ಕರ್ನಾಟಕದ ಮತ್ತೊಬ್ಬ ಪ್ರಭಾವಿ ಸಚಿವನ ವಿರುದ್ಧ ಸರ್ಕಾರಿ ಭೂಮಿ ಕಬಳಿಕೆ ದೂರು
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ತಮ್ಮ ನಾಯಕರಿಗೆಂದೇ ಹೊಸದಾಗಿ ಏನಾದರು ಯೋಜನೆ ಜಾರಿ ಮಾಡಿದ್ಯಾ. ಯಾಕೆಂದರೆ ಒಬ್ಬೊಬ್ಬ ನಾಯಕರಾದ ಮೇಲೆ ಒಬ್ಬಂರತೆ ನಾಯಕರು ಸರ್ಕಾರಿ ಭೂಮಿ ಕಬಳಿಸುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಕೇಳ್ತಾ ಇದ್ದೀವಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸರ್ಕಾರಿ ಜಮೀನು ಕಬಳಿಸುವ ಅಲಿಖಿತ ಯೋಜನೆ ಜಾರಿ ಮಾಡಿದ್ದೀರಾ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ. ಅಬಕಾರಿ ಸಚಿವರ ಮೇಲೆ ಕೇಳಿ ಬಂದಿರುವ ಆರೋಪವನ್ನು ಜೆಡಿಎಸ್ ಉಲ್ಲೇಖಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಜೆಡಿಎಸ್ ಪೋಸ್ಟ್ ಮಾಡಿದೆ. ಮೂಡಾ ಹಗರಣ, ಕೆಐಎಡಿಬಿ ಸೈಟು ಅಕ್ರಮಗಳ ಬೆನ್ನಲ್ಲೇ, ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ವಿರುದ್ಧವೂ 92 ಎಕರೆ ಸರ್ಕಾರಿ ಭೂಮಿ ಕಬಳಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ರಾಯಚೂರು ಚಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸೇರಿದ 49 ಎಕರೆ, ಹಾಗೂ ಅರಣ್ಯ ಇಲಾಖೆಯ 43 ಎಕರೆ ಜಮೀನನ್ನು ತಿಮ್ಮಾಪುರ ಒಡೆತನದ ಆರ್.ಬಿ ಶುಗರ್ಸ್ ಫ್ಯಾಕ್ಟರಿ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ರೈತ ಸಂಘ ಲಿಂಗಸಗೂರು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೇ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೇ 92 ಎಕರೆ ಸರ್ಕಾರಿ ಜಮೀನನ್ನು ಯಾವಾಗ ವಶಪಡಿಸಿಕೊಳ್ಳುತ್ತೀರಿ ಎಂದು ಜೆಡಿಎಸ್ ಪ್ರಶ್ರೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮ ಸರ್ಕಾರದಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಸರ್ಕಾರಿ ಜಮೀನು ಕಬಳಿಸುವ ಅಲಿಖಿತ ಯೋಜನೆ ಜಾರಿಯಾಗಿದೆಯೇ ಎಂದು ಪ್ರಶ್ನೆ ಮಾಡಿದೆ.

ಆರ್ಬಿ ತಿಮ್ಮಾಪುರ ಅವರ ವಿರುದ್ಧ ಆರೋಪವೇನು ?
ರಾಜ್ಯದಲ್ಲಿ ಭೂ ಹಗರಣಗಳೇ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಇದೀಗ ಮತ್ತೊಬ್ಬ ರಾಜ್ಯ ಸಚಿವನ ವಿರುದ್ಧ ಭೂಕಬಳಿಕೆ ಆರೋಪ ಕೇಳಿ ಬಂದಿದೆ. ಸಚಿವ ಆರ್ಬಿ ತಿಮ್ಮಾಪುರ ಅವರ ಒಡೆತನದ ಆರ್ಬಿ ಶುಗರ್ಸ್ ಕಂಪನಿಯು ಸರ್ಕಾರಿ ಭೂಮಿ ಕಬಳಿಸಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆಯ ಚಿಕ್ಕ ಉಪ್ಪೇರಿ ಗ್ರಾಮ ವ್ಯಾಪ್ತಿಯಲ್ಲಿರುವ ಗೈರಾಣಿ ಜಮೀನು ಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಲಿಂಗಸುಗೂರು ರೈತ ಸಂಘದಿಂದ ತಹಶೀಲ್ದಾರ್ ಅವರಿಗೆ ಪತ್ರ ಬರೆಯಲಾಗಿದೆ.
ಸುಣಕಲ್ ಸಿಮಾಂತರದಲ್ಲಿ ಜಮೀನು ಖರೀದಿ ಮಾಡಿರುವ ಪ್ರಭಾವಿ ವ್ಯಕ್ತಿಗಳು ಈ ಪ್ರದೇಶದ ಪಕ್ಕದಲ್ಲೇ ಗೈರಾಣಿ ಭೂಮಿಯನ್ನು ಸಹ ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಆದರೆ, ಇದು ನಿರ್ದಿಷ್ಟವಾಗಿ ಜಾನುವಾರು ಅಭಿವೃದ್ಧಿಗಾಗಿ ಮೀಸಲಾಗಿದೆ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸುವ ಚಿಂತನೆ ಇದೆ ಎಂದು ಹೇಳಲಾಗುತ್ತಿದೆ. ಈ ರೀತಿ ಮಾಡಿದರೆ ಸುತ್ತಮುತ್ತದ ಪ್ರದೇಶದಲ್ಲಿರುವ ಜನರಿಗೆ ಸಮಸ್ಯೆ ಆಗಲಿದೆ ಎಂದು ಸ್ಥಳೀಯ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಹಲವು ಭೂ ಹಗರಣದ ಆರೋಪಗಳು ಸದ್ದು ಮಾಡುತ್ತಿವೆ. ವಿರೋಧ ಪಕ್ಷಗಳು ಇದನ್ನು ಅಸ್ತ್ರವಾಗಿ ಬಳಸಿಕೊಂಡಿವೆ. ಇದೀಗ ಅಬಕಾರಿ ಸಚಿವರ ವಿರುದ್ಧವೂ ಸಹ ಆರೋಪ ಕೇಳಿ ಬಂದಿದ್ದು, ಇದನ್ನು ಸಹ ವಿರೋಧ ಪಕ್ಷಗಳು ಟೀಕಿಸಿವೆ. ಆರೋಪ ಕೇಳಿ ಬರುತ್ತಿದ್ದಂತೆಯೇ ಈ ವಿಷಯದ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ ಪಕ್ಷವು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಮ್ಮ ನಾಯಕರಿಗೆಂದೇ ಹೊಸದಾಗಿ ಏನಾದರು ಯೋಜನೆ ಜಾರಿ ಮಾಡಿದೆಯೇ ಎಂದು ವ್ಯಂಗ್ಯವಾಡಿದೆ.












Click it and Unblock the Notifications