Government Employees: ಸರ್ಕಾರಿ ನೌಕರರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಅಪ್‌ಡೇಟ್
ಬೆಂಗಳೂರು, ಏಪ್ರಿಲ್. 22: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಆದೇಶಿಸಿದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳಲ್ಲಿ ಉತ್ತಿರ್ಣರಾಗಲು ಡಿಸೆಂಬರ್ 2024ರ ವರೆಗೂ ಸರ್ಕಾರ ಅವಧಿ ವಿಸ್ತರಿಸಿದೆ. ಈ ಬಗ್ಗೆ ಹೊಸ ಅಪ್‌ಡೇಟ್ ಸಿಕ್ಕಿದೆ.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗ ಕುರಿತು ಬಜೆಟ್ ಅಧಿವೇಶನದಲ್ಲಿಯೂ ಚರ್ಚೆಗಳು ನಡೆದಿವೆ. 50 ವರ್ಷಗಳ ವಯಸ್ಸಾಗಿರುವ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತಿರ್ಣರಾಗುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಇದರ ಬೆನ್ನಲ್ಲೇ ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷ ಸಿ ಎಸ್ ಷಡಾಕ್ಷರಿ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆಡಳಿತದ ಕಾರ್ಯದರ್ಶಿಯಾದ ಉಜ್ವಲ್ ಕುಮಾರ್ ಘೋಷ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳಲ್ಲಿ ಉತ್ತಿರ್ಣರಾಗಲು ಡಿಸೆಂಬರ್ 2024ರ ವರೆಗೂ ಸರ್ಕಾರವು ಅವಧಿ ವಿಸ್ತರಿಸಿದ್ದು, ಕೂಡಲೇ ಪರೀಕ್ಷೆ ಸ್ಲಾಟ್ ಗಳನ್ನು ಆರಂಭಿಸುವಂತೆ ಮನವಿ ಮಾಡಿದ್ದಾರೆ.
ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್ ಅವರು ನೌಕರರ ಸಂಘದ ರಾಜ್ಯಾದ್ಯಕ್ಷ ಸಿ ಎಸ್ ಷಡಾಕ್ಷರಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರವಾಗಿ ಸ್ಲಾಟ್ ಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಪ್ರಸ್ತುತ ಆಡಳಿತಕ್ಕೆ ಅನುಕೂಲವಾಗುವಂತೆ ಸಿಲಬಸ್ ಕೂಡ ಬದಲಾವಣೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ತಿಮ್ಮೇಗೌಡ, ಹಿರಿಯ ಉಪಾಧ್ಯಕ್ಷ ಎಂ ವಿ ರುದ್ರಪ್ಪ ಅವರು ಹಾಗೂ ಕಾರ್ಯದರ್ಶಿ ಸದಾನಂದ್ ಕೂಡ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷ ಸಿ ಎಸ್ ಷಡಾಕ್ಷರಿ ಅವರಿಗೆ ಸಾಥ್ ನೀಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ಅನ್ನು ರೂಪಿಸಲಾಗಿದೆ. ಈ ನಿಯಮಾವಳಿಗಳ ನಿಯಮ 1(3)ರಲ್ಲಿ ನಿರ್ಧಿಷ್ಟಪಡಿಸಿರುವ ಕೆಲವೊಂದು ಹುದ್ದೆಗಳನ್ನು ಹೊರತುಪಡಿಸಿ, 50 ವರ್ಷಗಳ ವಯಸ್ಸಾಗಿರುವ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಸರ್ಕಾರಿ ನೌಕರರು ಈ ಪರೀಕ್ಷೆ ಪಾಸು ಮಾಡುವುದು ಕಡ್ಡಾಯ.
ಈ ಮೊದಲು ದಿನಾಂಕ 31/12/2022ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಂಡು ಕಡ್ಡಾಯವಾಗಿ ಉತ್ತೀರ್ಣರಾಗಬೇಕು ಎಂದು ಆದೇಶಿಸಲಾಗಿತ್ತು. ಬಳಿಕ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಯಂತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ದಿನಾಂಕವನ್ನು ಮುಂದೂಡಲಾಗಿತ್ತು. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಗದಿಪಡಿಸಿದ್ದ ಕಾಲಾವಧಿಯನ್ನು 31/12/2024 ರವರೆಗೆ ವಿಸ್ತರಿಸಿ ದಿನಾಂಕ 07/02/2024ರಂದು ಕರಡು ನಿಯಮಗಳನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಇನ್ನು, ಸದರಿ ಅವಧಿಯೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಇದ್ದಲ್ಲಿ ವಾರ್ಷಿಕ ಬಡ್ತಿ ಗಳಿಸಲು ಅರ್ಹನಾಗತಕ್ಕದ್ದಲ್ಲ ಎಂದು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಇದರ ಜೊತೆಗೆ ಈ ಹಿಂದೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೇರ್ಗಡೆ ಹೊಂದಿದ ಅಧಿಕಾರಿ ನೌಕರರಿಗೆ ರೂ. 5000 ಪ್ರೋತ್ಸಾಹ ಧನವನ್ನು ನೀಡಲಾಗುತ್ತು. ಆದರೆ, ದಿನಾಂಕ 17/04/2021 ನಂತರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಯಾವುದೇ ವೃಂದದ ಅಧಿಕಾರಿ/ ನೌಕರರಿಗೆ ಪ್ರೋತ್ಸಾಹ ಧನ ನೀಡಲು ಆದೇಶ ಹೊರಡಿಸಿಲ್ಲ ಎಂದು ಮುಖ್ಯಮಂತ್ರಿಗಳು ಸದನದಲ್ಲಿಯೇ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications