Government Employee; ಸಿಎಂಗೆ ಸರ್ಕಾರಿ ನೌಕರರ ಪತ್ರ, ಬೇಡಿಕೆ ಏನು?
ಬೆಂಗಳೂರು, ಮೇ 09: ಕರ್ನಾಟಕದ ಸರ್ಕಾರಿ ನೌಕರರು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ಬೇಡಿಕೆಯೊಂದನ್ನು ಇಡಲಾಗಿದ್ದು, ಸರ್ಕಾರ ಇನ್ನೂ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಪತ್ರವನ್ನು ಬರೆದಿದ್ದಾರೆ. ಪತ್ರ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ರಾಜ್ಯದ ಸರ್ಕಾರಿ ಕಛೇರಿ ಕೆಲಸದ ವೇಳೆಯನ್ನು ಮಾರ್ಪಾಡು ಮಾಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಪತ್ರದಲ್ಲಿನ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ವರ್ಷ ಬಿಸಿಲಿನ ತಾಪಮಾನ ತೀವ್ರತರವಾಗಿರುತ್ತದೆ. ರಾಜ್ಯದ ಬೆಳಗಾವಿ ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳಿಗೆ ಸರ್ಕಾರವು ಈ ಹಿಂದೆ ಸರ್ಕಾರಿ ಕಛೇರಿ ಕೆಲಸದ ವೇಳೆಯನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ನಿಗದಿಪಡಿಸಿತ್ತು.
ಪ್ರಸ್ತುತ ರಾಜ್ಯದಲ್ಲಿ ಮೇಲ್ಕಂಡ ವಿಭಾಗದ ಜಿಲ್ಲೆಗಳೂ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಿಸಿಲಿನ ತಾಪಮಾನ ಬೆಳಗ್ಗೆ 9 ಗಂಟೆಗೆ ತೀವ್ರತರವಾಗಿ 40-44 ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ.
ಸರ್ಕಾರಿ ನೌಕರರು ಕಛೇರಿಗೆ ತೆರಳಲು ಮತ್ತು ಸಾರ್ವಜನಿಕರೂ ಸಹ ಸರ್ಕಾರಿ ಕಛೇರಿಗೆ ಬರಲು ಕಷ್ಟಸಾಧ್ಯವಾಗುತ್ತಿರುವುದರಿಂದ ಬಿಸಿಲಿನ ತಾಪಮಾನ ಕಡಿಮೆಯಾಗುವವರೆಗೆ ಸರ್ಕಾರಿ ಕಛೇರಿಗಳ ಕೆಲಸದ ವೇಳೆಯನ್ನು ಮಾರ್ಪಡು ಮಾಡುವಂತೆ ರಾಜ್ಯದ ನೌಕರರು ವಿನಂತಿಸಿರುತ್ತಾರೆ.
ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಗರಿಷ್ಠ ತಾಪಮಾನದ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ತಾಪಮಾನ ಕಡಿಮೆ ಆಗುವವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಕಛೇರಿ ಕೆಲಸದ ವೇಳೆಯನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ಗಂಟೆಯವರೆಗೆ ನಿಗದಿಪಡಿಸಿ ಆದೇಶ ಹೊರಡಿಸಲು ತಮ್ಮಲ್ಲಿ ಕೋರಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಬಿಸಿಲಿಗೆ ಜನರು ಹೈರಾಣ: ಈ ಬಾರಿಯ ಬೇಸಿಗೆಗೆ ಜನರು ಹೈರಾಣಾಗಿ ಹೋಗಿದ್ದಾರೆ. ಒಂದು ಕಡೆ ಬಿಸಿಲು, ಮತ್ತೊಂದು ಕಡೆ ಕುಡಿಯುವ ನೀರಿನ ಕೊರತೆ. ವಿವಿಧ ಜಿಲ್ಲೆಗಳಲ್ಲಿ ಬಿಸಿಗಾಳಿಯೂ ಸಹ ಬೀಸುತ್ತಿದ್ದು, ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯ ತನಕ ಮನೆಯಿಂದ ಹೊರ ಬರುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಎಂದು ಜನರಿಗೆ ಸಲಹೆಯನ್ನು ಸಹ ನೀಡಲಾಗಿದೆ.
ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಎಂಡಿಸಿ) ಬುಧವಾರ ನೀಡಿರುವ ಮುನ್ಸೂಚನೆ ಪ್ರಕಾರ ಗರಿಷ್ಠ ತಾಪಮಾನ 8/5/2024 ರಿಂದ 16/5/2024ರ ತನಕ ಹೆಚ್ಚಿರುತ್ತದೆ.
ದಿನಾಂಕ 11/05/2024ರ ತನಕ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸುಮಾರು 38-43 ಡಿಗ್ರಿ ಸೆಲ್ಸಿಯಸ್ ಇರಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸುಮಾರು 33 ರಿಂದ 38 ಡಿಗ್ರಿ ಸೆಲ್ಸಿಯಸ್, ಮಲೆನಾಡು ಜಿಲ್ಲೆಗಳಲ್ಲಿ 30 ರಿಂದ 38 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಈ ಬಾರಿ ಬಿಸಿಲಿನ ಹಿನ್ನಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಅಂಗನವಾಡಿಗಳ ಸಮಯವನ್ನು ಪರಿಷ್ಕರಣೆ ಮಾಡಲಾಗಿತ್ತು. ಅಲ್ಲದೇ ಪ್ರತಿ ಸಲ ಬೇಸಿಗೆಯಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರಿ ಕಛೇರಿಗಳ ಸಮಯವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಮಲೆನಾಡು, ಕರಾವಳಿ, ಉದ್ಯಾನ ನಗರಿ ಬೆಂಗಳೂರಿನಲ್ಲಿ ಉಷ್ಣಾಂಶ ಏರಿಕೆಯಾಗಿದ್ದು, ಬಿಸಿಲಿನಿಂದ ಜನರು ಕಂಗಾಲಾಗಿದ್ದಾರೆ.
ಈ ವಾರದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಆರಂಭವಾಗಿದೆ. ಆದರೆ ಬಿಸಿಲಿನ ಝಳ ಮಾತ್ರ ಕಡಿಮೆಯಾಗಿಲ್ಲ. ಬೆಂಗಳೂರು ನಗರದಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆಯಾಗಿದೆ. ಆದರೆ ಗುರುವಾರ ಬೆಳಗ್ಗೆ ಬಿಸಿಲು ಜೋರಾಗಿದೆ. ಆದ್ದರಿಂದ ಸರ್ಕಾರಿ ಕಛೇರಿಗಳ ಸಮಯ ಪರಿಷ್ಕರಣೆ ಕುರಿತು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯಲಾಗಿದೆ.












Click it and Unblock the Notifications