Government Employees: ನಗದು ರೂಪದಲ್ಲಿ ತುಟ್ಟಿಭತ್ಯೆ ಬಿಡುಗಡೆ : ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ಮನವಿ ಏನು?
ಬೆಂಗಳೂರು, ಅಕ್ಟೋಬರ್ 07: ಕೆಲ ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನ (ಡಿಎ) 3 ಶೇಕಡಾ ಹೆಚ್ಚಳದ ಘೋಷಣೆಗೆ ಬೆನ್ನಲ್ಲೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಹೆಚ್ಚಳದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರವೂ ತನ್ನ ನೌಕರರಿಗೆ ಡಿಎ ಹೆಚ್ಚಳ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರ ತುಟ್ಟಿಭತ್ಯೆ ನೀಡಿದ ನಂತರ ರಾಜ್ಯ ಸರ್ಕಾರವೂ ತನ್ನ ನೌಕರರಿಗೆ ತುಟ್ಟಿಭತ್ಯೆ ನೀಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅಲ್ಲದೇ ಈಗಾಗಲೇ ಕೇಂದ್ರ ಸರ್ಕಾರವು ಬುಧವಾರ ಸಂಜೆ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಮಾಡಿದ್ದು, ಶೀಘ್ರದಲ್ಲಿಯೇ ರಾಜ್ಯ ಸರ್ಕಾರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈ ನಡುವೆ ತುಟ್ಟಿಭತ್ಯೆ ಬಿಡುಗಡೆ ಕುರಿತು ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ಸಂಘವೂ ವಿಶೇಷ ಮನವಿ ಮಾಡಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿ:01-07-2025ರಿಂದ ಅನ್ವಯವಾಗುವಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘವೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿದೆ. ಸೂಚಿತ ವಿಷಯದನ್ವಯ ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಕರ್ನಾಟಕ ರಾಜ್ಯ ಸರ್ಕಾರವು ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವುದು ಸಂಪ್ರದಾಯವಾಗಿರುತ್ತದೆ.
ಪ್ರಸ್ತುತ ಕೇಂದ್ರ ಸರ್ಕಾರವು ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಉಲ್ಲೇಖಿತ ಆದೇಶದಲ್ಲಿ ದಿನಾಂಕ: 01-07-2025ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 3%ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಿದೆ.(ಪ್ರತಿ ಲಗತ್ತಿಸಿದೆ) ಆದ್ದರಿಂದ, ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೂ ದಿನಾಂಕ: 01-07-2025 ರಿಂದ ಅನ್ವಯವಾಗುವಂತೆ ಶೇ. 3%ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ನೀಡಿ ಆದೇಶ ಹೊರಡಿಸಲು ಕೋರಿದೆ.
ಇನ್ನೂ ಹೆಚ್. ಆರ್. ಎಂ. ಎಸ್ - 2 ತಂತ್ರಾಂಶದಲ್ಲಿ ವೇತನ ಸೆಳೆಯುವ ನೌಕರರು ಹಬ್ಬದ ಮುಂಗಡ ಪಡೆಯಲು ಹಾಗೂ ಗಳಿಕೆ ರಜೆಯ ನಗಧೀಕರಣಕ್ಕಾಗಿ ESS ನ ಅಪ್ಲಿಕೇಶನ್ ಮೂಲಕವೇ ಅರ್ಜಿ ಸಲ್ಲಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.












Click it and Unblock the Notifications