Government Employee; ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಸ್ಪಷ್ಟನೆಗಳು
ಬೆಂಗಳೂರು, ಫೆಬ್ರವರಿ 23; ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಆದರೆ ಈ ಬಗ್ಗೆ ಹಲವು ಗೊಂದಲಗಳಿವೆ. ಈ ಕುರಿತು ಬಜೆಟ್ ಅಧಿವೇಶನದಲ್ಲಿಯೂ ಚರ್ಚೆಗಳು ನಡೆದಿವೆ.
ವಿಧಾನ ಪರಿಷತ್ ಕಲಾಪದಲ್ಲಿ ಕುಶಾಲಪ್ಪ ಎಂ. ಪಿ. ಕೇಳಿದ ಪ್ರಶ್ನೆಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೇರ್ಗಡೆ ಹೊಂದುವುದು ಕಡ್ಡಾಯಗೊಳಿಸಲಾಗಿದೆಯೇ?, ದಿನಾಂಕ 31/12/2023ರ ಒಳಗಾಗಿ ತೇರ್ಗಡೆಯನ್ನು ಹೊಂದದೇ ಇರುವ ಅಧಿಕಾರಿ/ ನೌಕರರಿಗೆ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯಲಾಗುವುದೇ? ಎಂದು ಪ್ರಶ್ನೆ ಮಾಡಿದ್ದರು.

ಮುಖ್ಯಮಂತ್ರಿಗಳು ಉತ್ತರದಲ್ಲಿ, ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012 ಅನ್ನು ರೂಪಿಸಲಾಗಿದೆ.
ಈ ನಿಯಮಾವಳಿಗಳ ನಿಯಮ 1(3)ರಲ್ಲಿ ನಿರ್ಧಿಷ್ಟಪಡಿಸಿರುವ ಕೆಲವೊಂದು ಹುದ್ದೆಗಳನ್ನು ಹೊರತುಪಡಿಸಿ ಹಾಗೂ ನಿಯಮ 3ರನ್ವಯ ಈ ನಿಯಮಗಳು ಪ್ರಾರಂಭವಾದ ದಿನಾಂಕದಂದು 50 ವರ್ಷಗಳ ವಯಸ್ಸಾಗಿರುವ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಪಾಸು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಈ ಪರೀಕ್ಷೆಯು ಸರ್ಕಾರಿ ನೌಕರರ ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿಗೆ ಒಂದು ಅರ್ಹತಾ ಮಾನದಂಡವಾಗಿರುತ್ತದೆ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಗಧಿಪಡಿಸಲಾಗಿದ್ದ ಕಾಲಾವಧಿಯನ್ನು ಅಧಿಸೂಚನೆ ದಿನಾಂಕ 17/02/2023ರನ್ವಯ ದಿನಾಂಕ 31/12/2023ರವರೆಗೆ ವಿಸ್ತರಿಸಲಾಗಿತ್ತು. ಸದರಿ ಅವಧಿಯೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ವಾರ್ಷಿಕ ಬಡ್ತಿ ಗಳಿಸಲು ಅರ್ಹನಾಗತಕ್ಕದ್ದಲ್ಲ ಎಂದು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಮತ್ತೊಂದು ಪ್ರಶ್ನೆಯಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಲು ಅವಧಿಯನ್ನು ವಿಸ್ತರಿಸಲಾಗಿದೆಯೇ? ಎಂದು ಪ್ರಶ್ನಿಸಲಾಗಿತ್ತು. ಉತ್ತರದಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಗದಿಪಡಿಸಿದ್ದ ಕಾಲಾವಧಿಯನ್ನು 31/12/2024ರವರೆಗೆ ವಿಸ್ತರಿಸಿ ದಿನಾಂಕ 07/02/2024ರಂದು ಕರಡು ನಿಯಮಗಳನ್ನು ಪ್ರಕಟಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರೋತ್ಸಾಹ ಧನದ ಮಾಹಿತಿ: ದಿನಾಂಕ 07/02/2024ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೇರ್ಗಡೆ ಹೊಂದಿದ ಅಧಿಕಾರಿ ನೌಕರರಿಗೆ ರೂ. 5000 ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದ್ದು, ತದನಂತರದ ದಿನಾಂಕದಲ್ಲಿ ತೇರ್ಗಡೆ ಹೊಂದಿದ ಅಧಿಕಾರಿ/ ನೌಕರರಿಗೆ ಪ್ರೋತ್ಸಾಹ ಧನವನ್ನು ನೀಡಲು ಆದೇಶ ಹೊರಡಿಸಲಾಗಿದೆಯೇ? ಎಂದು ಸಹ ಪ್ರಶ್ನಿಸಲಾಗಿತ್ತು. ಮುಖ್ಯಮಂತ್ರಿಗಳು ಉತ್ತರದಲ್ಲಿ ದಿನಾಂಕ 17/04/20210 ನಂತರದಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಯಾವುದೇ ವೃಂದದ ಅಧಿಕಾರಿ/ ನೌಕರರಿಗೆ ಪ್ರೋತ್ಸಾಹ ಧನ ನೀಡಲು ಆದೇಶ ಹೊರಡಿಸಿರುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಗ್ರೂಪ್ ಡಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಲ್ಲಿ ರೂ. 5 ಸಾವಿರ ಪ್ರೋತ್ಸಾಹ ಧನವನ್ನು ನೀಡಲಾಗುವುದೇ?. ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡುವುದು ಎಂದು ಮತ್ತೊಂದು ಪ್ರಶ್ನೆಯನ್ನು ಕೇಳಲಾಗಿತ್ತು. ಉತ್ತರದಲ್ಲಿ ಮುಖ್ಯಮಂತ್ರಿಗಳು ದಿನಾಂಕ 22/3/20212ರಂದು ಸರ್ಕಾರಿ ಸೇವೆಯಲ್ಲಿದ್ದ ಗ್ರೂಪ್-ಡಿ ನೌಕರರು ಸೇರಿದಂತೆ ದಿನಾಂಕ 17/4/2021ರೊಳಗಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿದ ಎಲ್ಲಾ ವೃಂದದ ಅಧಿಕಾರಿ/ ನೌಕರರಿಗೆ ರೂ. 5000 ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications