Government Employee: ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಬಗ್ಗೆ ಅಪ್‌ಡೇಟ್ ಕೊಟ್ಟ ಸಿದ್ದರಾಮಯ್ಯ
ಬೆಳಗಾವಿ, ಡಿಸೆಂಬರ್ 16: ಕರ್ನಾಟಕದ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯ ಕುರಿತು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯಾಗಿದೆ. ವಿಧಾನಸಭೆ ಕಲಾಪದಲ್ಲಿ ಈ ಕುರಿತ ಚರ್ಚೆಗೆ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರವನ್ನು ನೀಡಿದ್ದಾರೆ. ತರೀಕೆರೆ ಕ್ಷೇತ್ರದ ಶಾಸಕರಾದ ಶ್ರೀನಿವಾಸ ಜಿ. ಹೆಚ್. ಸರ್ಕಾರಿ ನೌಕರರ ಬೇಡಿಕೆಯ ಕುರಿತು ಸರ್ಕಾರದ ಗಮನ ಸೆಳೆದಿದ್ದರು. ಮುಖ್ಯಮಂತ್ರಿಗಳು ಈ ಕುರಿತು ಲಿಖಿತವಾಗಿ ಉತ್ತರವನ್ನು ಸಹ ಕೊಟ್ಟಿದ್ದಾರೆ.
7ನೇ ವೇತನ ಆಯೋಗದ ವರದಿ ಜಾರಿ ಬಳಿಕ ಸರ್ಕಾರಿ ನೌಕರರ ಮತ್ತೊಂದು ಪ್ರಮುಖ ಬೇಡಿಕೆ ಹಳೆ ಪಿಂಚಣಿ ಯೋಜನೆ ಮರು ಸ್ಥಾಪನೆ. ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂದು ನೌಕರರು ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ. ಈ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆದಿದೆ.

ಶಾಸಕ ಶ್ರೀನಿವಾಸ ಜಿ. ಹೆಚ್. 1.04.2006 ರಿಂದ ಸರ್ಕಾರಿ ಸೇವೆಗೆ ಸೇರಿರುವ ನೌಕರರಿಗೆ ಹಾಗೂ ಅನುದಾನಿತ ಮತ್ತು ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರವು ರಚನೆ ಮಾಡಿರುವ ಸಮಿತಿಯು ಈವರೆಗೆ ಎಷ್ಟು ಸಭೆಗಳನ್ನು ನಡೆಸಿದೆ. ಸದರಿ ಸಮಿತಿಯು ಯಾವಾಗ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ? ಎಂದು ಪ್ರಶ್ನಿಸಿದ್ದರು. ಸದರಿ ಸಮಿತಿಗೆ ವರದಿಯನ್ನು ನೀಡಲು ಯಾವ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ? ಎಂದು ಹೇಳಿದ್ದರು.
ಸಿದ್ದರಾಮಯ್ಯ ಉತ್ತರ: ಮುಖ್ಯಮಂತ್ರಿಗಳು ತಮ್ಮ ಉತ್ತರದಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸಲ ಈಗಾಗಲೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ 11/12/2018ರ ಮತ್ತು ದಿನಾಂಕ 1/3/2023ರ ಸರ್ಕಾರಿ ಆದೇಶಗಳನ್ವಯ ರಚಿಸಲಾಗಿರುವ ಸಮಿತಿಯನ್ನು ದಿನಾಂಕ 16/8/2024ರಲ್ಲಿ ಪುನರ್ ರಚಿಸಿ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಸದರಿ ಸಮಿತಿಯು ಈಗಾಗಲೇ ಎರಡು ಸಭೆಗಳನ್ನು ನಡೆಸಿದೆ. ಸದರಿ ಸಮಿತಿಗೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿರುವುದಿಲ್ಲ ಎಂದು ಮುಖ್ಯಮಂತ್ರಿಗಳು ಉತ್ತರದಲ್ಲಿ ತಿಳಿಸಿದ್ದಾರೆ.
ಅಲ್ಲದೇ ಶಾಸಕರು ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸುವುದರಿಂದ ಸರ್ಕಾರಿ/ ಅರೆ ಸರ್ಕಾರಿ ನೌಕರರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸಿದಂತಾಗುತ್ತದೆ ಹಾಗೂ ವಾರ್ಷಿಕವಾಗಿ ಸರ್ಕಾರಕ್ಕೆ ಸುಮಾರು 2500 ಕೋಟಿಗೂ ಹೆಚ್ಚು ಹಣ ಉಳಿತಾಯವಾಗುತ್ತದೆ ಎಂಬ ಅಂಶ ಸರ್ಕಾರದ ಗಮನಕ್ಕೆ ಬಂದಿದೆಯೇ?
ಎನ್‌ಪಿಎಸ್ ವ್ಯವಸ್ಥೆಯಲ್ಲಿ ಸರ್ಕಾರವು ಪಾವತಿಸುವ ವಂತಿಗೆ ಮೊತ್ತವು ನೌಕರರ ಸೇವಾವಧಿಯಲ್ಲಿ ಹಚ್ಚಿದ್ದು, ನಿವೃತ್ತಿಯ ಜೀವಿತಾವಧಿ ಪರಿಗಣಿಸಿದರೆ, ದೂರಗಾಮಿ ಆರ್ಥಿಕ ದೃಷ್ಟಿಯಿಂದಲೂ ಎನ್‌ಪಿಎಸ್ ಯೋಜನೆ ಸರ್ಕಾರಕ್ಕೆ, ಹೊರೆಯಾಗುವುದು ನಿಜವಲ್ಲವೇ? ಎಂದು ಪ್ರಶ್ನಿಸಿದ್ದರು.
ಕರ್ನಾಟಕದ ಸರ್ಕಾರಿ ನೌಕರರು, ನೌಕರರ ಸಂಘಗಳು ರಾಜ್ಯ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಮುಂದೆಯೂ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸುವ ಬೇಡಿಕೆ ಸಲ್ಲಿಸಿದ್ದವು.
ಆದರೆ ಈ ಕುರಿತು ತೀರ್ಮಾನ ಕೈಗೊಳ್ಳಲು ಸರ್ಕಾರ ಈಗಾಗಲೇ ಸಮಿತಿ ರಚನೆ ಮಾಡಿರುವುದರಿಂದ ವೇತನ ಆಯೋಗ ಈ ಕುರಿತು ನಿರ್ಧಾರ ಕೈಗೊಳ್ಳುವ ಆಯ್ಕೆಯನ್ನು ಆರ್ಥಿಕ ಇಲಾಖೆಗೆ ನೀಡಿತ್ತು. ಆದಷ್ಟು ಬೇಗ ಈ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಮಾತ್ರ ಶಿಫಾರಸು ಮಾಡಿತ್ತು.












Click it and Unblock the Notifications