Government employee; ಕಂಪ್ಯೂಟರ್ ಪರೀಕ್ಷೆ, ಇಂದು ಮಹತ್ವದ ಆದೇಶ
ಬೆಂಗಳೂರು, ಜನವರಿ 31: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ಬೇಡಿಕೆಯಂತೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳುವುದು, ಉತ್ತೀರ್ಣರಾಗುವ ಕುರಿತು ಬುಧವಾರ ಮಹತ್ವದ ಆದೇಶ ಹೊರಡಿಸುವ ನಿರೀಕ್ಷೆ ಇದೆ.
ಸರ್ಕಾರ ಆಡಳಿತವನ್ನು ಚುರುಕುಗೊಳಿಸುವ ಸಲುವಾಗಿ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸಿದೆ. ಆದ್ದರಿಂದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಂಡು, ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.

ಹೊಸದಾಗಿ ಸರ್ಕಾರಿ ಕೆಲಸಕ್ಕೆ ಸೇರಿದ ನೌಕರ/ ಸಿಬ್ಬಂದಿಗಳು ಸಹ ತಮ್ಮ ಪರಿವೀಕ್ಷಣಾ ಅವಧಿಯೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಪರೀಕ್ಷೆಯಲ್ಲಿ ಉತ್ತೀರ್ಣರಾಗದವರು ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಇತ್ಯಾದಿಗಳನ್ನು ಪಡೆಯಲು ಅನರ್ಹರಾಗುತ್ತಾರೆ ಎಂದು ಈಗಾಗಲೇ ಸರ್ಕಾರ ಹೇಳಿದೆ.
ಮನವಿ ಮಾಡಿರುವ ಸರ್ಕಾರಿ ನೌಕರರು: ಈ ಹಿಂದೆ ಸರ್ಕಾರ ಸರ್ಕಾರಿ ನೌಕರರ ಬೇಡಿಕೆಯಂತೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳಲು, ಉತ್ತೀರ್ಣರಾಗಲು ಎರಡು ಬಾರಿ ಕಾಲಾವಧಿ ವಿಸ್ತರಣೆ ಮಾಡಿತ್ತು. ಈಗ ಪುನಃ ನೌಕರರು ಕಾಲಾವಧಿ ವಿಸ್ತರಣೆಗೆ ಬೇಡಿಕೆ ಇಟ್ಟಿದ್ದಾರೆ.
ಈ ಹಿಂದಿನ ಸರ್ಕಾರಿ ಆದೇಶದಲ್ಲಿ ದಿನಾಂಕ 31/12/2023ರವರೆಗೆ ಪರೀಕ್ಷೆ ತೆಗೆದುಕೊಳ್ಳಲು ಮತ್ತು ಉತ್ತೀರ್ಣರಾಗಲು ಸಮಯಾವಕಾಶ ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಇನ್ನೂ ಸಹ ಸಾವಿರಾರು ನೌಕರರು ಪರೀಕ್ಷೆ ತೆಗೆದುಕೊಳ್ಳುವುದು, ಉತ್ತೀರ್ಣರಾಗುವುದು ಬಾಕಿ ಇದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಹಾಗೂ ಸಂಘದ ಪದಾಧಿಕಾರಿಗಳು ಜನವರಿ 9ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರನ್ನು ಭೇಟಿ ಮಾಡಿದ್ದರು.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳುವ, ಉತ್ತೀರ್ಣರಾಗುವ ದಿನಾಂಕವನ್ನು 31/12/2024ರ ತನಕ ವಿಸ್ತರಣೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ರ ಬಜೆಟ್ ತಯಾರಿಯ ನಡುವೆಯೂ ಸರ್ಕಾರಿ ನೌಕರರ ಬೇಡಿಕೆಗೆ ಸ್ಪಂದಿಸಿದ್ದಾರೆ. ದಿನಾಂಕ ಪ್ರಸ್ತಾವನೆ ಕಡತಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಸರ್ಕಾರಿ ಆದೇಶ ಬುಧವಾರ ಪ್ರಕಟವಾಗುವ ನಿರೀಕ್ಷೆ ಇದೆ.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಕುರಿತು 2023ರ ಜೂನ್‌ನಲ್ಲಿ ಸುತ್ತೋಲೆಯೊಂದು ಪ್ರಕಟವಾಗಿತ್ತು. ಅದರ ಪ್ರಕಾರ ಸುಮಾರು 2,00,000 ಅಧಿಕಾರಿಗಳು ಮತ್ತು ನೌಕರರುಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳಿತ್ತು. ಆದ್ದರಿಂದ ದಿನಾಂಕ 31/12/2023ರವರೆಗೆ ಸಮಯಾವಕಾಶವನ್ನು ವಿಸ್ತರಿಸಿ, ಆದೇಶ ಹೊರಡಿಸಿತ್ತು.
ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಮತ್ತು ಈಗಾಗಲೇ ಪರೀಕ್ಷೆಯನ್ನು ತೆಗೆದುಕೊಂಡು ಅನುತ್ತೀರ್ಣರಾದವರು ಮತ್ತೆ ನೋಂದಣಿ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಸರ್ಕಾರ ಹೇಳಿತ್ತು.
ನೌಕರರ ಬೇಡಿಕೆಯಂತೆ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಲು ಕಾಲಾವಧಿಯನ್ನು ದಿನಾಂಕ 31/12/2023ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ ಈಗ ಸರ್ಕಾರಿ ನೌಕರರ ಸಂಘ ಮತ್ತೆ ದಿನಾಂಕ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದ್ದು, ಈ ಕುರಿತು ಆದೇಶ ಪ್ರಕಟವಾಗಬೇಕಿದೆ.
ಕರ್ನಾಟಕ ಸರ್ಕಾರ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳುವ ಕುರಿತು ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ಅನ್ನು ಅಧಿಸೂಚನೆ ಸಂಖ್ಯೆ: ಸಿಆಸುಇ 43 ಸೇವನೆ 2008 ದಿನಾಂಕ 7/3/2012ರಲ್ಲಿ ರೂಪಿಸಿದೆ.
ಸದರಿ ನಿಯಮಗಳು ದಿನಾಂಕ 22/3/2012ರಿಂದ ಜಾರಿಗೆ ಬಂದಿರುತ್ತದೆ. ಕಾಲ ಕಾಲಕ್ಕೆ ಈ ಪರೀಕ್ಷೆಗಳ ಕುರಿತು ಇಲಾಖೆ ಸ್ಪಷ್ಟನೆಗಳನ್ನು ನೀಡುತ್ತಿದೆ. ಪರೀಕ್ಷೆ ತೆಗೆದುಕೊಳ್ಳುವ, ಉತ್ತೀರ್ಣರಾಗುವ ದಿನಾಂಕವನ್ನು ವಿಸ್ತರಣೆ ಮಾಡುತ್ತಿದೆ.












Click it and Unblock the Notifications