Government Job: ಈ ಕಾರಣಕ್ಕೆ ಸರ್ಕಾರಿ ಹುದ್ದೆಗಳು ನೇಮಕಾತಿ ಆಗುತ್ತಿಲ್ಲ: ವಿಜಯೇಂದ್ರ ಹೇಳಿದ್ದೇನು?
ರಾಜ್ಯದಲ್ಲಿ ಖಾಲಿ ಉಳಿದಿರುವ ಸರ್ಕಾರಿ ಹುದ್ದೆಗಳ ಭರ್ತಿ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ವಿಚಾರವೊಂದನ್ನು ಹೇಳಿದ್ದಾರೆ. ರಾಜ್ಯ ಸರ್ಕಾರವು ಆ ಒಂದು ಕಾರಣಕ್ಕೆ ಸರ್ಕಾರಿ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ಆರಂಭಿಸಿಲ್ಲ ಎಂದು ದೂರಿದ್ದಾರೆ. ಸರ್ಕಾರ ನಿದ್ರೆಯಿಂದ ಎದ್ದು, ಸರ್ಕಾರಿ ಹುದ್ದೆಗಳು ಭರ್ತಿಯಾಗಲು ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಸರ್ಕಾರಿ ಹುದ್ದೆಗಳ ಭರ್ತಿ ವಿಳಂಬ ಕುರಿತು ವಿಜಯೇಂದ್ರ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಪರಿಶಿಷ್ಟ ಸಮುದಾಯಗಳ ಬಗ್ಗೆ ತನಗಿರುವುದು ಬದ್ಧತೆಯ ಕಾಳಜಿಯಲ್ಲ, ಅದು "ಮೊಸಳೆ ಕಣ್ಣೀರು" ಎನ್ನುವುದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತೋರಿಸಿ ಕೊಡುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಈಗಲೂ ಗೊಂದಲಗಳ ಗೂಡು ಕಟ್ಟಿಕೊಂಡಿರುವ ಸರ್ಕಾರವು ಸದ್ಯ ಹೊರಡಿಸಿರುವ ಆದೇಶದ ಅನ್ವಯ ಅಗತ್ಯ ತಂತ್ರಾಂಶವನ್ನೇ ಅಭಿವೃದ್ಧಿಪಡಿಸದೆ ಉಡಾಫೆ ಧೋರಣೆ ಪ್ರದರ್ಶಿಸಿದೆ. ಇದರ ಪರಿಣಾಮ ಸರ್ಕಾರಿ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ಆರಂಭಿಸಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಬೇಕಿರುವ ಎಂಡಿ ಸೀಟು ಹಂಚಿಕೆಗೆ ಅರ್ಜಿ ಸಲ್ಲಿಸಲು ತೊಡಕಾಗಿದೆ ಎಂದಿದ್ದಾರೆ.

ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳು ಒಳ ಮೀಸಲಾತಿ ಅನ್ವಯ ಸವಲತ್ತು ಪಡೆಯಲು ಅನಗತ್ಯ ವಿಳಂಬ ಉಂಟಾಗುತ್ತಿದೆ. ಸರ್ಕಾರ ನಿದ್ರೆಯಿಂದ ಎದ್ದು ಈ ಕೂಡಲೇ ತಂತ್ರಾಂಶ ಅಭಿವೃದ್ಧಿಪಡಿಸಿ ಸುಲಲಿತವಾಗಿ ಸೀಟು ಹಂಚಿಕೆ ಹಾಗೂ ಸರ್ಕಾರಿ ಹುದ್ದೆಗಳು ಭರ್ತಿಯಾಗಲು ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿದ್ಯಾವರ್ಧಕ ಸಂಘಕ್ಕೆ ಅನುದಾನ ಕೊಡಿ
ಕನ್ನಡ ಭಾಷೆಯ ಉಳಿವಿಗಾಗಿ ನಡೆದ ಗೋಕಾಕ್ ಚಳುವಳಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜನ್ಮತಾಳಲು ಕಾರಣವಾಗಿದ್ದ 125 ವರ್ಷಗಳ ಇತಿಹಾಸವಿರುವ ಕರ್ನಾಟಕ ವಿದ್ಯಾವರ್ಧಕ ಸಂಘ ಅನುದಾನವಿಲ್ಲದೇ ಸೊರಗುತ್ತಿರುವುದು ಅತ್ಯಂತ ಶೋಚನೀಯ ಎಂದು ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಜಾಗ, ಅನುದಾನ ಸೇರಿದಂತೆ ಹಲವು ಅಗತ್ಯ ಬೇಡಿಕೆಗಳ ಕುರಿತು ಸರ್ಕಾರದ ಗಮನಕ್ಕೆ ತಂದರೂ ಯಾವುದೇ ರೀತಿಯ ಪೂರಕ ಸ್ಪಂದನೆ ದೊರೆಯಲಿಲ್ಲ. ಇದು ಕನ್ನಡ ಭಾಷೆ ಹಾಗೂ ಕನ್ನಡ ಪರಂಪರೆ ಉಳಿವಿನ ಕಾರ್ಯಕ್ಕೆ ಶ್ರಮಿಸುವ ಸಂಘಕ್ಕೆ ಅನುದಾನ ನೀಡದೇ ಇರುವುದು ಕಾಂಗ್ರೆಸ್ ಸರ್ಕಾರದ ಕನ್ನಡ ತಾತ್ಸಾರ ಧೋರಣೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಖಂಡಿಸಿದ್ದಾರೆ.
ಕನ್ನಡ ನಾಡು-ನುಡಿ, ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲದ ಈ ಸರ್ಕಾರ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಬಗ್ಗೆ ಅಸಡ್ಡೆ ನೀತಿ ಅನುಸರಿಸುತ್ತಿರುವುದು ಅತ್ಯಂತ ಖಂಡನೀಯ. ಧಾರವಾಡದ ನೆಲದಲ್ಲಿ ಸ್ವಾತಂತ್ರ್ಯಾ ಪೂರ್ವದಿಂದಲೂ ಕನ್ನಡ ಡಿಂಡಿಮ ಬಾರಿಸಿ, ನಾಡಿನ ಉದ್ದಾಮ ಪಂಡಿತರು ಹಾಗೂ ಸಾಹಿತಿಗಳ ಕಾರ್ಯಕ್ಷೇತ್ರದ ವೇದಿಕೆಯಾಗಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಪುನಶ್ಚೇತನಕ್ಕೆ ಬದ್ಧತೆಯನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಅಗತ್ಯ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications