Government Job: ಈ ಸಾಧನೆ ಮಾಡಿದವರಿಗೆ ಎ ಗ್ರೂಪ್ ಸರ್ಕಾರಿ ಹುದ್ದೆ: ಸಿಎಂ ಸಿಹಿಸುದ್ದಿ
ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಸಾಮಾನ್ಯವಾಗಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ಸರ್ಕಾರದಿಂದ ಗೌರವಧನ ಸೇರಿದಂತೆ ವಿವಿಧ ಸವಲತ್ತುಗಳನ್ನು ನೀಡಲಾಗುತ್ತದೆ. ಅದರಂತೆ ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್ ಸೇರಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದವರಿಗೆ ರಾಜ್ಯ ಸರ್ಕಾರದಿಂದ ಭಾರೀ ಸೌಕರ್ಯ ಸಿಗಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿನ ನ್ಯೂ ಉರ್ವ ಕ್ರೀಡಾಂಗಣದಲ್ಲಿ ನಡೆದ "ಚೀಫ್ ಮಿನಿಸ್ಟರ್-ಮಂಗಳೂರು ಇಂಡಿಯಾ ಇಂಟರ್ ನ್ಯಾಷನಲ್ ಚಾಲೆಂಜ್ 2025 ಪಂದ್ಯಾವಳಿ ಉದ್ಘಾಟನೆ ವೇಳೆ ಮಾತನಾಡಿದ್ದಾರೆ.
ಜನಸಂಖ್ಯೆಯಲ್ಲಿ ದೇಶ ನಂಬರ್ ಒನ್ ಆಗಿದೆ. ಒಲಂಪಿಕ್ ಪದಕದಲ್ಲೂ ನಂಬರ್ ಒನ್ ಆಗಬೇಕು ಎಂದಿದ್ದಾರೆ. ಈಗಾಗಲೇ ಒಲಂಪಿಕ್ಸ್, ಪ್ಯಾರಾ ಒಲಂಪಿಕ್ಸ್ ಸೇರಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದವರಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಎ ಗುಂಪಿನ ಹುದ್ದೆಗಳ ಜೊತೆಗೆ ಇತರೆ ಹುದ್ದೆಗಳನ್ನೂ ಮೀಸಲಿಟ್ಟಿದ್ದೇವೆ. ಡಿವೈಎಸ್‌ಪಿ ಸೇರಿ ಇತರೆ ಪೊಲೀಸ್ ಹುದ್ದೆಗಳಲ್ಲೂ ಶೇ. 2ರಷ್ಟಿದ್ದ ಹುದ್ದೆ ಮೀಸಲಾತಿಯನ್ನು ಶೇ. 3ಕ್ಕೆ ಹೆಚ್ವಿಸಿದ್ದೇನೆ.

ಜೊತೆಗೆ ಒಲಂಪಿಕ್‌ನಲ್ಲಿ ಪದಕ ತಂದು ರಾಜ್ಯದ, ರಾಷ್ಟ್ರದ ಕೀರ್ತಿ ಹೆಚ್ಚಿಸುವವರಿಗೆ 5 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದೇನೆ. ಇನ್ನೂ ಅಗತ್ಯವಾದ ಅನುಕೂಲಗಳನ್ನೆಲ್ಲ ಮಾಡಿಕೊಡಲು ಸರ್ಕಾರ ಸಿದ್ಧವಿದೆ. ಒಟ್ಟಿನಲ್ಲಿ ನೀವು ಒಲಿಂಪಿಕ್‌ನಲ್ಲಿ ದೇಶಕ್ಕಾಗಿ ಪದಕ ತರಬೇಕು. ವಿಶ್ವದ ಅತ್ಯಂತ ಜನಪ್ರಿಯ ಆಟಗಳಲ್ಲಿ ಬ್ಯಾಂಡ್ಮಿಂಟನ್ ಕೂಡ ಒಂದು. ಪ್ರಕಾಶ್ ಪಡುಕೋಣೆ, ಪುಲ್ಲೇಲ ಗೋಪಿಚಂದ್, ಸೈನಾ ನೆಹ್ವಾಲ್, ಪಿ.ವಿ.ಸಿಂಧು ಭಾರತೀಯ ಬ್ಯಾಡ್ಮಿಂಟನ್‌ಗೆ ಅಡಿಪಾಯ ಹಾಕಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಕ್ರೀಡಾಂಗಣಕ್ಕೆ 38 ಕೋಟಿ
ಈ ಪಂದ್ಯಾವಳಿ ನಡೆಯುತ್ತಿರುವ ಈ ಉರ್ವ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ಮಾಡಿದ್ದು ನಾನೇ, ಈಗ ಉದ್ಘಾಟನೆ ಕೂಡ ನಾನೇ ಮಾಡಿದೆ. ನಮ್ಮ ಸರ್ಕಾರದ್ದೇ ಹಣ. ಹಿಂದಿನ ಬಿಜೆಪಿ ಸರ್ಕಾರ ಈ ಕ್ರೀಡಾಂಗಣ ಪೂರ್ಣಗೊಳ್ಳಲು ಸಹಕಾರ ನೀಡಲಿಲ್ಲ. ಆದರೆ ಮತ್ತೆ ನಾನೇ ಮುಖ್ಯಮಂತ್ರಿ ಆಗಿ ಬಂದು ಒಟ್ಟು 38 ಕೋಟಿ ರೂಪಾಯಿಗಳನ್ನು ನೀಡಿ ಕ್ರೀಡಾಂಗಣ ಪೂರ್ಣಗೊಳಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಮಾಜದಲ್ಲಿ ಒಡಕು ಉಂಟು ಮಾಡಿ, ದ್ವೇಷ ಬಿತ್ತಲು ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಸಿಎಂ ಎಚ್ಚರಿಸಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಹಿಳೆಯರಿಗೆ ಅಗೌರವವಾಗಿ ಭಾಷಣದಲ್ಲಿ ಮಾತನಾಡಿದ್ದಾರೆ. ಈ ರೀತಿ ದ್ವೇಷಪೂರಿತ ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ದಾಖಲಾಗುತ್ತದೆ ಎಂದಿದ್ದಾರೆ. ಧರ್ಮಸ್ಥಳ ಪ್ರಕರಣದ ಎಸ್.ಐ.ಟಿ ತನಿಖೆಯಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ. ಈ ತಿಂಗಳಾಂತ್ಯದಲ್ಲಿ ವರದಿ ಸಲ್ಲಿಕೆ ಮಾಡುವುದಾಗಿ ಎಸ್‌ಐಟಿ ಹೇಳಿದೆ ಎಂದಿದ್ದಾರೆ.
ಇನ್ನು ಪತ್ರಕರ್ತರ ಅನುಕೂಲಕ್ಕಾಗಿ ವಾರ್ತಾ ಇಲಾಖೆ ವಾಹನ ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು. ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿಯೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿದ್ದಾರೆ.












Click it and Unblock the Notifications