Cabinet Meeting: ಕಸ ಗುಡಿಸುವ ಯಂತ್ರಕ್ಕೆ 613 ಕೋಟಿ ಬಾಡಿಗೆ : ರಾಜ್ಯ ಸರ್ಕಾರದಿಂದ ವಿವಾದಿತ ನಿರ್ಧಾರ
ಬೆಂಗಳೂರು, ನವೆಂಬರ್ 13: ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಬಗೆಹರಿಯದಂತಾಗಿದೆ. ಈ ಮಧ್ಯೆ ಕರ್ನಾಟಕ ಸರ್ಕಾರ ವಿವಾದಾತ್ಮಕ ನಿರ್ಧಾರವೊಂದನ್ನ ಕೈಗೊಂಡಿದ್ದು, 613 ಕೋಟಿಗೆ ಕಸ ಗುಡಿಸುವ ಯಂತ್ರಗಳನ್ನ ಬಾಡಿಗೆ ಪಡೆಯಲು ನಿರ್ಧಾರ ಮಾಡಿದೆ. ಈ ಮೂಲಕ ಸಾರ್ವಜನಿಕರ ತೆರಿಗೆ ದುಡ್ಡು ಪೋಲು ಮಾಡಲು ದಾರಿ ಸಿಕ್ಕಂತಾಗಿದೆ ಎಂಬ ಚರ್ಚೆ ಶುರುವಾಗಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಬಿಎ ವ್ಯಾಪ್ತಿಯ ಕಸ ಗುಡಿಸುವ ಯಂತ್ರಕ್ಕೆ ನೂರಾರು ಕೋಟಿ ಬಾಡಿಗೆ ನೀಡಲು ಸರ್ಕಾರ ಮುಂದಾಗಿದ್ದು, 7 ವರ್ಷದ ಅವಧಿಗೆ 46 ಕಸಗುಡಿಸುವ ಯಂತ್ರ ಬಾಡಿಗೆ ಪಡೆಯಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಭೆ ಬಳಿಕ ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ, ಐದು ನಗರ ಪಾಲಿಕೆಗಳ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಸ್ವಚ್ಛತೆಗಾಗಿ ಯಾಂತ್ರಿಕ ಕಸಗುಡಿಸುವಿಕೆ ಯಂತ್ರಗಳನ್ನು (Mechanical Sweeping Machine) ಬಾಡಿಗೆ ಆಧಾರದಲ್ಲಿ 84 ತಿಂಗಳುಗಳ (07 ವರ್ಷ) ಅವಧಿಗೆ ಪಡೆಯಲು ಉದ್ದೇಶಿಸಿರುವ ಯೋಜನೆಯ ಅಂದಾಜು ಮೊತ್ತವನ್ನು ಆಯಾ ಪಾಲಿಕೆಗಳಿಂದ ಮಿತಿಗೊಳಿಸಲಾದ ಒಟ್ಟು ಮೊತ್ತ ರೂ.613.25 (ಜಿಎಸ್‌ಟಿ ಒಳಗೊಂಡAತೆ) ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬೆಳಗಾವಿಯಲ್ಲಿ ಡಿಸೆಂಬರ್ 8 ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದರು. ಮೇಕೆದಾಟು ಯೋಜನೆಯಲ್ಲಿ ಕರ್ನಾಟಕದ ಹೋರಾಟಕ್ಕೆ ಗೆಲುವು ದೊರೆತಿದೆ. ಯೋಜನೆಯ ಬಗ್ಗೆ ಕಾರ್ಯಪ್ರವೃತ್ತರಾಗಲು ಹಸಿರುನಿಶಾನೆ ದೊರಕಿದ್ದು, ಈ ಹೋರಾಟದಲ್ಲಿ ಬೆಂಬಲವಾಗಿ ನಿಂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟ ಅಭಿನಂದಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಮೇಕೆದಾಟು ಯೋಜನೆಗೆ 7 ವರ್ಷದಿಂದ ಅಡ್ಡಗಾಲು ಹಾಕಿದ್ದ ತಮಿಳುನಾಡು, ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ವಜಾಗೊಳಿಸಿದೆ.ಮೇಕೆದಾಟು ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ. ಯಾವುದೇ ನಿರ್ಮಾಣ ಕಾರ್ಯ ಚಾಲನೆ ದೊರೆತಿರುವುದಿಲ್ಲ ಈ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗದಂತಹ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿರುವ ಕಾರಣ, ಸುಪ್ರೀಂಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿರುವುದಾಗಿ ಸಚಿವರು ತಿಳಿಸಿದರು.
ಸಚಿವ ಸಂಪುಟದ ಉಪಸಮಿತಿಗಳು ಆರು ತಿಂಗಳ ಅವಧಿ ಮೀರಿ ವರದಿಯನ್ನು ಸಲ್ಲಿಸಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ನಡೆದಿರುವ ಖರೀದಿಗಳ ಮೇಲೆ ನ್ಯಾ. ಮೈಕಲ್ ಡಿ.ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ವಿಚಾರಣಾ ಆಯೋಗದ ಮೇಲೆ ತೆಗೆದುಕೊಳ್ಳಲಾಗುವ ಕ್ರಮಗಳ ಮೇಲೆ ಮೇಲುಸ್ತುವಾರಿ ಮಾಡಲು ಹಾಗೂ ಉನ್ನತ ಮಟ್ಟದ ಸಮಿತಿಯ ವರದಿಗಳನ್ನು ಮಾಡಲು ಸೂಕ್ತ ಶಿಫಾರಸ್ಸುಗಳನ್ನು ಮಾಡುವ ಪಸಮಿತಿ, ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಪರಾಮರ್ಶಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡಲು ನೇಮಿಸಲಾಗಿರುವ ಸಮತಿ, ಬೆಂಗಳೂರು - ಮೈಸೂರು ಮೂಲಸೌಕರ್ಯ ಕಾರಿಡಾರ್ ಅನುಷ್ಠಾನದ ಕುರಿತು ಈವರೆಗೆ ಆಗಿರುವ ಪ್ರಗತಿ ಹಾಗೂ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಪರಾಮರ್ಶಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡಲು ಉಪಸಮಿತಿಗಳು ವರದಿಗಳನ್ನು ಆದಷ್ಟು ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ರಾಯಚೂರು ಜಿಲ್ಲೆ, ಮಾನ್ವಿ ತಾಲ್ಲೂಕಿನ ಮುದ್ಲಾಪುರ ಏತ ನೀರಾವರಿ ಯೋಜನೆಯ ಬಾಕಿ ಕೆಲಸಗಳು ಹಾಗೂ ಪುನರುಜ್ಜೀವನ ಕಾಮಗಾರಿಗಳನ್ನು ರೂ.21.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ರಾಯಚೂರು ಜಿಲ್ಲೆ, ಮಾನ್ವಿ ತಾಲ್ಲೂಕಿನ ದದ್ದಲ್ ಗ್ರಾಮದ ಹತ್ತಿರ (ಗೌರಮ್ಮ ಬಂಡಿ) ಏತ ನೀರಾವರಿ ಯೋಜನೆಯ ಬಾಕಿ ಕೆಲಸಗಳು ಹಾಗೂ ಪುನರುಜ್ಜೀವನ ಕಾಮಗಾರಿಗಳನ್ನು ರೂ.34.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ












Click it and Unblock the Notifications