Government Employee; OPS ಯೋಜನೆ ಜಾರಿ, ನೌಕರರ ಗೊಂದಲಗಳು
ಬೆಂಗಳೂರು, ಫೆಬ್ರವರಿ 07: ಕರ್ನಾಟಕ ಸರ್ಕಾರ ದಿನಾಂಕ 01/04/2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು ಆದೇಶಿಸಿದೆ. ಈ ಮೂಲಕ ಎನ್‌ಪಿಎಸ್ ರದ್ದುಗೊಳಿಸಬೇಕು ಎಂಬ ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸಲಾಗಿದೆ.
ಆದರೆ ಈ ಆದೇಶದ ಅನ್ವಯ ರಾಜ್ಯದ 13,000 ಸರ್ಕಾರಿ ನೌಕರರು ಮಾತ್ರ ಹಳೆಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಸೇರುತ್ತಾರೆ. ರಾಜ್ಯದಲ್ಲಿ ಇನ್ನೂ 2.45 ಲಕ್ಷ ನೌಕರರು ಬಾಕಿ ಉಳಿಯುತ್ತಾರೆ. ಅವರನ್ನು ಸಹ ಒಪಿಎಸ್ ವ್ಯಾಪ್ತಿಗೆ ಸೇರಿಸಬೇಕು ಎಂದು ಬೇಡಿಕೆ ಇಡಲಾಗಿದೆ.

ಸರ್ಕಾರ ಒಪಿಎಸ್ ಯೋಜನೆ ಜಾರಿ, ಷರತ್ತುಗಳ ಕುರಿತು ಆದೇಶ ಹೊರಡಿಸಿದ ಮೇಲೆ ಸಹ 13,000 ಸರ್ಕಾರಿ ನೌಕರರಲ್ಲಿ ಹಲವು ಗೊಂದಲಗಳಿವೆ. ಆದ್ದರಿಂದ ಸರ್ಕಾರ ಇದನ್ನು ಬಗೆಹರಿಸಬೇಕು, ಉಳಿದ ಸರ್ಕಾರಿ ನೌಕರರನ್ನು ಒಪಿಎಸ್‌ಗೆ ಸೇರಿಸಿ ಬೇಗ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ನೌಕರರ ಗೊಂದಲಗಳೇನು?
* 2006ರ ಏಪ್ರಿಲ್ ಮುನ್ನ ಅಧಿಸೂಚನೆಯಾಗಿ ನಂತರ ನೇಮಕಗೊಂಡವರನ್ನು ಒಪಿಎಸ್ ವ್ಯಾಪ್ತಿಗೆ ತರಲಾಗಿದೆ. ಅವರಲ್ಲಿ ಕೆಲಗೊಂದಲ ಸೃಷ್ಟಿಯಾಗಿದ್ದು, ಈ ಕುರಿತು ಸರ್ಕಾರದ ಸ್ಪಷ್ಟನೆ ಕೇಳಲಾಗಿದೆ.
* ಅನುಕಂಪ ಆಧಾರದ ಮೇಲೆ ನೇಮಕಗೊಂಡ 2000 ಪ್ರಕರಣಗಳಿವೆ. ಸಿಂಧುತ್ವ ಪ್ರಮಾಣ ಪತ್ರ ಪಡೆಯುವುದು ಸೇರಿ ಬೇರೆ ಬೇರೆ ಕಾರಣಕ್ಕೆ ಅವರ ನೇಮಕಾತಿ ವಿಳಂಬವಾಗಿದೆ. ಇಂತಹ ನೌಕರರನ್ನು ಒಪಿಎಸ್ ಸೇರ್ಪಡೆ ಬಗ್ಗೆ ಸ್ಪಷ್ಟತೆ ಇಲ್ಲ.
* ಒಂದು ಇಲಾಖೆಗೆ ರಾಜೀನಾಮೆ ಕೊಟ್ಟು ಇನ್ನೊಂದು ಸರ್ಕಾರಿ ಉದ್ಯೋಗಕ್ಕೆ ಸೇರಿದವರು ಸಾಕಷ್ಟಿದ್ದಾರೆ. ಅಂತಹವರು ಒಪಿಎಸ್‌ಗೆ ಬರುತ್ತಾರಾ ಎಂಬುದು ಗೊಂದಲವಾಗಿದೆ.
* ಶಾಲಾ-ಕಾಲೇಜು ಸೇರಿ ಅನುದಾನಿತ ಸಂಸ್ಥೆಗಳಲ್ಲಿರುವ ನೌಕರರು ಒಪಿಎಸ್ ವ್ಯಾಪ್ತಿಗೆ ಬರುತ್ತಾರೋ ಇಲ್ಲವೋ ಎಂಬ ಸ್ಪಷ್ಟವಾದ ಮಾಹಿತಿ ಇಲ್ಲ.
* ಪದವಿ ಕಾಲೇಜುಗಳ ಕೆಲ ಉಪನ್ಯಾಸಕರು ಎನ್‌ಪಿಎಸ್ ಉತ್ತಮವಾಗಿದೆ ಎಂದು ಹೇಳುತ್ತಿದ್ದಾರೆ. ಅವರು ಆಗಸ್ಟ್ ಒಳಗೆ ಎನ್‌ಪಿಎಸ್ ಅಥವ ಒಪಿಎಸ್ ಎಂಬ ಆಯ್ಕೆ ಕುರಿತು ಅಭಿಪ್ರಾಯವನ್ನು ಕೊಡಬೇಕಾಗುತ್ತದೆ.
ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ಹೊಸ ಪಿಂಚಣಿ ಯೋಜನೆ (NPS) ನಿಂದ ಹಳೆ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಬೇಕು. ಒಂದು ಬಾರಿಗೆ ಮಾತ್ರ ಹಳೆ ಪಿಂಚಣಿ ಯೋಜನೆಗೆ ಒಳಪಡಲು ಅವಕಾಶವಿದೆ. ಅರ್ಜಿ ಸಲ್ಲಿಕೆ ಮಾಡದಿದ್ದರೆ ನೌಕರರು ಹೊಸ ಪಿಂಚಣಿ ಯೋಜನೆಯಲ್ಲಿಯೇ ಮುಂದುವರೆಯಲಿದ್ದಾರೆ.
ದಿನಾಂಕ 01/04/2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಹಲವು ನೌಕರರು ಸಹ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಗೆ ವಾಪಸ್ ತನ್ನಿ ಎಂದು ಆಗ್ರಹಿಸುತ್ತಿದ್ದರು. ಆಗ ಸರ್ಕಾರ ದಿನಾಂಕ 11/12/2023ರ ಮೊದಲು ನೇಮಕಾತಿ/ ನೇಮಕಾತಿಗಾಗಿ ಜಾಹೀರಾತು/ ಅಧಿಸೂಚಿಸಲಾದ ಹುದ್ದೆ ಅಥವಾ ರಿಕ್ತ ಸ್ಥಾನದ ಎದುರಾಗಿ ನೇಮಕಾತಿ ಹೊಂದಿ ದಿನಾಂಕ 01/01/2004ರಂದು ಅಥವಾ ತದನಂತರ ಸೇವೆಗೆ ಸೇರಿದ ನೌಕರರಿಗೆ ಹಿಂದಿನ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸಲು ಒಂದು ಬಾರಿಯ ಆಯ್ಕೆಯ ಅವಕಾಶವನ್ನು ಕಲ್ಪಿಸಿ, ಆದೇಶಿಸಿತ್ತು. ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಸಹ ಆದೇಶ ಹೊರಡಿಸಿದೆ.
ಕರ್ನಾಟಕದ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಮುಂದೆ ಸಹ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.












Click it and Unblock the Notifications