೀಡಲಾಗಿದೆ.
ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯ ಆರ್ಭಟ ಶುರು ಮಾಡಿದೆ. ಇದರಿಂದ ಶಾಲೆಗೆ ಬರುವ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದೆಂದು ಶಿಕ್ಷಣ ಇಲಾಖೆಯು ಭಾರೀ ಮಳೆ ಜೋರಾಗಿ ಬರುವ ಸಾಧ್ಯತೆ ಇದ್ದರೆ ಮಾತ್ರ ಶಾಲೆಗೆ ರಜೆ ಘೋಷಣೆ ಮಾಡುವ ಮುನ್ಸೂಚನೆಯನ್ನು ಕೂಡ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications